Advertisement

ನೊಬೆಲ್‌ ಪುರಸ್ಕೃತ ಡ್ಯುಫ್ಲೋ -ಬ್ಯಾನರ್ಜಿ

10:40 AM Oct 21, 2019 | mahesh |

ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ ಉದ್ಧಾರದ ಕೆಲಸ ಎಂದರೆ ಏನು? ಒಟ್ಟಿನಲ್ಲಿ ಯಾರದ್ದೋ ಬದುಕಿನ ಸಮಸ್ಯೆಯನ್ನು, ಯಾವ ಸಮಸ್ಯೆಯೂ ಇಲ್ಲದ ಮಂದಿ ಎಲ್ಲೋ ಕುಳಿತು ಊಹಿಸಿ ಸೂಚಿಸುವ ಪರಿಹಾರಗಳಲ್ಲವೆ?

Advertisement

ಅರ್ಥವಿಜ್ಞಾನದ ಸಮಕಾಲೀನ ಬೆಳವಣಿಗೆಗಳನ್ನು ನಿರಂತರ ಗಮನಿಸುತಿದ್ದವರಿಗೆ ಡ್ಯುಫ್ಲೋ ಮತ್ತು ಬ್ಯಾನರ್ಜಿ (duflo banerjee) ಎಂಬ ಅರ್ಥಶಾಸ್ತ್ರಜ್ಞ ಜೋಡಿಯ ಹೆಸರು ಚಿರಪರಿಚಿತ. ಭಾರತೀಯ ಸಂಜಾತ ಅಭಿಜಿತ್‌ ಬ್ಯಾನರ್ಜಿ ಮತ್ತು ಅವರ ಫ್ರೆಂಚ್‌ ಪತ್ನಿ ಎಸ್ತರ್‌ ಡ್ಯುಫ್ಲೋ ಈ ಜೋಡಿ. ಇವರು ಅಮೇರಿಕನ್‌ ಅರ್ಥಶಾಸ್ತ್ರಜ್ಞ ಮೈಕೆಲ್‌ ಕ್ರೆಮೆರ್‌ ಜತೆಗೆ 2019ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಮರ್ತ್ಯ ಸೇನ್‌ ಈ ಹಿಂದೆ ಈ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಅರ್ಥಶಾಸ್ತ್ರಜ್ಞ. ಬ್ಯಾನರ್ಜಿ ಈಗ ಭಾರತೀಯ ಪ್ರಜೆಯಲ್ಲ, ಸಂಜಾತ. ಈ ವ್ಯತ್ಯಾಸ ದೊಡ್ಡ ವಿಚಾರವೇನಲ್ಲ. ಯಾಕೆಂದರೆ, ಅಮರ್ತ್ಯ ಸೇನ್‌ ಭಾರತೀಯ ಪೌರತ್ವ ಉಳಿಸಿಕೊಂಡೇ ಪ್ರಶಸ್ತಿ ಪಡೆದಿದ್ದರೂ ಅವರೂ ಬ್ಯಾನರ್ಜಿಯವರಂತೆ ತಮ್ಮ ವೃತ್ತಿಜೀವನದುದ್ದಕ್ಕೂ ವಿದೇಶಗಳಲ್ಲಿಯೇ ನೆಲೆಸಿದ್ದವರು. ಇಬ್ಬರದ್ದೂ ಅಪೂರ್ವ ಸಾಧನೆ. ಅಮೆರಿಕನ್‌ ಮತ್ತು ಯುರೋಪಿಯನ್‌ ವಿದ್ವಾಂಸರ ಆಡುಂಬೊಲವಾಗಿರುವ ಅರ್ಥವಿಜ್ಞಾನ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸುವಷ್ಟು ಹೆಸರು ಸಂಪಾದಿಸುವುದು ಅಸಾಮಾನ್ಯ ಕೆಲಸ.

