Advertisement

ಭಾರತಕ್ಕೆ ಕೀರ್ತಿ ತಂದುಕೊಟ್ಟ ನಮೋ

01:35 PM May 27, 2017 | |

ದಾವಣಗೆರೆ: ವಿಶ್ವಮಟ್ಟದಲ್ಲಿ ಭಾರತಕ್ಕೆ ಸ್ಥಾನಮಾನ ಕೊಟ್ಟ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಹೇಳಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಚೇತನಾ ಹೋಟೆಲ್‌ನಲ್ಲಿ ಶುಕ್ರವಾರ ಬಿಜೆಪಿ ಉತ್ತರ ವಿಧಾನ ಸಭಾ ಕ್ಷೇತ್ರ ಘಟಕ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.

Advertisement

ನರೇಂದ್ರ ಮೋದಿ ಪ್ರಧಾನಿ ಆಗುವ ಮುನ್ನ ನಮ್ಮ ದೇಶ ಇತರೆ ದೇಶಗಳ ಮುಂದೆ ಕೈ ಒಡ್ಡುವ ಸ್ಥಿತಿ ಇತ್ತು. ಮೋದಿ ಪ್ರಧಾನಿ ಆದ ನಂತರ ನಮ್ಮ ದೇಶಕ್ಕೆ ವಿಶ್ವಮಟ್ಟದಲ್ಲಿ ಘನತೆ ತಂದುಕೊಟ್ಟರು. ಇಂದು ನಮ್ಮ ದೇಶವನ್ನು ಪ್ರಪಂಚದ ಇತರೆ ದೇಶಗಳು ನೋಡುವ ದೃಷ್ಟಿಕೋನ ಬದಲಾಗಿದೆ.

ಇದಕ್ಕೆ ಕಾರಣ ಪ್ರಧಾನಿ ಮೋದಿ ಎಂದರು. ಮೋದಿಯವರು ಜನಧನ್‌ ಮೂಲಕ ದೇಶದ ಬಡಜನರು ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಒಳಪಡುವಂತೆ ಮಾಡಿದರು. ಗರಿಷ್ಠ ಮುಖ ಬೆಲೆಯ ನೋಟುಗಳನ್ನು ಹಿಂಪಡೆಯುವ ಮೂಲಕ ದೇಶದಲ್ಲಿನ ಕಾಳಧನ ಹೊರತರುವಲ್ಲಿ ಯಶಸ್ವಿಯಾದರು. ಅನೇಕ ಜನಪರ ಕಾರ್ಯಕ್ರಮ ಜಾರಿ ಮೂಲಕ ದೇಶದ ಅಭಿವೃದ್ಧಿ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು. 

ನಮ್ಮ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಸಾಧನೆ ಏನು ಎನ್ನುವುದನ್ನು ನಾವಿಂದು ಕಣ್ಣಾರೆ ಕಾಣುತ್ತಿದ್ದೇವೆ. ನಗರದಲ್ಲಿ ದಿನ ನಿತ್ಯ ಓಡಾಡುತ್ತಿರುವ ನೀರಿನ ಟ್ಯಾಂಕ್‌ರ್‌ಗಳನ್ನು ನೋಡಿದಾಗ ಮಲ್ಲಿಕಾರ್ಜುನ್‌ ಮಾಡಿದ ಸಾಧನೆ ಎಂತಹುದ್ದು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ನಮ್ಮ ನಗರಕ್ಕೆ ಇಂತಹ ಸ್ಥಿತಿ ಏಕೆ ಬಂತು ಎನ್ನುವುದೇ ಅರ್ಥವಾಗುತ್ತಿಲ್ಲ. 

ಕುಡಿಯುವ ನೀರಿನ ಸಮಸ್ಯೆಗೆ ಶ್ವಾಶತ ಪರಿಹಾರ ಕಲ್ಪಿಸುವ ಸಂಬಂಧ ಬರೀ ಹೇಳಿಕೆ ನೀಡಿದರೆ ಸಾಲದು, ಕಾರ್ಯಗತಗೊಳ್ಳಬೇಕು. ತುಂಗಾಭದ್ರಾ ನದಿಗೆ ಬ್ರಿಡ್ಜ್ ಕಟ್ಟಿ ಜನರಿಗೆ ನೀರು ಕೋಡುವ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ ಮಾತನಾಡಿ, ವಾಜಪೇಯಿ ಸರಕಾರದ ನಂತರ ಕಳಂಕರಹಿತ ಆಡಳಿತ ನಡೆಸಿದ ಏಕೈಕ ಸರ್ಕಾರ ನರೇಂದ್ರ ಮೋದಿಯವರದ್ದು.

Advertisement

ಭಾರತವನ್ನು ಇಡೀ ಜಗತ್ತೇ ಗಮನ ಸೆಳೆಯುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಬಿಜಿಪಿ ಮುಖಂಡ ಎಚ್‌.ಎಸ್‌.ನಾಗರಾಜ್‌ ಮಾತನಾಡಿ, ಈ ದೇಶ ನುಡಿದಂತೆ ನಡೆಯುವ ಪ್ರಧಾನಿ ಕಂಡಿದ್ದರೆ, ಅದು ನರೇಂದ್ರ ಮೋದಿಯವರು ಮಾತ್ರ. ನಿಷ್ಕ್ರಿಯ ಸರಕಾರಗಳನ್ನು ಕಂಡಿದ್ದ ಈ ದೇಶದ ಜನರು. ಬದಲಾವಣೆ ಬಯಸಿ ಬಿಜೆಪಿಗೆ ಅಧಿಧಿಕಾರ ನೀಡಿದ್ದಾರೆ. ಇನ್ನು ಐದು ವರ್ಷಗಳ ಕಾಲ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸಬೇಕು. 

ರಾಜ್ಯದಲ್ಲಿ ಸಹ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು. ಬಿಜೆಪಿ ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಮುಕುಂದ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಜಿಪಂ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್‌, ಮುಖಂಡರಾದ ಎಚ್‌.ಎಸ್‌.ರುದ್ರಮುನಿಸ್ವಾಮಿ, ಕೃಷ್ಣ ಮೂರ್ತಿ ಪವಾರ್‌, ಬಿ.ಎಸ್‌.ಜಗದೀಶ್‌ ಇತರರು ವೇದಿಕೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next