Advertisement

ಬ್ಯಾಂಕಿಂಗ್‌ ಸಂಶೋಧಕರಿಗೆ ನೊಬೆಲ್‌ ಗೌರವ

02:29 PM Nov 15, 2022 | Team Udayavani |

ಮೂವರು ಅರ್ಥಶಾಸ್ತ್ರಜ್ಞರುಗಳಾದ ಅಮೆರಿಕದ ಫೆಡರಲ್‌ ರಿಸರ್ವ್‌ ನಲ್ಲಿ 2006ರಿಂದ 2014ರ ವರೆಗೆ ಅಧ್ಯಕ್ಷರಾಗಿದ್ದ ಬೆನ್‌ , ಚಿಕಾಗೊ ವಿ.ವಿ.ಯ ಡೊಗ್ಲಾಸ್‌ ಡಬ್ಲ್ಯು. ಡೈಮಂಡ್‌ ಮತ್ತು ಸೈಂಟ್‌ ಲೂಯಿಸ್‌ನ ವಾಷಿಂಗ್ಟನ್‌ ವಿ.ವಿ.ಯ ಫಿಲಿಪ್‌ ಎಚ್‌. ಡೈಬ್‌ವಿಗ್‌ ಅವರಿಗೆ ಅರ್ಥಶಾಸ್ತ್ರದಲ್ಲಿ ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿ ಲಭಿಸಿದೆ.

Advertisement

ಈ ಮೂವರು ಅರ್ಥಶಾಸ್ತ್ರಜ್ಞರ ಸಂಶೋಧನೆಯು ಆಧುನಿಕ ಬ್ಯಾಂಕಿಂಗ್‌ ಸಂಶೋಧನೆಗೆ ತಳಹದಿಯನ್ನೊದಗಿಸಿದೆ ಎಂದರೆ ತಪ್ಪಾ ಗದು. ಈ ಅರ್ಥಶಾಸ್ತ್ರಜ್ಞರ ನಾಲ್ಕು ದಶಕಗಳ ಹಿಂದಿನ ಸಂಶೋಧನೆ ಮತ್ತು ವಿಶ್ಲೇಷಣೆಗಳು ಆರ್ಥಿಕತೆಯ ಸುಸೂತ್ರ ಕಾರ್ಯಾಚರಣೆಗೆ, ಬ್ಯಾಂಕ್‌ಗಳ ಸುಸ್ಥಿತಿ ಮತ್ತು ದೃಢತೆಯ ಆವಶ್ಯಕತೆಯನ್ನು ಒತ್ತಿ ಹೇಳುತ್ತವೆ. ಅಷ್ಟೇ ಅಲ್ಲದೆ ಹಣಕಾಸಿನ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಬ್ಯಾಂಕ್‌ಗಳನ್ನು ಸದೃಢಗೊಳಿಸಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬ ವಿಷಯದ ಮೇಲೆ ಈ ಸಂಶೋಧನೆ ಬೆಳಕು ಚೆಲ್ಲಿದೆ. ಬ್ಯಾಂಕ್‌ಗಳ ಕುಸಿತ ಮತ್ತು ವಿಫ‌ಲತೆಗಳು ಹೇಗೆ ಸರ್ವವ್ಯಾಪಿಯಾಗಿ ಆರ್ಥಿಕ ವಿನಾಶಕ್ಕೆ ಕಾರಣವಾಗಬಹುದು ಎಂಬುದನ್ನು ಈ ಸಂಶೋಧನೆ ಬೆಟ್ಟು ಮಾಡಿ ತೋರಿಸಿದೆ.

ಅತೀ ದೊಡ್ಡ ಆಧುನಿಕ ಆರ್ಥಿಕ ಬಿಕ್ಕಟ್ಟಾದ 1930ರ ದಶಕದ ಅಮೆರಿಕದ ಬೃಹತ್‌ ಆರ್ಥಿಕ ಮುಗ್ಗಟ್ಟಿನ ಕುರಿತಾಗಿ ಬೆರ್ನಾನೆ ವಿಶ್ಲೇಷಿಸಿದ್ದಾರೆ ಮತ್ತು ಇಂತಹ ಬೃಹತ್‌ ಆರ್ಥಿಕ ಬಿಕ್ಕಟ್ಟು ಹೇಗೆ ಇತರ ಹಲವು ಆರ್ಥಿಕತೆಗಳನ್ನು ಬಹಳಷ್ಟು ಸಮಯ ಬಾಧಿಸಿತು ಎಂಬುದನ್ನು ವಿವರಿಸಿದ್ದಾರೆ.

