ದಾಂಡೇಲಿ: ಅವರು ರಾಜಸ್ಥಾನ ಮೂಲದವರು, ಬದುಕಿಗಾಗಿ ಆಯ್ದುಕೊಂಡದ್ದು ಬಲೂನ್ ಮಾರುವ ವೃತ್ತಿ. ಒಂದೂರಿನಿಂದ ಒಂದೂರಿಗೆ ಹೋಗಿ ಬಲೂನ್ ಹಾಗೂ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುವುದು ಇವರ ನಿತ್ಯದ ಕಾಯಕ. ಈ ಬಲೂನ್ ವ್ಯಾಪಾರಿಗಳು ಇಂದು ನಗರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೋವಿಡ್ ನಿರ್ಬಂಧದ ನಡುವೆ ಇವರು ಹೇಗೆ ಇಲ್ಲಿ ಬಂದರು, ಈ ಸಮಯದಲ್ಲಿ ಬಂದಿರುವುದಾದರೂ ಏತಕ್ಕೆ, ಕಫ್ಯೂ ಸಂದರ್ಭದಲ್ಲಿ ಬಲೂನು ತೆಗೆದುಕೊಳ್ಳುವವರಾದರೂ ಯಾರು, ಬಲೂನ್ ಮಾರಾಟವಾಗದಿದ್ದಲ್ಲಿ ಇವರ ಬದುಕು ನಡೆಯುವುದಾದರೂ ಹೇಗೆ…ಎಂಬ ಪ್ರಶ್ನೆಗಳು ಸ್ವಾಭಾವಿಕವಾಗಿ ಉದ್ಭವಿಸುತ್ತಿವೆ.
ದ್ವಿಚಕ್ರ ವಾಹನವನ್ನೇ ಕಿರಿದಾದ ಗೂಡ್ಸ್ ವಾಹನವನ್ನಾಗಿ ಪರಿವರ್ತಿಸಿ, ಅದನ್ನೆ ಮನೆಯನ್ನಾಗಿಸಿಕೊಂಡಿರುವ ಇವರ ಬದುಕು ಅತ್ಯಂತ ದಯನೀಯವಾಗಿದೆ. ಇವರ ಜೊತೆ ಪುಟ್ಟ ಪುಟ್ಟ ಮಕ್ಕಳು. ಕೊರೊನಾ ಸಂಕಷ್ಟದ ಸಮಯದಲ್ಲಿ ಸಣ್ಣ ಸಣ್ಣ ಮಕ್ಕಳನ್ನು ಅಡ್ಡಾಡಿಸುವುದು ತಪ್ಪಲ್ಲವೇ? ತಪ್ಪು ಎಂದು ಅವರಿಗೆ ತಿಳಿಸುವವರು ಯಾರು?, ತಿಳಿಸುವವರಿದ್ದರೂ ಅವರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು ಅಥವಾ ಸ್ಪಂದಿಸುವುದಾದರೂ ಹೇಗೆ? ಹೀಗೆ ನೂರೆಂಟು ಪ್ರಶ್ನೆಗಳ ನಡುವೆ ಬದುಕು ಸಾಗಿದೆ. ಕೊನೆ ಪಕ್ಷ ಸಂಬಂಧಿಸಿದ ಅಧಿಕಾರಿಗಳು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಗೆ ಮತ್ತು ವೈಯಕ್ತಿಕ ಸ್ವತ್ಛತೆಗೆ ಗಮನ ನೀಡುವಂತಾದರೂ ಕಟ್ಟಪ್ಪಣೆ ಮಾಡಿಸಬೇಕೆಂಬ ಸಲಹೆಗಳು ಕೇಳಿಬರುತ್ತಿದೆ.
ಬಡತನದ ನಡುವೆ ಸ್ವಾಭಿಮಾನದ ಬದುಕು ನಡೆಸುತ್ತಿರುವ ಇವರಿಗೆ ಮಾನವೀಯ ಸ್ಪಂದನೆ ಬೇಕಾಗಿದೆ. ಆರೋಗ್ಯದ ಮಾರ್ಗದರ್ಶನ, ಬದುಕಿಗೆ ನೆಲೆ ಬೇಕಾಗಿದೆ.