ನೀ ಮುನಿದು ಮೂತಿ ಸೊಟ್ಟಗೆ ಮಾಡಿಕೊಂಡು ಕೂತರೂ ಬಿಡದೆ, ಕಾಡಿ ನಗಿಸುತ್ತೇನಲ್ಲ, ಕನಸು ಮನಸಿನಲ್ಲೂ ನಿನ್ನೊಳಿತನ್ನೇ ಬಯಸುತ್ತೇನಲ್ಲ; ಅದು ನನ್ನ ಪ್ರೀತಿ. ಅದಷ್ಟೇ ನನ್ನ ಪ್ರೀತಿ. ಪ್ರೀತಿ ಎಂದರೆ ಇಷ್ಟೇ, ಇಷ್ಟಕ್ಕಷ್ಟೇ ಸೀಮಿತ ಎನ್ನುವ ಚೌಕಟ್ಟಿನೊಳಗೆ ಕೂತು ಇಷ್ಟಿಷ್ಟೇ ಪ್ರೀತಿಸುವುದು ನನ್ನಿಂದ ಸಾಧ್ಯವೇ ಇಲ್ಲ.
ನೀನು ನನ್ನನ್ನೇ ಪ್ರೀತಿಸಬೇಕೆಂದು, ಪದೇ ಪದೆ ಬೊಬ್ಬೆ ಹೊಡೆಯುವ ನನಗೆ “ನಿನಗೆ ಪ್ರೀತಿಸುವುದೇ ಗೊತ್ತಿಲ್ಲ’ ಅಂತ ನಿನ್ನನ್ನು ಬಿಟ್ಟು ಮತ್ತಿನ್ಯಾರೋ ಒದರಿದಾಗ, ಕುಸಿದು ಹೋಗಿದ್ದೆ. ಅಲ್ಲಿಂದಲೇ ನೋಡು ನನ್ನ ಪ್ರೀತಿಯನ್ನು ನಾನೇ ಶಂಕಿಸಲು ಶುರು ಮಾಡಿದ್ದು. ನಾನು ಈ ಜಗತ್ತಿನ ಎಲ್ಲರಂತೆ ಪ್ರೀತಿಸುವುದನ್ನು ಯಾವತ್ತೂ ಕಲಿಯಲೇ ಇಲ್ಲ. ಬಹುಶಃ ನಿನ್ನ ಆಲೋಚನೆಗಳಲ್ಲೂ ಇದು ಸುಳಿದಾಡಿರಬಹುದು.
ನನ್ನ ಪ್ರೀತಿಯನ್ನು, ಈ ಜಗತ್ತು ಪ್ರೀತಿಯೇ ಅಲ್ಲವೆಂದು ಸಾಬೀತುಪಡಿಸಲೂಬಹುದು ಅಥವಾ ನನ್ನ ಪ್ರೀತಿಯೇ ಶ್ರೇಷ್ಠ ಎಂದು ಕಿರೀಟ ತೊಡಿಸಲೂಬಹುದು. ಬಿಡು, ಜಗತ್ತು ಪ್ರತಿಯೊಂದನ್ನೂ ಅಳೆದು, ತೂಗಿ ತನಗೆ ಬೇಕಾದಂತೆ ಅರ್ಥೈಸಿ, ತೀರ್ಪು ಕೊಟ್ಟು ತಮಾಷೆ ನೋಡುತ್ತದೆ. ಅಂಥ ಜಗದ ಗೊಡವೆ ನನಗೇಕೆ(?). ನನ್ನನ್ನು ಒಪ್ಪಬೇಕಾದವನು ನೀನೇ, ಮೆಚ್ಚಬೇಕಾದವನು ನೀನೇ, ತಪ್ಪಾದಾಗ ತಿದ್ದಿ ಬುದ್ಧಿ ಹೇಳುವವನೂ ನೀನೇ, ನೋವಾದಾಗ ಅಪ್ಪಿ ಸಂತೈಸುವವನೂ ನೀನೇ. ಹೀಗಿರೋವಾಗ ಜಗತ್ತು ಏನೆಂದರೆ ನನಗೇನು? ನನ್ನೆದೆಯೊಳಗಿನ ಪ್ರೀತಿಯ ಕಂಪು, ನನ್ನೊಳಗೆ ಅಡಗಿರುವ ನಿನ್ನ ಮೂಗಿಗೆ ಅಡರಿದರಷ್ಟೇ ಸಾಕು.
ನಿನ್ನ ಉಸಿರಿನಲ್ಲಿ ಚೂರು ಏರಿಳಿತವಾದರೂ ಭೂಮಿಯೇ ತಲೆಕೆಳಕಾದಂತೆ ಚಡಪಡಿಸುತ್ತೇನಲ್ಲ, ನೀನು ಮೆಲ್ಲಗೆ ಎಡವಿದರೂ ನನ್ನ ಕಣ್ಣುಗಳಲ್ಲಿ ಕಂಬನಿ ಜಿನುಗುತ್ತಲ್ಲ, ನೀ ಮುನಿದು ಮೂತಿ ಸೊಟ್ಟಗೆ ಮಾಡಿ ಕೂತರೂ ಬಿಡದೆ, ಕಾಡಿ ನಗಿಸುತ್ತೇನಲ್ಲ, ಕನಸು ಮನಸಿನಲ್ಲೂ ನಿನ್ನೊಳಿತನ್ನೇ ಬಯಸುತ್ತೇನಲ್ಲ ಅದು ನನ್ನ ಪ್ರೀತಿ; ಅದಷ್ಟೇ ನನ್ನ ಪ್ರೀತಿ. ಪ್ರೀತಿ ಎಂದರೆ ಇಷ್ಟೇ, ಇಷ್ಟಕ್ಕಷ್ಟೇ ಸೀಮಿತ ಎನ್ನುವ ಚೌಕಟ್ಟಿನೊಳಗೆ ಕೂತು ಇಷ್ಟಿಷ್ಟೇ ಪ್ರೀತಿಸುವುದು ನನ್ನಿಂದ ಸಾಧ್ಯವೇ ಇಲ್ಲ. ತಾಯಿಯೊಬ್ಬಳು ತನ್ನ ಮಗುವನ್ನು ಪ್ರೀತಿಸುವಷ್ಟು, ಹಸುವೊಂದು ಕರುವನ್ನು ಪ್ರೀತಿಸುವಷ್ಟು, ಭಕ್ತನೊಬ್ಬ ತನ್ನ ದೇವರನ್ನು ಪ್ರೀತಿಸುವಷ್ಟು ಧಾರಾಳವಾಗಿ ಪ್ರೀತಿಸಿಬಿಡಬೇಕು.
ಜಗತ್ತಿನ ಕಣ್ಣಿಗೆ ಪ್ರೀತಿ ಎಂದರೆ, ಕೇವಲ ಗಂಡು ಹೆಣ್ಣಿನ ನಡುವೆ ಹುಟ್ಟುವ ಪರಸ್ಪರ ವ್ಯಾಮೋಹ. ನನ್ನ ಪ್ರೀತಿಗೂ, ಜಗತ್ತು ಅರ್ಥೈಸುವ ಪ್ರೀತಿಗೂ ಹಲವು ವ್ಯತ್ಯಾಸಗಳಿರಬಹುದು. ಪ್ರೀತಿಯನ್ನೂ ಮಾತಿನಲ್ಲೇ ತೋರಿಸಲು ನಾನು ಕಲಿಯದೇ ಇರಬಹುದು. ಕೊನೆಯವರೆಗೂ ಹೀಗೆಯೇ ಪ್ರೀತಿಸಿ ಸಾಯುತ್ತೇನೋ ಏನೋ? ಅದೂ ಗೊತ್ತಿಲ್ಲ. ಆದರೆ ನನ್ನೀ ಉಸಿರಿಗಿಂತ, ನನ್ನೊಳಗಿರುವ ನಿನ್ನನ್ನೇ ಹೆಚ್ಚು ಪ್ರೀತಿಸುತ್ತಿದ್ದೇನೆ ಎಂಬುದು ಸತ್ಯ, ನನ್ನ ಪ್ರೀತಿಯಷ್ಟೇ ಸತ್ಯ ಕಣೋ.
ಸತ್ಯಾ ಗಿರೀಶ್