ಕಟಪಾಡಿ: ಭಾರತ ಎಂದರೆ ಛತ್ರ ಅಲ್ಲ. ಭಾರತದ ಪೌರತ್ವದ ಬಗ್ಗೆ ನೋಂದಣಿ ಆವಶ್ಯಕ. ಹಾಗಾಗಿ ದಾಖಲಾತಿಗಳ ವಿವರಗಳ ನೋಂದಣಿಯ ಎನ್.ಆರ್.ಸಿ. ಯೋಜನೆಯಿಂದ ಯಾರಿಗೂ ತೊಂದರೆ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಶುಕ್ರವಾರ ಕಟಪಾಡಿ ಪೇಟೆಯಲ್ಲಿ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ -2019 ರ ಸಿ.ಎ.ಎ. ಮತ್ತು ಎನ್.ಆರ್.ಸಿ ಬೆಂಬಲಕ್ಕಾಗಿ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ನೆರೆಯ ಪಾಕಿಸ್ಥಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಆಕ್ರಮಣಕ್ಕೊಳಗಾದವರ ನೆರವಿಗೆ ಕಾಯ್ದೆ ಇದೆ. ಇಂದು ಬದುಕು ಕಟ್ಟಿಕೊಳ್ಳಲು, ತಾಯ್ನೆಲದ ಧರ್ಮವನ್ನು ಉಳಿಸಲು ಬಂದವರಿಗೆ ಬಂದಿದ್ದವರು ಧಾರ್ಮಿಕ ಆಕ್ರಮಣಕ್ಕೊಳಗಾದಂತಹವರಿಗಾಗಿ ಪೌರತ್ವವನ್ನು ನೀಡಲು, ಅವರ ಹಕ್ಕುಗಳನ್ನು ರಕ್ಷಿಸಲು ಈ ಪೌರತ್ವ ಕಾಯಿದೆ ರೂಪಿತವಾಗಿದೆ ಹೊರತಾಗಿ ಬೇರೆ ಏನೂ ಉದ್ದೇಶ ಇಲ್ಲ ಎಂದು ವಿವರಿಸಿದರು.
ಷಡ್ಯಂತ್ರ ಬಯಲು
ಚಿಂತಕ ಕುತ್ಯಾರು ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪೌರತ್ವ ಕಾಯಿದೆ ವಿರೋಧಿಸುವವರ ಷಡ್ಯಂತ್ರವನ್ನು ಬಯಲು ಮಾಡಲು ಈ ಜನಜಾಗೃತಿ ಸಮಾವೇಶ ನಡೆಯುತ್ತಿದೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ಕುರ್ಕಾಲು ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಆಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ರಾಘವೇಂದ್ರ ರಾವ್ ವಂದಿಸಿದರು. ಎನ್.ಆರ್. ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.