Advertisement
ಆದರೆ, ಕಲ್ಯಾಣ ಕರ್ನಾಟಕ ಮತ್ತು ಉದ್ದೇಶಿತ ಕಿತ್ತೂರು ಕರ್ನಾಟಕ ಭಾಗಗಳ ಜನರ ಬೇಡಿಕೆ ಈ ಬಜೆಟ್‌ನಲ್ಲಿ ನೀಗಬಹುದೆಂಬ ನಿರೀಕ್ಷೆಯಂತೂ ಇದ್ದೇ ಇದೆ. ಕಲ್ಯಾಣ ಕರ್ನಾಟಕ ಮರುನಾಮಕರಣಗೊಂಡ ನಂತರ ಆ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಸೇರಿ ಆರು ಜಿಲ್ಲೆಗಳಿಗೆ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆಯಾಗುತ್ತದೆಂಬ ನಿರೀಕ್ಷೆಯಿತ್ತು.
Related Articles
Advertisement
ಹೆಚ್ಚಾಗದ ಅನುದಾನ: ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಿದ್ದರಾಮಯ್ಯ ಅವಧಿಯಲ್ಲಿ 1,500 ಕೋಟಿ ರೂ. ಮೀಸಲಿಡಲಾಗಿತ್ತು. ಆ ನಂತರ ಅಧಿಕಾರಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ (ಅಂದಿನ ಹೈದರಾಬಾದ್ ಕರ್ನಾಟಕ) ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವಂತೆ ಆ ಭಾಗದ ಎಲ್ಲ ಶಾಸಕರು ಪಕ್ಷ ಭೇದ ಮರೆತು ಮನವಿ ಸಲ್ಲಿಸಿದ್ದರು. ಅವರ ಮನವಿಯಂತೆ ವಿಶೇಷ ಪ್ಯಾಕೇಜ್ ನೀಡಲು ಯೋಜನೆಗಳ ನೀಲನಕ್ಷೆ ಸಿದ್ದಪಡಿ ಸುವಂತೆಯೂ ಕುಮಾರಸ್ವಾಮಿ ಸೂಚಿಸಿದ್ದರು. ಆದರೆ, ಮೈತ್ರಿ ಸರ್ಕಾರ ಪತನಗೊಂಡ ನಂತರ 1 ಸಾವಿರ ಕೋಟಿಯ ವಿಶೇಷ ಯೋಜನೆ ಸ್ಥಗಿತಗೊಂಡಿದೆ.
2 ಸಾವಿರ ಕೋಟಿಗೆ ಬೇಡಿಕೆ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನ ನೀಡುವಂತೆ ಆ ಭಾಗದ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಣೆ ಮಾಡುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಮೂಲಕ ಆ ಭಾಗದ ಪ್ರಮುಖ ಬೇಡಿಕೆಗಳಾದ ಯಾದಗಿರಿಯಲ್ಲಿ ಜವಳಿ ಪಾರ್ಕ್, ಕಲಬುರಗಿ ರೈಲ್ವೆ ವಲಯ ಸ್ಥಾಪನೆ, ಕಾರಂಜಾ ಏತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ಕೆರೆ ತುಂಬಿಸುವ ಯೋಜನೆಗಳು, ಕೊಪ್ಪಳ ಎಂಜಿನಿಯ ರಿಂಗ್ ಕಾಲೇಜು ಹಾಗೂ ಬೀದರ್ ರಿಂಗ್ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಮುಂಬೈ -ಕಿತ್ತೂರು ಕರ್ನಾಟಕವಾಗುವ ನಿರೀಕ್ಷೆ: ಕರ್ನಾಟಕ ಏಕೀಕರಣವಾದ ನಂತರ ಮುಂಬೈ ಹಾಗೂ ಹೈದರಾಬಾದ್ ಪ್ರಾಂತ್ಯಗಳಿಗೆ ಸೇರಿದ ಪ್ರದೇಶಗಳನ್ನು ಅದೇ ಹೆಸರಿನಿಂದ ಕರೆಯುವ ಪ್ರವೃತ್ತಿ ಮುಂದುವರಿ ದಿತ್ತು. ಆ ಹೆಸರುಗಳನ್ನು ಬದಲಾಯಿಸುವಂತೆ ಸಂಶೋಧಕ ದಿವಂಗತ ಎಂ.ಚಿದಾನಂದ ಮೂರ್ತಿ ಸರ್ಕಾರಕ್ಕೆ ಆಗ್ರಹಿಸಿದ್ದರು. ಕಳೆದ ಬಾರಿಯೇ, ಕಿತ್ತೂರು ಉತ್ಸವದ ಸಂದರ್ಭ ದಲ್ಲಿಯೇ ಯಡಿಯೂರಪ್ಪನವರು ಈ ಭಾಗಕ್ಕೆ “ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣದ ಘೋಷಣೆ ಮಾಡುತ್ತಾರೆಂದು ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಘೋಷಣೆ ಮಾಡಲಿಲ್ಲ.
