ನಿರ್ಮಾಪಕ ಪುಷ್ಕರ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ “ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್’. ದಾನಿಶ್ ಸೇಠ್ ನಟಿಸಿರುವ “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನಿರ್ಮಾಪಕರ ಮೊಗದಲ್ಲಿ ನಗು ತಂದಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಮತ್ತೂಮ್ಮೆ ನಗು.
ಹೌದು, ಅಮೇಜಾನ್ ಪ್ರೈಮ್ ವೀಡಿಯೋಗೆ “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಮಾರಾಟವಾಗಿದೆ. ಇದನ್ನು ನೀವು ಡಿಜಿಟಲ್ ರೈಟ್ಸ್ ಎಂದು ಕರೆಯಬಹುದು. ಅಮೇಜಾನ್ ಅವರು ಖರೀದಿಸಿರುವ ಕನ್ನಡದ ಮೊದಲ ಕಮರ್ಷಿಯಲ್ ಸಿನಿಮಾ ಎಂಬುದು ಚಿತ್ರತಂಡದ ಮತ್ತೂಂದು ಖುಷಿ. ಒಳ್ಳೆಯ ಮೊತ್ತಕ್ಕೆ “ನೋಗ್‌ರಾಜ್’ ಮಾರಾಟವಾಗಿದ್ದು, ಶುಕ್ರವಾರದಿಂದಲೇ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಲಭ್ಯವಿದೆ.
“ನೋಗ್‌ರಾಜ್ ಸಿನಿಮಾ ಒಳ್ಳೆಯ ಲಾಭ ತಂದುಕೊಟ್ಟಿದೆ. ನಾವು ಹಾಕಿದ ಬಂಡವಾಳದ ಜೊತೆಗೆ ಅಷ್ಟೇ ಲಾಭ ತಂದುಕೊಟ್ಟಿದೆ. ಈಗ ಅಮೇಜಾನ್ ಪ್ರೈಮ್ ಕೂಡಾ ಒಳ್ಳೆಯ ಬೆಲೆ ಕೊಟ್ಟಿದೆ’ ಎನ್ನುವುದು ಪುಷ್ಕರ್ ಮಾತು. ಇದಲ್ಲದೇ ಸ್ಯಾಟ್‌ಲೆçಟ್ ರೈಟ್ಸ್ ಕೂಡಾ ಪುಷ್ಕರ್ ಅವರ ಕೈಯಲ್ಲಿದೆ. ಸದ್ಯದಲ್ಲೇ ವಾಹಿನಿಯೊಂದಕ್ಕೆ ಅದೂ ಮಾರಾಟವಾಗಲಿದೆ.
ಇದು “ನೋಗ್‌ರಾಜ್’ ವಿಷಯವಾದರೆ ಪುಷ್ಕರ್ ಹಾಗೂ ರಕ್ಷಿತ್ ಸೇರಿಕೊಂಡು ನಿರ್ಮಿಸುತ್ತಿರುವ ಸಿನಿಮಾಗಳ ಕೆಲಸ ಕೂಡಾ ಜೋರಾಗಿ ನಡೆಯುತ್ತಿದೆ. ರಕ್ಷಿತ್ ಅವರ “ಅವನೇ ಶ್ರೀಮನ್ನಾರಾಯಣ’ ಚಿತ್ರೀಕರಣ ಮಾರ್ಚ್ ಮೊದಲ ವಾರದಿಂದ ಆರಂಭವಾಗಲಿದೆ. ಚಿತ್ರದ ಒಂದು ಹಂತದ ಚಿತ್ರೀಕರಣ ಗುಜರಾತ್ ಅಥವಾ ಆಂಧ್ರದಲ್ಲಿ ನಡೆಯಲಿದೆ. ಆ ನಂತರ ಉತ್ತರ ಕರ್ನಾಟಕ. ಅದು ಮುಗಿಸಿಕೊಂಡು ಬೆಂಗಳೂರಿನ ಸ್ಟುಡಿಯೋಗಳಲ್ಲಿ ಒಳಾಂಗಣ ಚಿತ್ರೀಕರಣ ನಡೆಯಲಿದೆ.
ಮತ್ತೂಂದು ಚಿತ್ರ “ಭೀಮಸೇನ ನಳಮಹಾರಾಜ’ ಕೊನೆಯ ಹಂತದ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಇದಲ್ಲದೇ ದಿಗಂತ್ ನಾಯಕರಾಗಿರುವ “ಕಥೆಯೊಂದು ಶುರುವಾಗಿದೆ’ ಚಿತ್ರೀಕರಣ ಮುಗಿದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಏಪ್ರಿಲ್‌ನಲ್ಲಿ ತೆರೆಕಾಣಬಹುದು. ಇದರ ಹೊರತಾಗಿ ಇನ್ನೂ ಎರಡ್ಮೂರು ಹೊಸ ಸಿನಿಮಾಗಳ ಮಾತುಕತೆ ಕೂಡಾ ನಡೆಯುತ್ತಿದ್ದು, ಪುಷ್ಕರ್ ನಿರ್ಮಾಣದಲ್ಲಿ ತಯಾರಾಗಲಿವೆ.