ಬೆಂಗಳೂರು: ಮೊದಲನೇ ಹಂತದ ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿದ್ದು, ಬುಧವಾರ ಹಲವು ಪಕ್ಷಗಳ ಅಭ್ಯರ್ಥಿಗಳು ಬೃಹತ್ ರೋಡ್ ಶೋ ನಡೆಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಮೂರೂ ಪಕ್ಷಗಳ ಪ್ರಮುಖ ನಾಯಕರು ಹಾಜರಿದ್ದರು.
ಬುಧವಾರ ಒಂದೇ ದಿನ 108 ಪುರುಷರು ಮತ್ತು 8 ಮಹಿಳೆಯರು ಸಹಿತ ಒಟ್ಟು 116 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ, ಡಾ| ಸಿ.ಎನ್.ಮಂಜುನಾಥ್ ಬೆಂಗಳೂರು ಗ್ರಾಮಾಂತರದಿಂದ ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಹಾಗೂ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನ ಪದ್ಮರಾಜ್, ಮೈಸೂರು-ಕೊಡಗಿನ ಬಿಜೆಪಿ ಅಭ್ಯರ್ಥಿ ಯುವರಾಜ ಯದುವೀರ್ ಒಡೆಯರ್, ಕಾಂಗ್ರೆಸ್‌ನ ಲಕ್ಷ್ಮಣ್, ಬೆಂಗ ಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂ ದ್ಲಾಜೆ, ತುಮಕೂರಿನ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ, ಕಾಂಗ್ರೆಸ್ ಅಭ್ಯರ್ಥಿಗಳಾದ ಚಿಕ್ಕಬಳ್ಳಾಪುರದ ರಕ್ಷಾ ರಾಮಯ್ಯ ಮತ್ತಿತರರು ಬುಧವಾರ ನಾಮಪತ್ರ ಸಲ್ಲಿಸಿದರು.
ಒಟ್ಟು 268 ನಾಮಪತ್ರ ಸಲ್ಲಿಕೆ
ಮಾರ್ಚ್ 28ರಿಂದ ಇದುವರೆಗೆ ಒಟ್ಟು 268 ನಾಮ ಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ 243 ಪುರುಷರು ಹಾಗೂ 25 ಮಹಿಳೆಯರಾಗಿದ್ದಾರೆ. ಒಬ್ಬರು ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ. ಅದರಂತೆ ನಾಮಪತ್ರ ಸಲ್ಲಿಸಿದವರಲ್ಲಿ 184 ಪುರುಷರು ಹಾಗೂ 15 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಉಡುಪಿ-ಚಿಕ್ಕಮಗಳೂರು, ತುಮಕೂರು, ಮೈಸೂರು ತಲಾ 7, ಹಾಸನ, ದಕ್ಷಿಣ ಕನ್ನಡ-ತಲಾ 4, ಚಿತ್ರದುರ್ಗ-6, ಮಂಡ್ಯ-9, ಚಾಮರಾಜನಗರ-12, ಬೆಂಗಳೂರು ಗ್ರಾಮಾಂತರ-13. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ತಲಾ 11, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ತಲಾ 10, ಕೋಲಾರದಲ್ಲಿ 5 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಲು ಎ. 4 ಕೊನೆ ದಿನವಾಗಿದ್ದು, ಎ. 5ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಎ. 8 ಕೊನೆ ದಿನವಾಗಿದೆ. ಎ. 26ರಂದು 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.