ಬೆಂಗಳೂರು: ಓಲಾ, ಊಬರ್ ಸೇರಿ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳ ಚಾಲಕರು, ಫುಡ್ ಡೆಲಿವರಿ ಬಾಯ್‌ಗಳಿಂದ ಯುವತಿಯರ ಮೇಲೆ ದೌರ್ಜನ್ಯ, ಮಾದಕ ವಸ್ತುಗಳ ಸಾಗಾಟ ಹಾಗೂ ಇತರೆ ಅಕ್ರಮ ಚಟುವಟಿಕೆಯಲ್ಲಿ ತೊಡುಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಟ್ಯಾಕ್ಸಿ ಸೇವೆ ಅಗ್ರಿಗೇಟರ್ ಮತ್ತು ಆನ್‌ಲೈನ್ ಫುಡ್ ಡೆಲಿವರಿ ಕಂಪನಿಗಳ ಹಿರಿಯ ಅಧಿಕಾರಿಗಳ ಜತೆ ಸಮನ್ವಯ ಸಭೆ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಟ್ಯಾಕ್ಸಿ ಅಗ್ರಿಗೇಟರ್ಸ್ ಕಂಪನಿಗಳು ಹಾಗೂ ಫುಡ್ ಡೆಲಿವರಿ ಕಂಪನಿಗಳಿಗೆ ಸಿಬ್ಬಂದಿ ನೇಮಕದ ವೇಳೆ ಪೊಲೀಸರು ನೀಡುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸೂಚಿಸಲಾಗಿದೆ.
ಪ್ರಮುಖವಾಗಿ ಮಹಿಳೆಯರು, ನಾಗರಿಕರು ಮತ್ತು ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಜತೆಗೆ ಸಿಬ್ಬಂದಿ ನೇಮಿಸಿಕೊಳ್ಳುವ ಮೊದಲು ಆತನ ಪೂರ್ವಪರ ಪರಿಶೀಲಿಸಿ, ಪೊಲೀಸರಿಂದ ಎನ್‌ಒಸಿ ಪಡೆಯ ಬೇಕು. ಒಂದು ವೇಳೆ ನಿಯಮ ಪಾಲಿಸದಿದ್ದರೆ, ಅಕ್ರಮ ಚಟುವಟಿಕೆಯಲ್ಲಿ ತೊಡಗಿದರೆ, ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡದಿದ್ದರೆ ಅಂತಹ ಕಂಪನಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಾಪ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಜತೆಗೆ ನಿಮ್ಮ ಟ್ಯಾಕ್ಸಿ ಹಾಗೂ ಸಾರ್ವಜನಿಕ ಸೇವೆಗೆ ಬಳಸುವ ವಾಹನಗಳಲ್ಲಿ ಮತ್ತು ಕಂಪನಿಯ ಆ್ಯಪ್‌ಗ್ಳಲ್ಲಿ ಪೊಲೀಸ್ ಸಹಾಯವಾಣಿ 112 ಅರಿವು ಮೂಡಿಸಬೇಕು. ನೇಮಿಸಿಕೊಳ್ಳುವ ಪೊಲೀಸ್ ಸೇವಾಸಿಂಧು ಆ್ಯಪ್‌ನಲ್ಲಿ ಆತನ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.
ಸಭೆಯಲ್ಲಿ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ, ಎಂ.ಎನ್ .ಅನುಚೇತ್, ಡಾ.ಎಸ್.ಡಿ. ಶರಣಪ್ಪ, ಓಲಾ, ಉಬರ್, ರ್ಯಾಪಿಡೋ, ಮುಂತಾದ ಟ್ಯಾಕ್ಸಿ ಅಗ್ರಿಗೇಟರ್ಸ್ ಹಾಗೂ ಆನ್‌ಲೈನ್ ಪುಡ್ ಡೆಲಿವರಿ, ಇತರೆ ಸರಕು ಸಾಗಾಣಿಕೆ ಕಂಪನಿ, ಏಜೆನ್ಸಿಯ ಪದಾಧಿಕಾರಿಗಳು ಇದ್ದರು.