Advertisement

ಶೆಟ್ಟರ್‌ ಸೇರಿ ಮೂವರಿಂದ ಮೇಲ್ಮನೆಗೆ ನಾಮಪತ್ರ ಸಲ್ಲಿಕೆ: ಅವಿರೋಧ ಆಯ್ಕೆ ಖಚಿತ

09:18 PM Jun 20, 2023 | Team Udayavani |

ಬೆಂಗಳೂರು: ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್‌, ತಿಪ್ಪಣ್ಣಪ್ಪ ಕಮಕನೂರು ಹಾಗೂ ಸಚಿವ ಎನ್‌.ಎಸ್‌.ಬೋಸರಾಜ್‌ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಿಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರುವ ಹಿನ್ನೆಲೆಯಲ್ಲಿ ಈ ಮೂವರು ಅವಿರೋಧವಾಗಿ ಆಯ್ಕೆಗೊಳ್ಳಲಿದ್ದಾರೆ.

Advertisement

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಕಾಂಗ್ರೆಸ್‌ನ ಹಿರಿಯ ನಾಯಕರ ಸಮ್ಮುಖದಲ್ಲಿ ಈ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಹಲವು ಪ್ರಮುಖರು ಆಕಾಂಕ್ಷಿಗಳಾಗಿದ್ದರೂ ಶೆಟ್ಟರ್‌ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡುವಂತೆ ಹೈಕಮಾಂಡ್‌ ಸ್ಪಷ್ಟ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೂವರ ಆಯ್ಕೆಯೊಂದಿಗೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಸದಸ್ಯ ಬಲವೂ ಹೆಚ್ಚಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ, ಬಾಬುರಾವ್‌ ಚಿಂಚನಸೂರ್‌ ಹಾಗೂ ಆರ್‌.ಶಂಕರ್‌ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪರಿಷತ್ತಿಗೆ ಚುನಾವಣೆ ಘೋಷಣೆಯಾಗಿತ್ತು. ಶೆಟ್ಟರ್‌ 2028ರ ವರೆಗೆ, ಕಮಕನೂರು 2026ರ ವರೆಗೆ ಹಾಗೂ ಬೋಸ್‌ರಾಜ್‌ 2024 ಜೂನ್‌ 17ರ ವರೆಗೆ ಸದಸ್ಯತ್ವದ ಅವಧಿ ಹೊಂದಿದ್ದಾರೆ.

ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಮೂವರು ನಾಮಪತ್ರ ಸಲ್ಲಿಸಿದರು. ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ.23 ನಾಮಪತ್ರ ವಾಪಸ್‌ ಪಡೆಯಲು ಕಡೆಯ ದಿನವಾಗಿದೆ. ಜೂನ್‌ 30ರಂದು ಔಪಚಾರಿಕವಾಗಿ ಈಗ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ.

ನಿಭಾಯಿಸುವೆ: ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಜಗದೀಶ್‌ ಶೆಟ್ಟರ್‌, ನಾನು ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ಕೇಳಿಲ್ಲ. ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಗೆಲುವಿಗೆ ಶ್ರಮಿಸುತ್ತೇನೆ. ನಾಮಪತ್ರ ಸಲ್ಲಿಸಿದ ನಾವು ಮೂವರು ಗೆದ್ದು ಬರುತ್ತೇವೆ. ಅವಕಾಶ ಕಲ್ಪಿಸಿದ ರಾಜ್ಯ ನಾಯಕರು, ಎಐಸಿಸಿ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್‌ ಸಿಂಗ್‌ ಸುಜೇìವಾಲಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next