Advertisement

ಕನ್ನಡ ಕೃತಿ ಅನುವಾದಿಸಿದರೆ ನೊಬೆಲ್‌ ಖಚಿತ

12:53 PM Nov 13, 2017 | |

ಬೆಂಗಳೂರು: ಕನ್ನಡದಲ್ಲಿ ಶ್ರೇಷ್ಠ ಕೃತಿಗಳಿದ್ದು, ಅವು ಇಂಗ್ಲಿಷ್‌ಗೆ ಅನುವಾದಗೊಂಡರೆ ನೊಬೆಲ್‌ ಪ್ರಶಸ್ತಿ ಸಿಗುವುದರಲ್ಲಿ ಅನುಮಾನವಿಲ್ಲ ಎಂದು ಸಂಸದ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು. 

Advertisement

ಭಾಗವತರು ಸಾಂಸ್ಕೃತಿಕ ಟ್ರಸ್ಟ್‌ ಕನ್ನಡಭವನದ ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿಗಳಾದ ಗೋಪಾಲಕೃಷ್ಣ ಅಡಿಗ, ಎಂ.ಕೆ.ಇಂದಿರಾ, ಜಿ.ವಿ.ಅಯ್ಯರ್‌, ಡಾ.ದೇ.ಜವರೇಗೌಡ, ಟಿ.ಸುನಂದಮ್ಮ, ಬಿ.ಎಸ್‌.ರಂಗ, ವಾಣಿ ಹಾಗೂ ಪ್ರೊ.ಬಿ.ಚಂದ್ರಶೇಖರ ಅವರ ಜೀವನ ಕುರಿತು ಸಿನಿಮಾ ವಿಮರ್ಶಕ ಎನ್‌.ಎಸ್‌.ಶ್ರೀಧರಮೂರ್ತಿ “ಶತಮಾನೋತ್ಸವ ಸಂಭ್ರಮದಲ್ಲಿ ಅಷ್ಟ ದಿಗ್ಗಜರು’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಜ್ಞಾನಪೀಠ ಪುರಸ್ಕೃತ ಶಿವರಾಮಕಾರಂತ, ದ.ರಾ.ಬೇಂದ್ರೆ, ರಾಷ್ಟ್ರಕವಿ ಕುವೆಂಪು, ಪೂರ್ಣಚಂದ್ರತೇಜಸ್ವಿ, ಪಿ.ಲಂಕೇಶ್‌, ಗೋಪಾಕೃಷ್ಣ ಅಡಿಗ, ಯು.ಆರ್‌.ಅನಂತಮೂರ್ತಿ ಸೇರಿದಂತೆ ನಾಡಿನ ಅನೇಕ ಸಾಹಿತಿಗಳು ಶ್ರೇಷ್ಠ ಕೃತಿಗಳನ್ನು ಬರೆದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿಗಳು ಅವರ ಕೃತಿಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದರೆ ಈಗಾಗಲೇ ನೊಬೆಲ್‌ ಪ್ರಶಸ್ತಿ ಸಿಕ್ಕಿರುತ್ತಿತ್ತು. ಈಗಲಾದರೂ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಕನ್ನಡದ ಶ್ರೇಷ್ಠ ಕೃತಿಗಳನ್ನು ಅನುವಾದಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು. 

ಎಂ.ಕೆ.ಇಂದಿರಾ, ಶಿವರಾಮಕಾರಂತರು, ಜನಜೀವನದ ಪ್ರತಿಯೊಂದು ಘಟನೆಗಳನ್ನು ತಮ್ಮ ಕೃತಿಗಳಲ್ಲಿ ಅತ್ಯಂತ ಸೂಕ್ಷವಾಗಿ ಕಟ್ಟಿಕೊಟ್ಟಿದ್ದಾರೆ.ಎಂ.ಕೆ.ಇಂದಿರಾ ಅವರ “ಪಣಿಯಮ್ಮ’ ಕಾದಂಬರಿಯಲ್ಲಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬ್ರಾಹ್ಮಣ ಮಹಿಳೆಯರು ತಮ್ಮದಲ್ಲದ ತಪ್ಪಿಗೆ ಜೀವನ ಪೂರ್ತಿ ತಲೆ ಬೋಳಿಸಿಕೊಂಡು, ಬಿಳಿ ಸೀರೆ ಧರಿಸಿ ಜೀವನ ಪೂರ್ತಿ  ಕಳೆಯಬೇಕಾದ ಸಾಮಾಜಿಕ ವ್ಯವಸ್ಥೆಯ ಚಿತ್ರಣ “ಪಣಿಯಮ್ಮ’  ಕೃತಿ ಕಟ್ಟಿಕೊಟ್ಟಿದೆ.

Advertisement

ಓದುಗರಲ್ಲಿ ಹಲವು  ಪ್ರಶ್ನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ ಎಂದ ಅವರು,  ಇತಿಹಾಸದ ಸತ್ಯ ಘಟನೆಗಳಿಗೆ ಜೀವ ತುಂಬಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದರು.ಕನ್ನಡದ ವಿಶ್ವಕೋಶಕ್ಕೆ ಹಿರಿಯ ಸಾಹಿತಿ ದೇ.ಜವರೇಗೌಡ ಹಾಗೂ ಗೋಪಾಲ ಕೃಷ್ಣ ಅಡಿಗರ ಕೊಡುಗೆ ಅಪಾರ.

ಗದ್ಯ ಲೋಕದ ಪ್ರವರ್ಧಕ ದೇ.ಜವರೇಗೌಡರಾದರೆ, ಬಂಡಾಯದ ಪ್ರವರ್ಧಕ ಗೋಪಾಲಕೃಷ್ಣ ಅಡಿಗರು. ಇವರಿಬ್ಬರ ಸಾಹಿತ್ಯ ಯುವ ಜನತೆಗೆ ತಲುಪುವಂತಾಗಬೇಕು ಎಂದು ಅವರು ಆಶಿಸಿದರು.ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ನಿಸಾರ್‌ ಅಹ್ಮದ್‌ ಮಾತನಾಡಿ, ಹಿರಿಯ ಸಾಹಿತಿಗಳ ಕೃತಿಗಳು ಹಾಗೂ ಅವರ ಸೃಜನಾತ್ಮಕ ಬದುಕನ್ನು ಯುವ ಜನತೆಗೆ ತಲುಪಿಸುವಂತಹ ಕೆಲಸವಾಗಬೇಕು.

ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸುವ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್‌, ಹಿರಿಯ ಸಾಹಿತಿ ಕೆ.ಸತ್ಯನಾರಾಯಣ, ಸಿನಿಮಾ ವಿಮರ್ಶಕ ಶ್ರೀಧರ ಮೂರ್ತಿ, ಭಾಗವತರು ಟ್ರಸ್ಟ್‌ನ ಅಧ್ಯಕ್ಷ ಕೆ.ರೇವಣ್ಣ, ಗೌರವ ಅಧ್ಯಕ್ಷ ಡಾ.ಸುನೀಲ್‌ ಮಲ್ಲೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next