ಪೂರಕ ಅಂಶ: ಬೆರ್ನಾನೆ ತಮ್ಮ 1983ರ ಲೇಖನವೊಂದರಲ್ಲಿ1930ರ ದಶಕದ ಬ್ಯಾಂಕ್‌ಗಳ ವಿಫ‌ಲತೆಗಳು ಆ ದಶಕದ ಅಮೆರಿಕದ ಬೃಹತ್‌ ಆರ್ಥಿಕ ಮುಗ್ಗಟ್ಟಿನ ಪರಿಣಾಮ ಮಾತ್ರವಲ್ಲ ಅದಕ್ಕೆ ಕಾರಣವಾದ ಪೂರಕ ಅಂಶ ಕೂಡ ಹೌದು ಎಂಬುದನ್ನು ವಿಷದಪಡಿಸಿದ್ದಾರೆ. ಅವರ ಪ್ರಕಾರ ಬ್ಯಾಂಕ್‌ ವಿಫ‌ಲತೆಗಳು 1930ರ ದಶಕದ ಅಮೆರಿಕದ ಬೃಹತ್‌ ಆರ್ಥಿಕ ಮುಗ್ಗಟ್ಟಿನ ತೀಕ್ಷ್ಣತೆಯನ್ನು ಹೆಚ್ಚಿಸಿದ್ದವು. ಅವರ ವಿವರಣೆಯ ಪ್ರಕಾರ ಉತ್ತಮ ಋಣ ಮಾರುಕಟ್ಟೆ ಆರ್ಥಿಕ ಸಂಕಷ್ಟದ ಸಮಯದಲ್ಲಿ ಆತಂಕ-ಆಘಾತಗಳನ್ನು ಮಿತಗೊಳಿಸುವಲ್ಲಿ ನೆರವಾಗುತ್ತದೆ.

ಬ್ಯಾಂಕ್‌ಗಳ ಕುಸಿತದಿಂದ ಬ್ಯಾಂಕ್‌ ಠೇವಣಿದಾರರಿಗೆ ಆಗುವ ಹೊಡೆತ ಮಾತ್ರವಲ್ಲದೆ; ಅತೀ ಪ್ರಮುಖವಾದ ಸಾಲ ಪಡೆದ ವ್ಯಕ್ತಿಗಳ ಕುರಿತಾದ ವಿವರ ಮತ್ತು ಮಾಹಿತಿ ಕಳೆದು ಹೋಗುವ ಭಯವಿದೆ. ಇದರಿಂದ ಬ್ಯಾಂಕ್‌ಗಳು ಉಳಿತಾಯಗಳನ್ನು ಹೂಡಿಕೆ ಮತ್ತು ವಿನಿಯೋಗಗಳನ್ನಾಗಿ ಪರಿವರ್ತಿಸಲು ತೊಂದರೆಯಾಗಬಹುದು. ಸಾಲ ನೀಡಿಕೆ ಮತ್ತು ಹೂಡಿಕೆಗಳು ಆರ್ಥಿಕ ಪುನರುಜ್ಜೀವನ ಅಥವಾ ಮರು ಚೇತನಕ್ಕೆ ಅತೀ ಮುಖ್ಯವಾಗಿದೆ ಎಂದು ಬೆರ್ನಾನೆR ಹೇಳಿದ್ದಾರೆ. ಈ ಹಿಂದಿನ ಅರ್ಥಶಾಸ್ತ್ರಜ್ಞರು ಬ್ಯಾಂಕ್‌ಗಳ ವಿಫ‌ಲತೆಯಿಂದ ಹಣ ಸರಬರಾಜಿನ ಕುಗ್ಗುವಿಕೆಯುಂಟಾಗಿ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ವಿವರಿಸಿದ್ದರು. ಆದರೆ ಬೆರ್ನಾನೆ ಬೇರೆಯೇ ಹಾದಿಯಲ್ಲಿ ಸಾಗಿದ್ದಾರೆ ಮತ್ತು ತಮ್ಮ ವಿಶ್ಲೇಷಣೆಯನ್ನು ಐತಿಹಾಸಿಕ ಮತ್ತು ದಾಖಲೆ ರೂಪದ ಸಾಕ್ಷ್ಯ ಹಾಗೂ ಪ್ರಾಯೋಗಿಕ ಅಂಕಿಅಂಶಗಳ ಮೂಲಕ ನಿರೂಪಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಉಪಶಮನ ಪ್ರಕ್ರಿಯೆಯಲ್ಲಿ ಬ್ಯಾಂಕ್‌ಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಬೆರ್ನಾನೆ ವಿವರಿಸಿದ್ದಾರೆ.

