ನೋಯ್ಡಾ: ಉತ್ತರಪ್ರದೇಶದ ಗೌತಮ್ ನಗರ ಜಿಲ್ಲೆಯಲ್ಲಿ ಜನವರಿ 31ರವರೆಗೂ ಕ್ರಿಮಿನಲ್ ಅಪರಾಧ ದಂಡ ಸಂಹಿತೆ ಸೆಕ್ಷನ್ 144 ಅನ್ನು ಪೊಲೀಸರು ಜಾರಿಗೊಳಿಸಿದ್ದಾರೆ.
ಆದೇಶದ ಪ್ರಕಾರ, ಯಾವುದೇ ಪೂರ್ವಾನುಮತಿ ಇಲ್ಲದೇ ಖಾಸಗಿ ಡ್ರೋನ್ ಬಳಕೆ ಹಾಗೂ ಆಯುಧ ಬಳಸುವಂತಿಲ್ಲ ಎಂದು ತಿಳಿಸಿದೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 24ರಂದು ಉತ್ತರಪ್ರದೇಶದ ಫೌಂಡೇಶನ್ ದಿನಾಚರಣೆ ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಈ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಕಚೇರಿಯೊಳಗೆ ಕೋವಿ, ಪಿಸ್ತೂಲ್ ತರಲು ಅನುಮತಿ ಇಲ್ಲ.ಸರ್ಕಾರ ಭದ್ರತಾ ಸಿಬಂದಿಗಳಿಗೆ ಒದಗಿಸಿರುವ ಶಸ್ತ್ರಾಸ್ತ್ರಗಳನ್ನು ಕೂಡಾ ತಮ್ಮ ಕಚೇರಿಯಿಂದ ಪ್ರತ್ಯೇಕ ಸ್ಥಳದಲ್ಲಿ ಇರಿಸುವಂತೆ ಸೂಚನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ನಡೆಯಲಿರುವ ಮದುವೆ ಸಮಾರಂಭಗಳಲ್ಲಿ ಸಿಡಿಮದ್ದು ಹಾಗೂ ಮದ್ಯ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೇ ಜನರು ಯಾವುದೇ ರೀತಿಯ ಆಡಿಯೋ ಅಥವಾ ವಿಡಿಯೋಗಳನ್ನು ಮಾರಾಟ ಮಾಡುವುದು, ಶೇರ್ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.