ಅಭಿವೃದ್ಧಿ ಕೇಂದ್ರಿತ ಸಂಶೋಧನೆ
ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಈರ್ವರೂ ಭಾರತದ ಬಡತನವನ್ನು ಅರ್ಥಮಾಡಿಕೊಳ್ಳಲು ತೊಡಗಿಸಿಕೊಂಡವರು. ಅಮರ್ತ್ಯ ಅವರು ತತ್ವಶಾಸ್ತ್ರಜ್ಞ ಕೂಡ. ಅವರ ಕೊಡುಗೆ ಕಲ್ಯಾಣ ಅರ್ಥಶಾಸ್ತ್ರದ ಸಿದ್ಧಾಂತ ಹಾಗೂ ಪರಿಕಾಲ್ಪನಿಕ ವಿಚಾರಗಳಲ್ಲಿ. ಬ್ಯಾನರ್ಜಿ ಮತ್ತು ಸಂಗಡಿಗರ ಸಂಶೋಧನೆ-ಕೊಡುಗೆಗಳಿ ರು ವುದು ಅರ್ಥಶಾಸ್ತ್ರದ ಪ್ರಾಯೋಗಿಕ ಆಯಾಮಗಳಿಗೆ. ಬಡತನ ಎನ್ನುವುದು ಸತ್ಯ. ಅಭಿವೃದ್ಧಿ ಎನ್ನುವುದು ಸಾಪೇಕ್ಷ ಸತ್ಯ. ಅಮರ್ತ್ಯ ಅಭಿವೃದ್ಧಿಯನ್ನು ಹೊಸ ಪರಿಕಲ್ಪನೆಗಳನ್ನು ಹುಟ್ಟುಹಾಕಿ, ಹೊಸ ಹೊಳಹಿನ ವ್ಯಾಖ್ಯೆಗಳನ್ನು ನೀಡಿದರೆ, ಬ್ಯಾನರ್ಜಿ ಅಭಿವೃದ್ಧಿಯ ಸಾಂಪ್ರದಾಯಿಕ ಅರ್ಥೈಸುವಿಕೆಯ ಪರಿಧಿಯಾಚೆಗೆ ಯೋಚಿಸಿದರು. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ ಉದ್ಧಾರದ ಕೆಲಸ ಎಂದರೆ ಏನು? ಅದು ಯಾರದ್ದೋ ಬದುಕಿನ ಸಮಸ್ಯೆಯನ್ನು, ಯಾವ ಸಮಸ್ಯೆಯೂ ಇಲ್ಲದ ಮಂದಿ ಎಲ್ಲೋ ಕುಳಿತು ಊಹಿಸಿ ಸೂಚಿಸುವ ಪರಿಹಾರಗಳಲ್ಲವೆ? ಈ ಪರಿಹಾರಗಳು ವಾಸ್ತವದಲ್ಲಿ ಬಡವರ ಬದುಕನ್ನು ಹಸನುಗೊಳಿಸುತ್ತವೆ ಎನ್ನುವ ಖಾತರಿ ಯಾವತ್ತೂ ಯಾರಿಗೂ ಇರುವುದಿಲ್ಲ. ಇಲ್ಲಿ ಬ್ಯಾನರ್ಜಿ ಮತ್ತು ಮತ್ತೀರ್ವರು ನೋಬೆಲ್‌ ವಿಜೇತರು ತಮ್ಮ ಇತರ ಸಂಗಡಿಗರೊಂದಿಗೆ ಸೇರಿ ಮಾಡಿದ ಕೆಲಸ ಇಷ್ಟೇ. ಬಡತನ ನಿರ್ಮೂಲನದ ಯೋಜನೆಗಳನ್ನು ಕೇವಲ ಅಂದಾಜಿನ ಆಧಾರದಲ್ಲಿ ಅಳವಡಿಸಿಕೊಳ್ಳುವ ಬದಲು ಮೊದಲಿಗೆ ಅಂತಹ ಯೋಜನೆಗಳು ಬಡವರ ಬದುಕಿನಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರುತ್ತವೆ ಎನ್ನುವುದನ್ನು ವೈಜ್ಞಾನಿಕವಾಗಿ ಕಂಡುಕೊಳ್ಳುವ ಒಂದು ವಿಧಾನವನ್ನು ಅವರು ಆವಿಷ್ಕರಿಸಿದರು. ಅದನ್ನು ಯಾದೃಚ್ಛಿಕ ನಿಯಂತ್ರಿತ ಪ್ರಯೋಗ (Randomized Controlled Trials ಅಥವಾ RCT) ಎನ್ನಲಾಗುತ್ತದೆ. ಸಾಂಪ್ರದಾಯಿಕ ಅರ್ಥಶಾಸ್ತ್ರ ಈ ಮಟ್ಟಿನ ಸೂಕ್ಷ್ಮ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಬ್ಯಾನರ್ಜಿ ಅವರ ಪ್ರಕಾರ ಹೀಗೆ ಮಾಡದೆ ಹೋದರೆ ಬಡತನ ನಿರ್ಮೂಲನದ ಹೆಸರಿನಲ್ಲಿ ಅಪಾರ ಹಣ ವ್ಯರ್ಥವಾಗುತ್ತದೆ.

ಉದಾಹರಣೆಗೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ವಿಚಾರವನ್ನೇ ತೆಗೆದುಕೊಳ್ಳಿ. ಸ್ಥೂಲವಾಗಿ, ಇದನ್ನು ಮಾಡಬೇಕು ಅಂತ ಎಲ್ಲರೂ ಒಪ್ಪುತ್ತಾರೆ. ಆದರೆ, ಇದು ಯಾವ ಪರಿಸರದಲ್ಲಿ ಯಾವ ಹಿನ್ನೆಲೆಯ ಮಕ್ಕಳಿಗೆ ಯಾವ ರೀತಿ ನೆರವಾಗುತ್ತದೆ ಎನ್ನುವ ಖಚಿತತೆ ಸರಕಾರಗಳ ಬಳಿ ಇರುವುದಿಲ್ಲ. ಅದೇ ರೀತಿ ಕಲಿಕಾ ಪರಿಸರದಲ್ಲಿ ಯಾವ ಬದಲಾವಣೆಗಳನ್ನು ಮಾಡಿದರೆ ಮಕ್ಕಳ ಕಲಿಕೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದರ ಮಾಹಿತಿಯೇ ಇಲ್ಲದೆ ಶಿಕ್ಷಣದಲ್ಲಿ ಮತ್ತೆ ಮತ್ತೆ ಬದಲಾವಣೆಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಸೂಕ್ತವಲ್ಲದ್ದನ್ನು ಸೂಕ್ತ ಹಿನ್ನೆಲೆಯ ಫ‌ಲಾನುಭವಿಗಳಿಗೆ ನೀಡದೇ ಹೋದರೆ ಮಾಡಿದ ವೆಚ್ಚ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತವೆ. ಹಾಗೆಂದು, ವೈಜ್ಞಾನಿಕ ಕ್ಷೇತ್ರದಲ್ಲಿ ನಡೆ ಯುವ ಪ್ರಯೋಗ, ಶಾಲೆಗಳ ಒಳಗೆ ನಡೆಯುವ ಈ ಯಾದೃಚ್ಛಿಕ ನಿಯಂತ್ರಿತ ಪ್ರಯೋಗ‌ಗಳನ್ನು ನಿಜ ಸಾಮಾಜಿಕ ಬದುಕಿನಲ್ಲಿ ನಡೆಸುವುದು ಕಷ್ಟ. ಅದು ಈ ಅರ್ಥಶಾಸ್ತ್ರಜ್ಞರಿಗೂ ಗೊತ್ತು. ಎಲ್ಲಾ ಬಡತನ ನಿರ್ಮೂಲನಾಯೋಜನೆಗಳ ವಿಚಾರದಲ್ಲಿ ಇದು ಸಾಧ್ಯವಿಲ್ಲ ಎಂದಾದರೂ ಇದನ್ನು ನಡೆಸಲು ಸಾಧ್ಯವಿರುವ ಅದೆಷ್ಟೋ ಯೋಜನೆಗಳನ್ನೂ ಸರಕಾರಗಳು ಹಮ್ಮಿಕೊಳ್ಳುತ್ತವೆ.

ಗೊತ್ತಿಲ್ಲದ ಸತ್ಯಗಳನ್ನು ಕಂಡುಕೊಳ್ಳಲು ಮತ್ತು ಸತ್ಯವನ್ನು ಸತ್ಯ ಅಂತ ಪುಷ್ಟೀಕರಿಸಲು ಸಂಕೀರ್ಣ ವಿಧಾನಗಳನ್ನು ಬಳಸಬೇಕಾಗುತ್ತದೆ. ಇದನ್ನು ವಿಜ್ಞಾನಗಳಲ್ಲಿ ಮಾಡುವಂತೆ ಸಾಮಾಜಿಕ ವಿಜ್ಞಾನವಾಗಿರುವ ಅರ್ಥಶಾಸ್ತ್ರದಲ್ಲಿ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಅರ್ಥಶಾಸ್ತ್ರದ ವೈಜ್ಞಾನಿಕ ಮಿತಿಯಾಗಿತ್ತು. ಈ ಮಿತಿಯನ್ನು ಅರ್ಥಶಾಸ್ತ್ರದ ಒಂದು ಶಾಖೆಯಲ್ಲಿ ಒಂದು ಹಂತದವರೆಗೆ ಮೀರುವ ಪ್ರಯತ್ನವನ್ನು ಈ ವರ್ಷದ ನೊಬೆಲ್‌ ವಿಜೇತರು ಮಾಡಿದ್ದಾರೆ ಮತ್ತು ಅದರಲ್ಲಿ ಒಂದು ಹಂತದ ಯಶಸ್ಸನ್ನು ಕಂಡಿದ್ದಾರೆ. ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಈ ಪ್ರಯೋಗಗಳು ಈಗ ವ್ಯಾಪಕವಾಗಿ ಒಂದು ಚಳವಳಿಯೋಪಾದಿಯಲ್ಲಿ ನಡೆಯುತ್ತಿವೆ.

