ಬೆಂಗಳೂರು: ಮೇಲ್ಮನೆಗೆ ನಾಮನಿರ್ದೇಶನ ಸಂಬಂಧ ಮೂವರ ಹೆಸರು ಕಾಂಗ್ರೆಸ್ ಸರ್ಕಾರ ಅಂತಿಮಗೊಳಿಸಿರುವ ಮಾಹಿತಿ ಹೊರಬೀಳುತ್ತಿದ್ದಂತೆ ಪಕ್ಷದಲ್ಲಿರುವ ಆಕಾಂಕ್ಷಿಗಳಲ್ಲಿ ವಿಶೇಷವಾಗಿ ಆಯ್ಕೆ ಮಾನದಂಡದ ಬಗ್ಗೆಯೇ ಅಸಮಾಧಾನ ಸ್ಫೋಟಗೊಂಡಿದೆ. ಪರಿಣಾಮ ಪ್ರಕ್ರಿಯೆ ಮತ್ತಷ್ಟು ಕಗ್ಗಂಟಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮನ್ಸೂರ್ ಅಲಿ ಖಾನ್ ಹಾಗೂ ಎಂ.ಆರ್. ಸೀತಾರಾಂ ಮತ್ತು ನಿವೃತ್ತ ಐಆರ್‌ಎಸ್ ಅಧಿಕಾರಿ ಸುಧಾಮದಾಸ್ ಅವರ ಹೆಸರನ್ನು ಅಂತಿಮಗೊಳಿಸಿ ಅನುಮೋದನೆಗಾಗಿ ಕೆಪಿಸಿಸಿಯು ದೆಹಲಿ ವರಿಷ್ಠರಿಗೆ ಕಳುಹಿಸಿದೆ. ಆದರೆ, ಇವರ ಬದಲಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರು ಅಥವಾ ಇದುವರೆಗೆ ಮೇಲ್ಮನೆಯನ್ನು ಪ್ರತಿನಿಧಿಸದ ಹಿಂದುಳಿದ ಸಮುದಾಯದ ಮುಖಂಡರ ಹೆಸರನ್ನು ಸೂಚಿಸವುದು ಸೂಕ್ತ ಎಂಬ ಅಭಿಪ್ರಾಯ ಬಲವಾಗಿ ಕೇಳಿಬರುತ್ತಿದೆ.
ಈಗಾಗಲೇ ಮೇಲ್ಮನೆಯಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದ ನಸೀರ್ ಅಹಮ್ಮದ್, ಸಲೀಂ ಅಹಮ್ಮದ್ ಸೇರಿ ಇಬ್ಬರು ಪ್ರತಿನಿಧಿಗಳಿದ್ದಾರೆ. ರಾಜ್ಯಸಭೆಯಲ್ಲಿ ಎಲ್. ಹನುಮಂತಯ್ಯ ಇದ್ದಾರೆ. ಇದರ ಹೊರತಾಗಿ ಸವಿತಾ ಸಮಾಜ, ತಿಗಳರು, ಕುರುಬರು, ನೇಕಾರರು, ಈಡಿಗರು ಸೇರಿ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಹಾಗೂ ಈವರೆಗೆ ವಿಧಾನ ಪರಿಷತ್ತಿನಲ್ಲಿ ಪ್ರತಿನಿಧಿಸದ ಅತ್ಯಂತ ಹಿಂದುಳಿದ ಸಮುದಾಯದ ಮುಖಂಡರನ್ನು ಗುರುತಿಸಿ, ಅಂತಹವರ ಹೆಸರು ಮೇಲ್ಮನೆಗೆ ನಾಮನಿರ್ದೇಶನ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಅಷ್ಟಕ್ಕೂ ಸಾಮಾನ್ಯವಾಗಿ ಮೇಲ್ಮನೆಗೆ ನಾಮನಿರ್ದೇಶನ ಮಾಡುವಾಗ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಅವರಿಗೆ ಸದಸ್ಯತ್ವ ನೀಡಲಾಗುತ್ತದೆ. ಈಗಾಗಲೇ ಸೂಚಿಸಿದ ಮೂವರ ಪೈಕಿ ಇಬ್ಬರು ಶಿಕ್ಷಣ ಕ್ಷೇತ್ರದಿಂದ ಬಂದವರಾಗಿದ್ದಾರೆ. ಇಬ್ಬರೂ ರಾಜಕೀಯ ಹಿನ್ನೆಲೆವುಳ್ಳವರಾಗಿದ್ದು, ಉದ್ಯಮಿಗಳು ಆಗಿದ್ದಾರೆ. ಅದರಲ್ಲಿ ಮನ್ಸೂರ್ ಅಲಿಖಾನ್ ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ. ಪ್ರಸ್ತುತ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸುಮಾರು ಹತ್ತು ಶಾಲೆಗಳನ್ನು ಅವರು ನಡೆಸುತ್ತಿದ್ದಾರೆ. ಆಂಗ್ಲ ಪತ್ರಿಕೆಯೊಂದರ ಟ್ರಸ್ಟಿ ಕೂಡ ಆಗಿದ್ದಾರೆ. ಇನ್ನು ಸೀತಾರಾಂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಈ ಹಿಂದೆ ಆಯ್ಕೆಯಾಗಿದ್ದವರು. ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಒಂದೇ ಕ್ಷೇತ್ರ; ಎರಡು ನಾಮನಿರ್ದೇಶನ: ಇಬ್ಬರನ್ನೂ ಶಿಕ್ಷಣ ಕ್ಷೇತ್ರದ ಹಿನ್ನೆಲೆಯಿಂದಲೇ ಆಯ್ಕೆ ಮಾಡಲಾಗಿದೆ. ಇವರಲ್ಲಿ ಯಾರಾದರೊಬ್ಬರನ್ನು ಆಯ್ಕೆ ಮಾಡಬಹುದಿತ್ತು. ಈ ಮಧ್ಯೆ ದಲಿತ ಸಮುದಾಯದಿಂದ ಬಂದ ಐಆರ್‌ಎಸ್ ಅಧಿಕಾರಿಯಾಗಿದ್ದ ಸುಧಾಮದಾಸ್ ಅವರನ್ನು ಮಾಹಿತಿ ಆಯೋಗಕ್ಕೆ ಈ ಹಿಂದೆ ನೇಮಕ ಮಾಡಲಾಗಿತ್ತು. ಆರು ತಿಂಗಳ ಹಿಂದಷ್ಟೇ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಈ ಅಲ್ಪಾವಧಿಯಲ್ಲಿ ಸಮಾಜಕ್ಕೆ ಅವರ ಕೊಡುಗೆ ಏನು? ಇದಕ್ಕಿಂತ ಉತ್ತಮ ಆಯ್ಕೆ ಪಕ್ಷದ ಮುಂದಿವೆ. ಈ ನಿಟ್ಟಿನಲ್ಲಿ ಮೂವರ ಹೆಸರನ್ನು ಮರುಪರಿಶೀಲಿಸುವಂತೆ ಅಸಮಾಧಾನಿತ ವರ್ಗ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದೆ.
ಈ ನಡುವೆ ಮೇಲ್ಮನೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಸವಿತಾ ಸಮುದಾಯದ ಎಂ.ಸಿ. ವೇಣುಗೋಪಾಲ್, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಕೆಲವರ ಹೆಸರು ಕೇಳಿಬರುತ್ತಿದೆ. ಅಂದಹಾಗೆ, ಮೇಲ್ಮನೆ ಸದಸ್ಯರಾಗಿದ್ದ ಪಿ.ಆರ್. ರಮೇಶ್, ಮೋಹನ್ ಕೊಂಡಜ್ಜಿ, ಸಿ.ಎಂ. ಲಿಂಗಪ್ಪ ಅವರ ಆರು ವರ್ಷಗಳ ಅಧಿಕಾರಾವಧಿ ಮೇನಲ್ಲಿ ಅಂತಿಮಗೊಂಡಿದೆ. ಈ ಸ್ಥಾನಕ್ಕೆ ಪೈಪೋಟಿ ನಡೆದಿದೆ.