Advertisement

ಸೈದ್ಧಾಂತಿಕ ನಮೂನೆ: ಡೊಗ್ಲಾಸ್‌ ಡಬ್ಲ್ಯು. ಡೈಮಂಡ್‌ ಮತ್ತು ಫಿಲಿಪ್‌ ಎಚ್‌. ಡೈಬ್‌ವಿಗ್‌ 1970ರಲ್ಲಿ ಯೇಲ್‌ನಲ್ಲಿ ಡಾಕ್ಟರೆಟ್‌ ಪಡೆದರು. ಇವರಿಬ್ಬರು 1983ರಲ್ಲಿ ಜತೆ ಸೇರಿ ಆರ್ಥಿಕತೆಯಲ್ಲಿ ಬ್ಯಾಂಕ್‌ಗಳ ಪಾತ್ರದ ಕುರಿತು ಸೈದ್ಧಾಂತಿಕ ನಮೂನೆಯೊಂದನ್ನು ಅಭಿವೃದ್ಧಿಪಡಿಸಿದರು. ಆ ಮೂಲಕ ಠೇವಣಿದಾರರು ತಮ್ಮ ಠೇವಣಿ ವಾಪಸ್‌ ಪಡೆಯಲು ಒಂದೇ ಸಲ ಬ್ಯಾಂಕ್‌ಗೆ ಧಾವಿಸಿ ಬರುವ ಪ್ರಕ್ರಿಯೆಗೆ ಬ್ಯಾಂಕ್‌ಗಳು ಹೇಗೆ ಭೇದ್ಯವಾಗಿರುತ್ತವೆ ಎಂಬುದನ್ನು ಈ ಇಬ್ಬರು ಅರ್ಥಶಾಸ್ತ್ರಜ್ಞರುಗಳು ವಿವರಿಸಿದ್ದಾರೆ. ಠೇವಣಿದಾರರು ತಾವು ಕೇಳಿದ ಕೂಡಲೇ ತಮ್ಮ ಠೇವಣಿ ಹಣ ವಾಪಸು ಕೊಡಬೇಕೆಂದು ಬಯಸುತ್ತಾರೆ. ಎಲ್ಲ ಠೇವಣಿದಾರರು ಬ್ಯಾಂಕ್‌ ಸಂಕಷ್ಟದಲ್ಲಿದೆ ಎಂಬ ಗಾಳಿ ಸುದ್ದಿ ಕೇಳಿ ಒಮ್ಮೆಲೆ ಧಾವಿಸಿ ಬಂದು ಠೇವಣಿ ಹಿಂದಿರುಗಿಸಲು ಹೇಳಿದರೆ ಬ್ಯಾಂಕ್‌ಗಳಿಗೆ ಅದು ಸಾಧ್ಯವಾಗದು. ಏಕೆಂದರೆ ಎಲ್ಲ ಠೇವಣಿಗಳ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಬ್ಯಾಂಕ್‌ಗಳು ತಮ್ಮ ಗಳಿಕೆಗಾಗಿ ವಿವಿಧ ಅವಧಿಗಳ ಸಾಲ ನೀಡಿಕೆ ಮತ್ತು ವಿನಿಯೋಗಗಳನ್ನು ಮಾಡಬೇಕಾಗುತ್ತದೆ. ಒಟ್ಟು ಠೇವಣಿಗಳ ಒಂದು ನಿರ್ದಿಷ್ಟ ಭಾಗವನ್ನು ಮಾತ್ರ ದಿನ ನಿತ್ಯದ ಠೇವಣಿದಾರರ ಸಹಜ ಬೇಡಿಕೆಗಳ ಪೂರೈಕೆಗಾಗಿ ಇಟ್ಟುಕೊಳ್ಳುತ್ತವೆ. ಎಲ್ಲ ಠೇವಣಿಗಳನ್ನು ಒಮ್ಮೆಲೆ ಹಿಂದಿರುಗಿಸಲು ನಷ್ಟದ ಹೊರತಾಗಿಯೂ ಹೂಡಿಕೆಗಳನ್ನು ಹಿಂದೆಗೆಯಬೇಕಾಗುತ್ತದೆ. ಕೊಟ್ಟ ಎಲ್ಲ ಸಾಲಗಳನ್ನು ಹಿಂದೆ ಪಡೆಯಲು ಸಾಧ್ಯವಾಗದು. ಈ ರೀತಿ ಆದಾಗ ಎಲ್ಲ ಠೇವಣಿದಾರರು ದಿನನಿತ್ಯ ಬಂದು ಠೇವಣಿ ವಾಪಸಾತಿಗೆ ಬೇಡಿಕೆ ಇಟ್ಟರೆ ಬ್ಯಾಂಕ್‌ಗಳು ಸ್ವಾಭಾವಿಕವಾಗಿ ಕುಸಿತವನ್ನು ಅನುಭವಿಸಬಹುದು.

