ನವದೆಹಲಿ: ಬಿಸಿಸಿಐನಲ್ಲಿ ಹಲವು ಸುತ್ತಿನ ಪ್ರಮುಖ ಬದಲಾವಣೆಗಳನ್ನು ಮಾಡಿ ಮುಗಿಸಿರುವ, ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು, ಇನ್ನೊಂದು ಪ್ರಮುಖ ನಿರ್ಧಾರ ಮಾಡಿದ್ದಾರೆ.
ಇನ್ನು ಮುಂದೆ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಧಾನ ಕಾರ್ಯದರ್ಶಿಯ ಪಾತ್ರ ಇರುವುದಿಲ್ಲ. ಆಯ್ಕೆ ಮಂಡಳಿ ಸ್ವತಂತ್ರವಾಗಿ ಆಯ್ಕೆ ಮಾಡಲಿದೆ. ವಿದೇಶಿ ಸರಣಿಗಳಿಗೆ ಅಗತ್ಯಬಿದ್ದರೆ, ಆಡಳಿತ ವ್ಯವಸ್ಥಾಪಕರು ಕೈಜೋಡಿಸಲಿದ್ದಾರೆ.
ಈಗಾಗಲೇ ಬಿಸಿಸಿಐಗೆ ಸಿಇಒ ಆಯ್ಕೆಯಾಗಿರುವುದರಿಂದ ಕಾರ್ಯದರ್ಶಿ ಗಳ ಕೆಲಸ ಏನು ಎಂಬ ಪ್ರಶ್ನೆ ಉದ್ಭವಿಸಿತ್ತು. ಕಾರ್ಯದರ್ಶಿ ಮಾಡುವ ಎಲ್ಲ ಕೆಲಸ ಸಿಇಒ ವ್ಯಾಪ್ತಿಯಲ್ಲಿ ಬರುತ್ತದೆ. ಇದೀಗ ಆಯ್ಕೆ ಸಮಿತಿ ಸಭೆ ಆಯೋಜಿಸುವ; ತಂಡದ ಆಯ್ಕೆ ಅಂತಿಮಗೊಳಿಸುವ ಅಧಿಕಾರವನ್ನೂ ಕಿತ್ತುಕೊಂಡಿರುವುದರಿಂದ, ಬಿಸಿಸಿಐನಲ್ಲಿ ಕಾರ್ಯದರ್ಶಿಗಳ ಕೆಲಸ ಇನ್ನು ನಾಮಕಾವಾಸ್ತೆಗೆ ಮಾತ್ರ ಇರಲಿದೆ.
ಮುಂದಿನ ದಿನಗಳಲ್ಲಿ ಅದನ್ನು ರದ್ದುಗೊಳಿಸಲೂಬಹುದು!ತಂಡದ ಆಯ್ಕೆ ಸಭೆಯನ್ನು ಬಿಸಿಸಿಐ ಕಾರ್ಯದರ್ಶಿ ನಡೆಸಬಾರದು ಹಾಗೂ ಆಟಗಾರರನ್ನು ಬದಲಿಸಲು ಕಾರದರ್ಶಿಯ ಅನುಮತಿ ಅಗತ್ಯವಿಲ್ಲ ಎಂದು ಲೋಧಾ ಸಮಿತಿ ಶಿಫಾರಸಿನಲ್ಲಿ ಹೇಳಿದ ನಂತರವೂ, ಅದೇ ಪ್ರಕ್ರಿಯೆ ಮುಂದುವರಿದಿತ್ತು. ಆದ್ದರಿಂದ ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಮುಖ್ಯ ಆಡಳಿತಾಧಿಕಾರಿಗಳು ಹೇಳಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕು. ಈ ಕ್ರಮದಿಂದ ಪ್ರಸ್ತುತ ಕಾರ್ಯದರ್ಶಿ ಅಮಿತಾಭ್ ಚೌಧರಿ ತೀವ್ರ ಮುಜುಗರಕ್ಕೀಡಾಗಿದ್ದಾರೆ.
ಐಪಿಎಲ್ ಫ್ರಾಂಚೈಸಿಗಳ ಸಂಘ?
ಮುಂಬೈ: ಬಿಸಿಸಿಐನಲ್ಲಿ ಸುಧಾರಣೆ ಮಾಡಿರುವ ಆಡಳಿತಾಧಿಕಾರಿಗಳು, ಐಪಿಎಲ್‌ನಲ್ಲೂ ಅತ್ಯಂತ
ವಿವಾದಾತ್ಮಕವಾದ ಬದಲಾವಣೆಗೆ ಕೈಹಾಕಿದ್ದಾರೆ ಎನ್ನಲಾಗಿದೆ.
ಐಪಿಎಲ್‌ನ ಎಲ್ಲ ಫ್ರಾಂಚೈಸಿಗಳ ಸಂಘ ಸ್ಥಾಪಿಸುವುದು, ತಮ್ಮ ಎಲ್ಲ ಸಮಸ್ಯೆಗಳನ್ನು ಇದರ ಮೂಲಕವೇ ಫ್ರಾಂಚೈಸಿಗಳು ಬಗೆಹರಿಸಿಕೊಳ್ಳುವುದು! ಇದು ನೇರವಾಗಿ ಐಪಿಎಲ್‌ನ ಮೇಲೆ
ಬಿಸಿಸಿಐಗಿರುವ ಹಿಡಿತವನ್ನೇ ಇಲ್ಲವಾಗಿಸುತ್ತದೆ. ಇದನ್ನು ಬಿಸಿಸಿಐ ಒಳವಲಯ ಹೇಗೆ ಸ್ವೀಕರಿಸುತ್ತವೆ ಎಂದು ಕಾದು ನೋಡಬೇಕು.