ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಇನ್ನೂ ಕಗ್ಗಂಟಾಗಿದ್ದು, ಇದಕ್ಕೆ ಶುಕ್ರವಾರ ಹೊಸ ಸೇರ್ಪಡೆಯಾಗಿರುವುದು ಸಿಎಂ ಪುತ್ರ ಡಾ.ಯತೀಂದ್ರ ಅವರು ಟ್ವೀಟ್ ಮಾಡಿ ಕೆಲ ಹೊತ್ತಲ್ಲೇ ಡಿಲೀಟ್ ಮಾಡಿರುವುದು.
”ಎಪ್ರಿಲ್ 23 ರಂದು ಸಿದ್ದರಾಮಯ್ಯ ಅವರು ಬಾದಾಮಿಯಂದ ನಾಮಪತ್ರ ಸಲ್ಲಿಸಲಿದ್ದಾರೆ. # ಮತ್ತೂಮ್ಮೆ ಸಿದ್ದರಾಮಯ್ಯ” ಎಂದು ಟ್ವೀಟ್ ಮಾಡಿದ್ದರು. ಆದರೆ ಕೆಲ ಹೊತ್ತಲ್ಲೇ ಟ್ವೀಟನ್ನುಅಳಿಸಿ ಹಾಕಿರುವ ಹಲವು ಗೊಂದಲಗಳಿಗೆ ಕಾರಣವಾಗಿದೆ.
ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ
ಮೈಸೂರಿನಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ ‘ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಮುಖಂಡರು, ಎಸ್.ಆರ್. ಪಾಟೀಲ್, ಎಂ.ಬಿ .ಪಾಟೀಲ್, ತಿಮ್ಮಾಪುರ ಮೊದಲಾದ ನಾಯಕರು ಬಾದಾಮಿಯಂದ ಸ್ಪರ್ಧಿಸಲು ಒತ್ತಾಯಿಸಿದ್ದರು. ನಾನು ಬೇಡ ಅಂದಿದ್ದೆ. ಹೈಕಮಾಂಡ್‌ಗೆ ಈ ಬಗ್ಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಹೈ ಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ’ ಎಂದರು.
‘ಈ ಬಗ್ಗೆ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ ನಾಳೆ ಅಂತಿಮ ನಿರ್ಧಾರಕ್ಕೆ ಬರುತ್ತೇನೆ’ ಎಂದು ಸಿಎಂ ಹೇಳಿದರು.