ಕನ್ನಡ ಚಿತ್ರರಂಗದಲ್ಲಿ ಸದ್ಯ ಹೊಸಬರದ್ದೇ ಕಾರುಬಾರು. ಹೀಗೆ ಬರುತ್ತಿರುವ ಹೊಸಬರ ಸಿನಿಮಾಗಳಲ್ಲಿ ಕೆಲವು ತಮ್ಮ ಕಥಾಹಂದರದ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ತಮ್ಮ ಟೈಟಲ್‌ನಿಂದಲೇ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿಬಿಡುತ್ತವೆ.
ಇತ್ತೀಚೆಗೆ ಅಂಥದ್ದೇ ಒಂದು ಸಿನಿಮಾ ತನ್ನ ಟೈಟಲ್ ಮತ್ತು ಸಬ್ಜೆಕ್ಟ್ ಎರಡರ ಮೂಲಕವೂ ಗಮನ ಸೆಳೆಯುತ್ತಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ನೋಡದ ಪುಟಗಳು’. ಈ ಚಿತ್ರ ತೆರೆಗೆ ಸಿದ್ಧವಾಗಿದೆ.
ಐಟಿ ಹಿನ್ನೆಲೆಯಿಂದ ಬಂದಿರುವ ನಿರ್ದೇಶಕ ವಸಂತ ಕುಮಾರ್ ಎಸ್. “ನೋಡದ ಪುಟಗಳು’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ “ನೋಡದ ಪುಟಗಳು’ ಸಿನಿಮಾದ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಇದೇ ಬೇಸಿಗೆಯ ವೇಳೆಗೆ ಮನಸ್ಸಿಗೆ ತಂಪೆರೆಯುವ ಕಥಾಹಂದರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಎಲ್ಲರ ಬದುಕಿನಲ್ಲೂ ಯಾರಿಗೂ ಹೇಳದ ಒಂದಷ್ಟು ಖಾಸಗಿ ಮತ್ತು ಭಾವನಾತ್ಮಕ ವಿಷಯಗಳು ಇದ್ದೇ ಇರುತ್ತವೆ. ಅಂಥ ವಿಷಯಗಳನ್ನು “ನೋಡದ ಪುಟಗಳ’ಲ್ಲಿ ನೋಡಬಹುದು. ಇದರಲ್ಲಿರುವ ವಿಷಯ ಎಲ್ಲ ವಯೋಮಾನದವರಿಗೂ ಕನೆಕ್ಟ್ ಆಗುತ್ತದೆ. ಎಲ್ಲ ವರ್ಗಕ್ಕೂ ಇಷ್ಟವಾಗುತ್ತದೆ. ನೋಡುವ ಪ್ರತಿಯೊಬ್ಬರಿಗೂ ಇಂಥದ್ದು ನಮ್ಮ ಬದುಕಿನಲ್ಲೂ ನಡೆದಿದೆಯಲ್ಲ ಎಂಬ ಅಭಿಪ್ರಾಯ ಮೂಡುವಂತೆ ಮಾಡುತ್ತದೆ ಎಂಬುದು ಚಿತ್ರತಂಡದ ಮಾತು.