ಬ್ಯಾಂಕ್‌ಗಳ ಕುಸಿತ ಮತ್ತು ವಿಫ‌ಲತೆ ತಡೆಯಲು ಈ ಇಬ್ಬರು ಅರ್ಥ ಶಾಸ್ತ್ರಜ್ಞರು ಸೂಚಿಸಿದ ನಿವಾರಣೋಪಾಯಗಳೆಂದರೆ ಬ್ಯಾಂಕ್‌ ಠೇವಣಿಗಳಿಗೆ ಸರಕಾರದ ಭದ್ರತೆ, ಠೇವಣಿ ವಿಮೆ ಮತ್ತು ಕೇಂದ್ರೀಯ ಬ್ಯಾಂಕ್‌ನಿಂದ ಕೊನೆಯ ಆಶ್ರಯ ರೂಪದ ಸಾಲ ನೀಡಿಕೆ.

ಈಗ ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿ ನಿರ್ದಿಷ್ಟ ಮೊತ್ತದವರೆಗಿನ ಠೇವಣಿಗಳಿಗೆ ವಿಮಾ ಸೌಲಭ್ಯವಿದೆ. ಕೇಂದ್ರೀಯ ಬ್ಯಾಂಕ್‌ಗಳು ಕೊನೆಯ ಆಶ್ರಯ ರೂಪದ ಸಾಲಗಳನ್ನು ಬ್ಯಾಂಕ್‌ಗಳಿಗೆ ನೀಡುತ್ತವೆ.
ಬ್ಯಾಂಕ್‌ ಠೇವಣಿಗಳಿಗೆ ವಿಮಾ ಸೌಲಭ್ಯವಿದ್ದರೆ ಬ್ಯಾಂಕ್‌ ಸಂಕಷ್ಟದಲ್ಲಿದೆ ಎಂಬ ಗಾಳಿ ಸುದ್ದಿ ಹರಡಿದರೂ ಠೇವಣಿದಾರರು ಠೇವಣಿ ಹಿಂದೆ ಪಡೆಯಲು ಧಾವಿಸಿ ಬಂದು ಸರತಿಯ ಸಾಲಿನಲ್ಲಿ ನಿಲ್ಲುವುದಿಲ್ಲ.
ಹಣಕಾಸಿನ ಮಧ್ಯವರ್ತಿತನ: 1984ರ ತಮ್ಮ ಲೇಖನವೊಂದರಲ್ಲಿ ಡೊಗ್ಲಾಸ್‌ ಡೈಮಂಡ್‌ ಅವರು ಬ್ಯಾಂಕ್‌ಗಳು ಹೇಗೆ ಉಳಿತಾಯಗಾರರ ಮತ್ತು ಸಾಲ ಪಡೆಯುವವರ ನಡುವೆ ಮಧ್ಯವರ್ತಿಗಳಾಗಿ ಸಂಗ್ರಹಿಸಿದ ಠೇವಣಿಗಳನ್ನು ಉತ್ತಮ ಹೂಡಿಕೆಗಳನ್ನಾಗಿ ಮಾಡಬಹುದು ಎಂದು ಡೈಮಂಡ್‌ ವಿವರಿಸಿದ್ದಾರೆ. ಬೆರ್ನಾನೆR ಕೂಡ ಈ ವಿಷಯದ ಬಗ್ಗೆ ಪ್ರಸ್ತಾವಿಸಿದ್ದಾರೆ.

