Advertisement
ಮಂಗಳವಾರ ವಿಧಾನಸೌಧದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಅಧಿಕಾರಿ ಚಂದ್ರಶೇಖರ್ ಮರಣ ಪತ್ರದಲ್ಲಿ ನನ್ನ ಹೆಸರು ಏಕೆ ಬರೆದಿದ್ದಾರೆಂದು ಗೊತ್ತಿಲ್ಲ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ತಮಗೆ ತಾವೇ ಪ್ರಮಾಣೀಕರಿಸಿಕೊಂಡರು.ನಿಗಮದಲ್ಲಿ ಇಂತಹದೊಂದು ಘಟನೆ ನಡೆದಿದೆ ಎನ್ನುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ನಾವೆಲ್ಲರೂ ಲೋಕಸಭೆ, ವಿಧಾನಪರಿಷತ್ ಚುನಾವಣಾ ಕಾರ್ಯದಲ್ಲಿದ್ದೆವು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಲಾಖೆ ಹಾಗೂ ನಿಗಮದ ವ್ಯವಹಾರಗಳಲ್ಲಿ ತಲೆ ಹಾಕಿಲ್ಲ. ನಾನು ಯಾವುದೇ ಆದೇಶ ನೀಡುವುದಾದರೂ ದಾಖಲೆ ಸಮೇತ ಸಹಿ ಮಾಡಿಯೇ ಕೊಡುತ್ತೇನೆ. ಮೌಖೀಕ ಆದೇಶಗಳನ್ನೆಲ್ಲಾ ಕೊಡುವವನಲ್ಲ. ಆದರೂ ನನ್ನ ಹೆಸರು ಹೇಗೆ ಥಳಕು ಹಾಕಿಕೊಂಡಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಸಮರ್ಥಿಸಿಕೊಂಡರು.
ನಿಗಮದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 187 ಕೋಟಿ ರೂ. ಹಣವಿಡಲಾಗಿತ್ತು. ಈ ಪೈಕಿ 87 ಕೋಟಿ ರೂ.ಗಳು ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್‌ನಲ್ಲಿನ ಅನಧಿಕೃತ ಖಾತೆಗೆ ವರ್ಗಾವಣೆ ಆಗಿದೆ. ಮಾರ್ಚ್ 30 ರಂದು ಈ ಘಟನೆ ನಡೆದಿದ್ದು, ಇದುವರೆಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ಮಾಧ್ಯಮಗಳ ವರದಿ ನೋಡಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ.ಪದ್ಮನಾಭ ಅವರನ್ನು ವಿಚಾರಿಸಿದಾಗ ಈ ಬಗ್ಗೆ ವಿವರಿಸಿದರು. ಸೋಮವಾರ ಸಂಜೆಯೊಳಗೆ ಅಷ್ಟೂ ಹಣ ಬ್ಯಾಂಕ್ ಖಾತೆಯಲ್ಲಿ ಇರಬೇಕು ಎಂದು ಸೂಚಿಸಿದ್ದೆ. ಅಷ್ಟರಲ್ಲಿ ಲೆಕ್ಕಾಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
Related Articles
ಇಷ್ಟೆಲ್ಲಾ ನಡೆದರೂ ನಿಗಮದ ಎಂಡಿಯಾಗಲೀ, ಯಾವ ಸಿಬ್ಬಂದಿಯೂ ನನ್ನ ಗಮನಕ್ಕೆ ತಂದಿಲ್ಲ. ಇದರ ಸಲುವಾಗಿಯೇ ಸೋಮವಾರ ಸಿಎಂ ಮತ್ತು ಡಿಸಿಎಂ ಅವರ ಗಮನಕ್ಕೂ ತಂದಿದ್ದು ತಕ್ಷಣವೇ ಇದನ್ನು ಸಿಐಡಿ ತನಿಖೆಗೂ ವಹಿಸಲಾಗಿದೆ. ನಿಗಮದ ಎಂಡಿ ಪದ್ಮನಾಭ, ಮತ್ತೋರ್ವ ಅಧಿಕಾರಿ ದುರ್ಗಣ್ಣ ಪ್ರಶಾಂತ್ ಮತ್ತು ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕಿ ಶುಚಿಸ್ಮಿತಾ ರಾಹುಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಐಡಿ ಅಧಿಕಾರಿಗಳು ಶಿವಮೊಗ್ಗಕ್ಕೂ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಎಂದರು.
Advertisement
ನಿಗಮದ ಎಂಡಿ ಸಹಿಯೂ ನಕಲು: ಇದೆಲ್ಲದರ ಮಧ್ಯೆ ನಿಗಮದ ಎಂಡಿ ಪದ್ಮನಾಭ ಕೂಡ ಪೊಲೀಸರಿಗೆ ಮತ್ತೊಂದು ದೂರು ಕೊಟ್ಟಿದ್ದು, ತಮ್ಮ ಸಹಿಯನ್ನು ನಕಲು ಮಾಡಿ ಯಾರೋ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಅದರ ವರದಿಗಾಗಿ ಕಾಯುತ್ತಿದ್ದೇವೆ. ನಿಗಮ ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿಯೇ ಈ ಕೃತ್ಯ ಎಸಗಿರುವಂತಿದೆ. 87 ಕೋಟಿ ರೂ.ಗಳಲ್ಲಿ 26 ಕೋಟಿ ರೂ. ವಾಪಸ್ ಬಂದಿದ್ದು ಉಳಿದ ಹಣ ವಾಪಸ್ ತರುವ ಜವಾಬ್ದಾರಿಯನ್ನು ನಿಗಮದ ಎಂಡಿಗೆ ವಹಿಸಿದ್ದೇವೆ. ಹೀಗಾಗಿ ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಸಿಐಡಿ ತನಿಖಾ ವರದಿ ಹಾಗೂ ಎಫ್ಎಸ್‌ಎಲ್ ವರದಿ ಬಂದ ಬಳಿಕ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಜರುಗಿಸದೇ ಬಿಡುವುದಿಲ್ಲ. ಎಂಡಿಯನ್ನು ಸೇವೆಯಿಂದ ವಜಾ ಮಾಡಲೂ ಹಿಂಜರಿಯುವುದಿಲ್ಲ ಎಂದು ಹೇಳಿದರು. ಎಲ್ಲದಕ್ಕೂ ವಿರೋಧ ಪಕ್ಷದವರು ಇದೇ ರೀತಿಯ ಹೇಳಿಕೆ ಕೊಡುತ್ತಲೇ ಇದ್ದಾರೆ. ಏಕೆ ಆತ್ಮಹತ್ಯೆ ಆಯಿತು ಇತ್ಯಾದಿಗಳನ್ನು ತಿಳಿದು ಮಾತನಾಡಬೇಕು. ಅತಿರೇಕದ ಹೇಳಿಕೆಗಳನ್ನೇ ಕೊಡುತ್ತಿದ್ದಾರೆ. ಅವರ ಕಾಲದಲ್ಲಿ ಯಾವ ರೀತಿ ಆಡಳಿತ ಮಾಡಿದ್ದಾರೆ ಎಂಬುದನ್ನು ನೋಡಿದ್ದೇವೆ. ವಿಷಯ ತಿಳಿದು ಮಾತನಾಡಿದರೆ ಒಳ್ಳೆಯದು ಅವರು.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