ಬೀದರ: ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಭಾರತದ ಸಂವಿಧಾನವನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಭೀಮಾ ಕೋರೆಗಾಂವ ಸೇನೆ ರಾಜ್ಯ ಘಟಕದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಭೀಮಾ ಕೋರೆಗಾಂವ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಬರೆದ ಸಂವಿಧಾನ ದಲಿತರಿಗಾಗಿ ಅಷ್ಟೇಯಲ್ಲ, ದೇಶದ ಎಲ್ಲ ನಾಗರಿಕರ ಎಳ್ಗೆಗಾಗಿ ರಚನೆಯಾಗಿದೆ. ಸರ್ವರಿಗೆ ಸಮಾನತೆ, ಪ್ರಜಾಪ್ರಭುತ್ವ ಎತ್ತಿ ಹಿಡಿದ ಮಹಾನಾಯಕರಾಗಿದ್ದಾರೆ ಎಂದರು.
ಭೀಮಾ ಕೋರೆಗಾಂವ ಘಟನೆಯನ್ನು ಅಂಬೇಡ್ಕರರ ದೃಷ್ಟಿಕೋನದಲ್ಲಿ ನೋಡುವ ಅಗತ್ಯವಾಗಿದೆ. ಇಲ್ಲಿ ಯಾರೂ ಓಟ್ ಬ್ಯಾಂಕ್ ಅಲ್ಲ. ಒಂದೇ ಸಮುದಾಯದಿಂದ ದೇಶ ನಡೆಯಲ್ಲ. ಇಲ್ಲಿ ಎಲ್ಲ ಧರ್ಮ, ಜಾತಿಗಳ ಹಾಗೂ ಸಮುದಾಯಗಳ ಸಹಕಾರ, ಬೆಂಬಲ ಅಗತ್ಯ ಎಂದರು.
ಹಕ್ಯಾಳ ಬುದ್ಧಭೂಮಿಯ ಶ್ರೀ ಧಮ್ಮನಾಗ ಭಂತೆಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೀಮಾ ಕೋರೆಗಾಂವ ವಿಜಯೋತ್ಸವ ದಲಿತರಗಷ್ಟೇ ಸೀಮಿತವಲ್ಲ. ಅಲ್ಲಿ ಹುತಾತ್ಮರಾಗಿದ್ದ 500 ಜನರಲ್ಲಿ 23 ಜನ ದಲಿತರು, 16 ಮರಾಠಿಗರು, 8 ಜನ ಮುಸ್ಲಿಮ ಮತ್ತು 2 ಕ್ರೈಸ್ತರು ಸಹ ಸೇರಿದ್ದರು ಎಂದು ತಿಳಿಸಿದರು.
ಹಿರಿಯ ದಲಿತ ಹೋರಾಟಗಾರ ಬಿ. ಗೋಪಾಲ ಮಾತನಾಡಿದರು. ಸೇನೆಯ ರಾಜ್ಯಾಧ್ಯಕ್ಷ ದೇವೇಂದ್ರ ಸೋನಿ ಅಧ್ಯಕ್ಷತೆ ವಹಿಸಿದ್ದರು. ಸೇನೆ ಜಿಲ್ಲಾಧ್ಯಕ್ಷ ರವಿ ಭೂಸಂಡೆ, ಅಂಬಾದಾಸ ಗಾಯಕವಾಡ, ಸಂಗು ಚಿದ್ರಿ, ರಾಜು ಜಯಂ, ತುಕಾರಾಮ ಕರಾಟೆ, ಅರಹಂತ ಸಾವಳೆ, ಸೈಯ್ಯದ್ ವಹೀದ್ ಲಖನ್, ಕಪಿಲ ಗೋಡಬಲೆ, ಮಹೇಶ ಮೈಲಾರಿ, ಸಂಗಪ್ಪ ಚಿದ್ರಿ, ಶಾಲಿವಾನ ಬಡಿಗೇರ, ಪ್ರಫುಲ್ ಸೋನಿ, ವೆಂಕಟ ಚಿದ್ರಿ, ಸಚಿನ ಗಿರಿ, ಗುಣವಂತ ಭಾವಿಕಟ್ಟಿ, ವಿಲಾಸ ಸಿಂಗಾರೆ, ಜಯಭೀಮ, ಸುದರ್ಶನ, ಸಿದ್ಧಾರ್ಥ ಇದ್ದರು.