ಮುಂಬರುವ ಬಜೆಟ್‌ನಲ್ಲಿಯಾದರೂ ಘೋಷಣೆ ಯಾಗ ಬಹುದೆಂಬ ಆಶಾಭಾವನೆಯಲ್ಲಿ ಮುಂಬೈ ಕರ್ನಾಟಕ ಭಾಗದ ಜನರಿದ್ದಾರೆ. ಪ್ರಮುಖವಾಗಿ ಈ ಭಾಗದಲ್ಲಿ ನೆರೆಯಿಂದ ಸಾವಿರಾರು ಕೋಟಿ ರೂ.ಗಳ ರಸ್ತೆ ಹಾಳಾಗಿದ್ದು, ರಸ್ತೆ ಅಭಿವೃದ್ಧಿ, ಮಹದಾಯಿ ಯೋಜನೆಗೆ 2 ಸಾವಿರ ಕೋಟಿ ರೂ. ಮೀಸಲು, ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ, ಧಾರವಾಡ ಜಿಲ್ಲೆಗೆ ಪ್ರತಿ ಗ್ರಾಮಕ್ಕೂ ಕುಡಿಯುವ ನೀರಿನ ಯೋಜನೆ, ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿ ಸುವುದು, ಬೆಳಗಾವಿಯನ್ನು ಉತ್ತರ ಕರ್ನಾಟಕದ ಐಟಿ ಕೇಂದ್ರವನ್ನಾಗಿ ಮಾಡಬೇಕೆನ್ನುವ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದನೆ ಸಿಗುವ ಬಗ್ಗೆ ಜನರು ನಿರೀಕ್ಷೆಯಲ್ಲಿದ್ದಾರೆ.
ನಿರೀಕ್ಷೆಗಳು ಏನೇನು?– ಯಾದಗಿರಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ.
– ಕಲಬುರಗಿಯಲ್ಲಿ ರೈಲ್ವೆ ವಲಯ ಸ್ಥಾಪನೆ.
– ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
– ಬೆಂಬಲ ಬೆಲೆಯಲ್ಲಿ 20 ಕ್ವಿಂಟಾಲ್ ತೊಗರಿ ಖರೀದಿ.
– ಕಾರಂಜಾ ಏತ ನೀರಾವರಿ ಯೋಜನೆ ಜಾರಿ.
– ಈ ಭಾಗದ ಕೆರೆ ತುಂಬಿಸುವ ಯೋಜನೆಗಳ ಜಾರಿ.
– ಕೊಪ್ಪಳ ಎಂಜಿನಿಯರಿಂಗ್ ಕಾಲೇಜು.
– ಬೀದರ್‌ನಲ್ಲಿ ರಿಂಗ್ ರಸ್ತೆ ನಿರ್ಮಾಣ .
– ಮಹದಾಯಿ ಯೋಜನೆಗೆ 2 ಸಾವಿರ ಕೋಟಿ.
– ಬೆಳಗಾವಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೆ.
– ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ.
– ಧಾರವಾಡ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಯೋಜನೆ.
– ಉತ್ತರ ಕರ್ನಾಟಕದ ಐಟಿ ಕೇಂದ್ರವಾಗಿ ಬೆಳಗಾವಿ ಅಭಿವೃದ್ಧಿ. * ಶಂಕರ ಪಾಗೋಜಿ