ಈ ಮೂವರು ಆರ್ಥಿಕ ತಜ್ಞರ ಸೈದ್ಧಾಂತಿಕ ಮತ್ತು ಪ್ರಯೋಗ ಆಧಾರಿತ ಜ್ಞಾನ ಬಳಸಿ ನೀಡಿದ ತೀರ್ಪು ಅಥವಾ ನಿರ್ಣಯಗಳು ಒಂದಕ್ಕೊಂದು ಪೂರಕವಾಗಿದ್ದು ಒಟ್ಟಾರೆಯಾಗಿ ಈ ಮೂವರು ಆರ್ಥಿಕತೆಯಲ್ಲಿ ಬ್ಯಾಂಕ್‌ಗಳ ಪ್ರಾಮುಖ್ಯ ಮತ್ತು ಉಪಯುಕ್ತ ಪಾತ್ರದ ಕುರಿತಾಗಿ ಬಹಳಷ್ಟು ಬೆಳಕು ಚೆಲ್ಲಿದ್ದಾರೆ.

ಮುಂದಿನ ವರ್ಷ ಜಾಗತಿಕ ಮಟ್ಟದಲ್ಲಿ ತೀವ್ರತೆರನಾದ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ ಮುನ್ನೆಚ್ಚರಿಕೆ ನೀಡಿದೆ. ಇಂಥ ಪರಿಸ್ಥಿತಿಯಲ್ಲಿ ಸರಕಾರ ಗಳು ಅಳವಡಿಸಿಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತಾಗಿ ಈ ವರ್ಷದ ನೊಬೆಲ್‌ ಪ್ರಶಸ್ತಿ ವಿಜೇತರು ಸೂಚ್ಯವಾಗಿ ತಿಳಿಸಿದ್ದಾರೆ.

ಇಂದಿನ ಗೊಂದಲಮಯ ವಾತಾವರಣ, ಬ್ಯಾಂಕಿಂಗ್‌ ವ್ಯೂಹ ಮುಂದೆ ಎದುರಿಸಬೇಕಾಗಬಹುದಾದ ಆಘಾತದ ಭಯವನ್ನು ಬಿಚ್ಚಿಟ್ಟಂತಿದೆ. ಈ ಮೂವರು ಅರ್ಥಶಾಸ್ತ್ರಜ್ಞರ ಸಂಶೋಧನೆ ಆಧಾರಿತ ತೀರ್ಪುಗಳು ಇಂದಿನ ಪರಿಸ್ಥಿತಿಯನ್ನು ಎದುರಿಸಲು ಸರಕಾರಗಳಿಗೆ, ಕೇಂದ್ರೀಯ ಬ್ಯಾಂಕ್‌ಗಳಿಗೆ, ಹಣಕಾಸಿನ ಮಾರುಕಟ್ಟೆ ನಿಯಂತ್ರಕರುಗಳಿಗೆ ಹಾಗೂ ಆರ್ಥಿಕ ನೀತಿಗಳನ್ನು ರೂಪಿಸುವವರಿಗೆ ಬಹಳ ಉಪಯುಕ್ತವಾಗಿದೆ.

-ಡಾ| ಕೆ. ಕೆ. ಅಮ್ಮಣ್ಣಾಯ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next