Advertisement

ಸಾಮಾನ್ಯವಾಗಿ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪಾರಿತೋಷಕ ನೀಡುವುದು- ಹೊಸ ಪರಿಕಲ್ಪನೆಗಳು ಮತ್ತು ಹೊಸ ಸಿದ್ಧಾಂತಗಳನ್ನು ಆವಿಷ್ಕರಿಸಿ ಅರ್ಥಶಾಸ್ತ್ರೀಯ ಜ್ಞಾನವನ್ನು ವಿಸ್ತರಿಸುವ ಕೆಲಸಕ್ಕೆ. ಈ ಬಾರಿ ವಿಶೇಷ ಎನ್ನುವಂತೆ ಜ್ಞಾನವನ್ನು ವಿಸ್ತರಿಸುವಲ್ಲಿ ಹೊಸ ವಿಧಾನವೊಂದನ್ನು ಬಳಸಿಕೊಳ್ಳುವ ಸಾಧ್ಯತೆಯನ್ನು ತೋರಿಸಿದ್ದಕ್ಕಾಗಿ ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಲಾಗಿದೆ. ಈ ವಿಧಾನದ ಬಗ್ಗೆ, ಅದರ ಸಮರ್ಪಕತೆಯ ಬಗ್ಗೆ, ಅದರ ಪ್ರಸ್ತುತೆಯ ಬಗ್ಗೆ ತಕರಾರುಗಳಿವೆ. ಇಷ್ಟಕ್ಕೆ ನೊಬೆಲ್‌ ನೀಡಬೇಕಿತ್ತೇ ಎನ್ನುವ ಪ್ರಶ್ನೆ ನಾಳೆ ಮೂಡಿದರೂ ಮೂಡಬಹುದು. ಆದರೆ, ಈ ವಿಧಾನವನ್ನು ಬಳಸಿಕೊಂಡು ಬಡತನದ ಪರಿಹಾರೋಪಾಯಗಳ ಉಪಯುಕ್ತತೆ ಅಥವಾ ನಿರುಪಯುಕ್ತತೆಯನ್ನು ಹೆಚ್ಚು ಸಮರ್ಪಕವಾಗಿ ಕಂಡುಕೊಳ್ಳುವ ಮತ್ತು ತಾವು ಕಂಡುಕೊಂಡ ಸತ್ಯಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಸರಕಾರಗಳಿಗೆ ತಿಳಿಸುವ ಕಾಯಕವನ್ನು ಒಂದು ಪವಿತ್ರ ಯಜ್ಞ ಎನ್ನುವ ರೀತಿಯಲ್ಲಿ ಈ ಮೂವರು ವಿಜೇತರು ನಡೆಸಿಕೊಂಡು ಬಂದಿ¨ªಾರೆ. ಇದು ಅವರ ಸಂಶೋಧನ ಗಾಥೆಯ ಮಾನವೀಯ ಮುಖ. ಈ ಜಗತ್ತನ್ನು ಹೆಚ್ಚು ಮಾನವೀಯವಾಗಿಸುವ ವಿದ್ವತ್ತಿನ ಪ್ರಯತ್ನ, ಅದು ಸಣ್ಣದೇ ಆದರೂ, ಅದು ಹಲವು ಮಿತಿಗಳನ್ನು ಹೊಂದಿದ್ದರೂ, ಅದಕ್ಕೆ ಜಗತ್ತಿನ ಅತೀ ಶ್ರೇಷ್ಠ ಪ್ರಶಸ್ತಿ ಲಭಿಸಿದರೆ ಅದು ಸಂಭ್ರಮಿಸಬೇಕಾದ ವಿಚಾರ.

ಎ. ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next