ಶಿವಮೊಗ್ಗ: ಹಿಜಾಬ್ ಹಾಗು ಕೇಸರಿ ಶಾಲು ವಿವಾದ ನ್ಯಾಯಾಲಯದಲ್ಲಿದೆ. ಕೋರ್ಟ್ ಆದಷ್ಟು ಬೇಗ ತೀರ್ಪು ನೀಡುತ್ತದೆ. ಈ ವಿವಾದಿಂದ ನಷ್ಟವೇ ಹೊರತು ಯಾರಿಗೂ ಲಾಭ ಇಲ್ಲ. ಶಾಲಾ ಆಡಳಿತ ಮಂಡಳಿ ಹಾಗು ಸರಕಾರ ಮಧ್ಯಸ್ಥಿಕೆ ವಹಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದನ್ನು ಇಲ್ಲಿಗೆ ಸ್ಥಗಿತಗೊಳಿಸುವುದು ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲವೇ ಕೆಲವು ಭಾಗದಲ್ಲಿ ಈ ವಿವಾದ ಉಂಟಾಗಿದೆ. ರಾಜ್ಯದ ಎಲ್ಲಾ ಕಡೆಗಳಲ್ಲಿ ಈ ವಿವಾದ ಉಂಟಾಗಿಲ್ಲ. ಆದರೆ ಇದೀಗ ಶಾಂತಿ ನೆಲೆಸಿದೆ ಎಂದರು.
ಮುಸ್ಲಿಂ ವಿದ್ಯಾರ್ಥಿನಿಯರ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಾಬ್ರಿ ಮಸೀದಿ ತೀರ್ಪನ್ನು ಯಾವ ಮುಸ್ಲಿಮರು ಧಿಕ್ಕರಿಸಿಲ್ಲ. ಅದನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಯಾರೋ ಒಬ್ಬರು ಈ ಬಗ್ಗೆ ಟ್ವೀಟ್ ಮಾಡಿದರೆ ಎಲ್ಲಾ ಮುಸ್ಲಿಂರ ಅಭಿಪ್ರಾಯವಾಗುವುದಿಲ್ಲ. ಬಾಬ್ರಿ ಮಸೀದಿಯಲ್ಲಿ ಕಡಿಮೆ ಜಾಗ ಸಿಕ್ಕಿದರೂ ಸಹ ಅದನ್ನು ಅವರು ಸ್ವಾಗತ ಮಾಡಿದ್ದಾರೆ. ನ್ಯಾಯಾಲಯದ ವಿಷಯವನ್ನು ಎಲ್ಲರೂ ಸ್ವಾಗತ ಮಾಡಲೇ ಬೇಕು. ಒಂದೊಂದು ಬಾರಿ ಇಂತಹ ಸಮಸ್ಯೆ ಎದುರಾದಾಗ ನ್ಯಾಯಾಲಯ ಎಲ್ಲವನ್ನು ನೋಡಿ ತೀರ್ಪು ನೀಡಬೇಕಾಗುತ್ತದೆ. ಆದರೆ ಅಂತಿಮವಾಗಿ ಎಲ್ಲರೂ ನ್ಯಾಯಾಲಯ ತೀರ್ಪನ್ನು ಒಪ್ಪಲೇಬೇಕು ಎಂದರು.
ಇದನ್ನೂ ಓದಿ:ಅಲ್ಪಸಂಖ್ಯಾತರ ರಕ್ಷಣೆ ಹಿಂದೆಯೂ ಮಾಡಿದ್ದೇವೆ,ಇನ್ನೂ ಮಾಡುತ್ತೇವೆ:ಹಿಜಾಬ್ ವಿಚಾರಕ್ಕೆ ಡಿಕೆಶಿ
ಜಿ.ಪಂ. ಹಾಗು ತಾ.ಪಂ. ಚುನಾವಣೆ ವಿಳಂಬ ವಿಚಾರಕ್ಕೆ ಮಾತನಾಡಿದ ಸತೀಶ್ ಜಾರಕಿಹೊಳಿ, ಚುನಾವಣೆ ಮಾಡಬಾರದೆಂದು ಬಿಜೆಪಿಯವರು ಮೊದಲಿನಿಂದಲೂ ಕೆಲಸ ಮಾಡುತ್ತಿದ್ದಾರೆ. ಮೊದಲು ಚುನಾವಣೆಗೆ ಅವಕಾಶ ಇತ್ತು. ಆದರೆ ಅನಾವಶ್ಯಕವಾಗಿ ಒಂದು ಸಮಿತಿ ರಚಿಸಿದರು. ಸುಮ್ಮನೆ ಅದರ ಬಗ್ಗೆ ಹೊಸದಾಗಿ ಚರ್ಚೆ ನಡೆಸಿದರು. ಚುನಾವಣೆ ವಿಳಂಬ ಮಾಡುವ ಸಲುವಾಗಿಯೇ ಸಮಿತಿ ರಚನೆ ಮಾಡಿದ್ದಾರೆ. ಬಿಜೆಪಿಯವರಿಗೆ ಚುನಾವಣೆಗೆ ಹೋಗಲು ಇಷ್ಟವಿಲ್ಲ ಎಂದು ಟೀಕಿಸಿದರು.
ಗೋವಾದಲ್ಲಿ ಸರ್ಕಾರ ರಚನೆ: ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಕಳೆದ ಬಾರಿ 17 ಸ್ಥಾನ ಗೆದ್ದಿದ್ದೆವು. ಆದರೆ ನಮ್ಮ ತಪ್ಪಿನಿಂದ ಅಲ್ಲಿ ಸರಕಾರ ಕಳೆದುಕೊಂಡೆವು. ಈ ಬಾರಿ ಗೋವಾದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರಕಾರ ರಚನೆ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.