Advertisement

Defamation Case: ಬಿಜೆಪಿ ಶಾಸಕ ಯತ್ನಾಳ್‌ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ

02:59 PM Oct 17, 2024 | Team Udayavani |

ಬೆಂಗಳೂರು: ಭಾರತೀಯ ಜನತಾ ಪಕ್ಷದ ಫೈಯರ್‌ ಬ್ರ್ಯಾಂಡ್‌ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾನನಷ್ಟ ಪ್ರಕರಣದ ವಿಚಾರಣೆಗೆ ಸತತವಾಗಿ ಗೈರು ಹಾಜರಾಗಿದ್ದರಿಂದ ವಿಶೇಷ ಕೋರ್ಟ್‌ ಬುಧವಾರ (ಅ.16) ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿದೆ.

Advertisement

ಕಾಂಗ್ರೆಸ್‌ ಮುಖಂಡ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವೇ ಇದೆ ಎಂಬ ಯತ್ನಾಳ್‌ ವಿವಾದಿತ ಹೇಳಿಕೆ ವಿರುದ್ಧ ತಬ್ಸಮ್‌ ರಾವ್‌ (ದಿನೇಶ್‌ ಗುಂಡೂರಾವ್‌ ಪತ್ನಿ) ಮಾನನಷ್ಟ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆಗೆ ಶಾಸಕ ಯತ್ನಾಳ್‌ ಗೈರು ಹಾಜರಾಗಿದ್ದರಿಂದ ವಿಶೇಷ ಕೋರ್ಟ್‌ ಜಡ್ಜ್‌ ಕೆಎನ್‌ ಶಿವಕುಮಾರ್‌ ಅವರು, ಅಕ್ಟೋಬರ್‌ 28ರಂದು ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ವಾರಂಟ್‌ ಜಾರಿಗೊಳಿಸಿ ಆದೇಶ ನೀಡಿದ್ದಾರೆ.

ಶಾಸಕ ಯತ್ನಾಳ್‌ ವಿವಾದಿತ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2024ರ ಸೆಪ್ಟೆಂಬರ್‌ ನಲ್ಲಿ, ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ದೊಡ್ಡ ನಾಯಕನೊಬ್ಬ 1,000 ಕೋಟಿ ಹಣ ಕೂಡಿಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಯತ್ನಾಳ್‌ ಬಾಂಬ್‌ ಸಿಡಿಸಿದ್ದರು.

ಆದರೆ ಯತ್ನಾಳ್‌ ಅದು ಯಾರು ಎಂಬುದನ್ನು ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದರು. ಮನೆಯಲ್ಲಿ ಕರೆನ್ಸಿ ನೋಟುಗಳನ್ನು ಎಣಿಸುವ ಯಂತ್ರ ಪತ್ತೆಯಾಗಿರುವ ಆ ಮಹಾನ್‌ ನಾಯಕ ಯಾರೆಂಬುದು ಜನರಿಗೆ ತಿಳಿದಿದೆ ಎಂದು ಪರೋಕ್ಷವಾಗಿ ಯತ್ನಾಳ್‌ ಟಾಂಗ್‌ ನೀಡಿದ್ದರು.

Advertisement

ಈ ಹೇಳಿಕೆ ವಿರುದ್ಧ ಕಾಂಗ್ರೆಸ್‌ ಮುಖಂಡ, ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ಜಾತಿ ಯಾವುದು ಎಂದು ಪ್ರಶ್ನಿಸುವ ಮೂಲಕ ಯತ್ನಾಳ್‌ ವಿವಾದಕ್ಕೆ ಗುರಿಯಾಗಿದ್ದರು.

ರಾಹುಲ್‌ ಗಾಂಧಿ ಅಮೆರಿಕಕ್ಕೆ ತೆರಳಿ ಅಲ್ಲಿ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಾರೆ. ಅಲ್ಲದೇ ಭಾರತದಲ್ಲಿ ಜಾತಿ ಜನಗಣತಿ ಮಾಡಬೇಕೆಂದು ರಾಹುಲ್‌ ಹೇಳುತ್ತಾರೆ. ಆದರೆ ತಾನೇ ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಎಂಬುದು ರಾಹುಲ್‌ ಗಾಂಧಿಗೆ ಗೊತ್ತಿಲ್ಲ ಎಂದು ಯತ್ನಾಳ್‌ ಟೀಕಿಸಿದ್ದರು.

2023ರ ಡಿಸೆಂಬರ್‌ ನಲ್ಲಿ ಯತ್ನಾಳ್‌ ಅವರು ಬಿಎಸ್‌ ಯಡಿಯೂರಪ್ಪ ವಿರುದ್ಧ ಕೋವಿಡ್‌ ಸಂದರ್ಭದಲ್ಲಿ ವೈಯಕ್ತಿಕವಾಗಿ ಹಣ ಮಾಡಿಕೊಂಡಿದ್ದರು ಎಂದು ಆರೋಪಿಸುವ ಮೂಲಕ ವಿವಾದ ಹುಟ್ಟುಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next