ಮಹಾಲಿಂಗಪುರ: ಪ್ರತಿಯೊಂದು ಗ್ರಾಮಗಳಲ್ಲಿ\ ಗ್ರಾಪಂ ಚುನಾವಣೆಯ ಕದನ ಕುತೂಹಲವೇ ಜೋರಾಗಿದೆ. ಮೊದಲ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದು ಸಂಗಾನಟ್ಟಿಯ ಗ್ರಾಮದ ಎರಡು ವಾರ್ಡ್‌ನ ಅಭ್ಯರ್ಥಿಗಳು ರೈತಮಿತ್ರ ಎತ್ತಿನ ಬಂಡಿಯಲ್ಲಿ ಭವ್ಯ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದರು.
ಸಂಗಾನಟ್ಟಿ ಗ್ರಾಮದ 6ನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಸತ್ಯರಾಜು ಸೈದಾಪುರ, ಹಿಂದುಳಿದ ವರ್ಗ ಅ ಮಹಿಳೆ ಕ್ಷೇತ್ರದಿಂದ ಶಾಂತವ್ವ ಪೂಜಾರಿ, ಎಸ್ಟಿ ಮಹಿಳಾ ಕ್ಷೇತ್ರದಿಂದ ಮಾನವ್ವ ಗಾಡಿಕಾರ, ಸಂಗಾನಟ್ಟಿ ಗ್ರಾಮದ 5ನೇ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಮಾರುತಿ ಇಟ್ನಾಳ, ಹಿಂದೂಳಿದ ವರ್ಗ ಅ ಕ್ಷೇತ್ರದಿಂದ ದುಂಡಪ್ಪ ಮೇಟಿ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಯಲ್ಲವ್ವ ಮೇಟಿ ಎತ್ತಿನ ಬಂಡಿಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಸಂಗಾನಟ್ಟಿ ಗ್ರಾಮದಿಂದ ಮದಭಾಂವಿ ಗ್ರಾಮದ ಗ್ರಾಪಂ ಕಾರ್ಯಾಲಯದವರೆಗೆಅಭ್ಯರ್ಥಿಗಳು ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಿದರು. ಬೆಂಬಲಿಗರು, ಅಭಿಮಾನಿಗಳು ಸಹ ಸುಮಾರು 38 ಎತ್ತಿನ ಬಂಡಿಗಳಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.
ಮೂರು ಕಿ.ಮೀ. ಮೆರವಣಿಗೆ: ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಸೇರಿ ಸುಮಾರು 38 ಎತ್ತಿನ ಗಾಡಿಗಳನ್ನು ಮಾವಿನ ತೋರಣ, ಕಬ್ಬು ಕಟ್ಟಿ ಸಿಂಗರಿಸಿದ್ದರು. ಸಂಗಾನಟ್ಟಿಗ್ರಾಮದಿಂದ ಮದಭಾಂವಿ ಗ್ರಾಮದವರೆಗೆ ಸುಮಾರು 3 ಕಿ.ಮೀಟರನಷ್ಟು ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಆಧುನಿಕ ಯಂತ್ರೋಪಕರಣಗಳಿಂದಾಗಿ ರೈತಮಿತ್ರ ಎತ್ತು ಮತ್ತು ಎತ್ತಿನ ಬಂಡಿಗಳ ಸಂಖ್ಯೆ ಇಂದು ಕಡಿಮೆಯಾಗಿದೆ. ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದೇವೆ. ಈ ಚುನಾವಣೆಯಲ್ಲಿ ಗ್ರಾಮಸ್ಥರು ಅವರ ಸೇವೆಗಾಗಿ ನಮಗೆ ಅವಕಾಶ ನೀಡಿದರೆ, ಗ್ರಾಮದ
-ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಸತ್ಯರಾಜು ಸೈದಾಪುರ. ಸಂಗಾನಟ್ಟಿ ಗ್ರಾಮದ 6ನೇ ವಾರ್ಡಿನ ಅಭ್ಯರ್ಥಿ.