Advertisement

ಇನ್ನು ಮುಂದೆ ಬೆಳೆ ವಿಮೆಗೂ ನಾಮಿನಿ ಮಾಡಿಸಿಕೊಳ್ಳಬೇಕು: ಬಿ.ಸಿ.ಪಾಟೀಲ್

04:52 PM Jul 20, 2021 | Team Udayavani |

ಬೆಂಗಳೂರು: ರೈತರಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಬೆಳೆ‌ ವಿಮೆ ಮಾಡಿಸಿಕೊಳ್ಳುವ ವಿಮಾ ‌ಕಂಪೆನಿಗಳು ಇನ್ನು ಮುಂದೆ ಬೆಳೆ ವಿಮೆ ಮಾಡಿಸಿಕೊಳ್ಳುವಾಗ ವಿಮೆ ಮಾಡಿಸುವ ರೈತನ ಜೊತೆ ಸಂಬಂಧಿಸಿದ ಕುಟುಂಬದ ನಾಮಿನಿಯನ್ನು ಸಹ ಮಾಡಿಸಿಕೊಳ್ಳಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಮಾ ಕಂಪೆನಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮಂಗಳವಾರ ವಿಕಾಸಸೌಧದ ಕಚೇರಿಯಲ್ಲಿ ಸಚಿವರು ಬೆಳೆ ವಿಮೆ ಸಂಬಂಧ ಕೃಷಿ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಇಷ್ಟುದಿನಗಳ ಕಾಲ ಬೆಳೆವಿಮೆ ಮಾಡಿಸಿಕೊಳ್ಳುವಾಗ ವಿಮಾ ಕಂಪೆನಿಗಳು ರೈತರಿಂದ ಬೆಳೆ ವಿಮೆ ಮಾಡಿಸಿಕೊಳ್ಳುವಾಗ ನಾಮಿನಿಯನ್ನು ಪರಿಗಣಿಸುತ್ತಿರಲಿಲ್ಲ. ಇದರಿಂದ ವಿಮಾದಾರ ರೈತ ಮೃತಪಟ್ಟಲ್ಲಿ ವಿಮೆ ಕಂತು ಪಡೆಯಲು ತೊಂದರೆಯಾಗುತ್ತಿತ್ತು. ರೈತರ ಅನುಕೂಲಕ್ಕಾಗಿ ಇನ್ನುಮುಂದೆ ವಿಮಾಕಂಪೆನಿಗಳು ಕಡ್ಡಾಯವಾಗಿ ರೈತರಿಂದ ವಿಮೆ ಮಾಡಿಸಿಕೊಳ್ಳುವಾಗ ನಾಮಿನಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಅಲ್ಲದೇ ಫಸಲ್ ಬೀಮಾ ಯೋಜನೆ ಮಾಡಿಕೊಳ್ಳುವ ವಿಮಾಕಂಪೆನಿಗಳು ಕೃಷಿ ಇಲಾಖೆಯಲ್ಲಿ ಕಚೇರಿ ಮಾಡಿಕೊಳ್ಳದೇ ಈ ಹಿಂದೆ ಸೂಚಿಸಿದಂತೆ ಪ್ರತಿ ತಾಲೂಕಿನಲ್ಲಿ ಪ್ರತ್ಯೇಕ ಕಚೇರಿ ತೆರೆಯಬೇಕು. ಅಲ್ಲದೇ ಕಚೇರಿ ತೆರೆದ ಲೊಕೇಷನ್ ಜಿಪಿಎಸ್ ಲಿಂಕ್ ಅನ್ನು ಕೃಷಿ ಇಲಾಖೆಗೆ ನೀಡಬೇಕೆಂದರು.

ರೈತರು ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟನ್ನೇ ಆಧಾರ್ ಕಾರ್ಡ್‌ಗೆ ಜೋಡಿಸಿ ಆಧಾರ್‌ ಕಾರ್ಡಿನಲ್ಲಿರುವ ಚಾಲಿತ ಬ್ಯಾಂಕ್ ಅಕೌಂಟ್ ಅನ್ನೇ ಬೆಳೆವಿಮೆಗೆ ದಾಖಲಿಸಬೇಕು. ಕೆಲವೆಡೆ ಬಹುತೇಕ ರೈತರ ಆಧಾರ್ ಕಾರ್ಡ್ ಬೆಳೆವಿಮೆಗೆ ಜೋಡಣೆಯಾದರೂ ಕೂಡ ಆಧಾರ್‌ ಕಾರ್ಡ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿರದೇ ಇವೆ. ಹೀಗೆ ಚಾಲ್ತಿಯಲ್ಲಿರದ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ಗೆ ಜೋಡಿಸಿರುವುದು ಕಂಡುಬಂದಿದೆ. ಇದರಿಂದ ಬಹುತೇಕ ಕಡೆ ಬೆಳೆವಿಮೆ ಪಡೆಯಲು ರೈತರಿಗೆ ತೊಂದರೆಯುಂಟಾಗಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ರೈತರು ಎಷ್ಟೇ ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ಕೂಡ ಆಧಾರ್ ಕಾರ್ಡಿಗೆ ಜೋಡಿಸಿ ಬೆಳೆ ವಿಮೆಗೆ ನಮೂದಿಸಿರುವ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನೇ ರೈತರು ಬೆಳೆವಿಮೆಗೆ ನಮೂದಿಸಬೇಕು. ಕೆಲವೆಡೆ ಆಧಾರ್ ಕಾರ್ಡನ್ನು ಕುಟುಂಬದ ಸದಸ್ಯರು ಒಟ್ಟೊಟ್ಟಿಗೆ ಮಾಡಿಸುವಾಗ ಕೆಲವೆಡೆ ಬೆರಳಚ್ಚು ತಪ್ಪಾಗಿ ನಮೂದಾಗಿರುವ ತೊಂದರೆಯೂ ಸಹ ಆಧಾರ್‌ಕಾರ್ಡಿನಲ್ಲಿ ಕಂಡುಬಂದಿದೆ. ಹೀಗಾಗಿ ಆಧಾರ್ ಕಾರ್ಡಿನಲ್ಲಿರುವ ತೊಂದರೆಗಳನ್ನು ರೈತರು ಕೂಡಲೇ ಸರಿಪಡಿಸಿಕೊಳ್ಳಬೇಕು.ಬೆಳೆವಿಮೆ ಬಗ್ಗೆ ಎಡಿಎ,ಜೆಡಿಎಗಳು ಸಹ ಸರಿಯಾಗಿ ಮಾಹಿತಿ ಪಡೆದು ತಮ್ಕನ್ನು ಸಂಪರ್ಕಿಸುವ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಬಿ.ಸಿ.ಪಾಟೀಲ್ ಸಭೆಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next