Advertisement

ಬಾರಾಮತಿಗೆ ನೀರಿಲ್ಲ: ಶರದ್‌ ಪವಾರ್‌ಗೆ ಸರಕಾರದಿಂದ ದೊಡ್ಡ ಆಘಾತ

03:20 PM Jun 14, 2019 | Vishnu Das |

ಮುಂಬಯಿ: ಮಹಾರಾಷ್ಟ್ರ ಸರಕಾರ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರಿಗೆ ದೊಡ್ಡ ಆಘಾತವನ್ನು ನೀಡಿದೆ. ಶರದ್‌ ಪವಾರ್‌ ಅವರ ಭದ್ರಕೋಟೆ ಎನಿಸಿಕೊಂಡಿರುವ ಬಾರಾಮತಿ ಕ್ಷೇತ್ರಕ್ಕೆ ಅಣೆಕಟ್ಟಿನಿಂದ ಅಗತ್ಯಕ್ಕಿಂತಲೂ ಹೆಚ್ಚಿನ, ಅತ್ಯಧಿಕ ಪ್ರಮಾಣದ ನೀರು ಹರಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಡೆಸಿದ ಅಧ್ಯಯನದ ವರದಿಯನ್ನು ಅನುಸರಿಸಿ ಬಿಜೆಪಿ ನೇತೃತ್ವದ ರಾಜ್ಯ ಸರಕಾರವು ಬಾರಾಮತಿ ಕ್ಷೇತ್ರಕ್ಕೆ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಹರಿಯುವುದನ್ನು ತಡೆಯಲು ನಿರ್ಧರಿಸಿದೆ. ಸರಕಾರದ ಪರವಾಗಿ ಈ ನೀರನ್ನು ಬರ-ಹಿಡಿತ ಪ್ರದೇಶಗಳಿಗೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ.
ಆದರೆ, ಸರಕಾರದ ಈ ನಿರ್ಧಾರವನ್ನು ರಾಜಕೀಯ ದೃಷ್ಟಿಯಿಂದಲೂ ನೋಡಲಾಗುತ್ತಿದೆ. ರಾಜಕೀಯ ವಲಯದಲ್ಲಿ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರದ ಈ ನಿರ್ಧಾರವನ್ನು ಪವಾರ್‌ ಅವರಿಗೆ ಭಾರೀ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ. ಬಾರಾಮತಿ ಕಡೆಗೆ ಹರಿಯುವ ಹೆಚ್ಚುವರಿ ನೀರನ್ನು ರಾಜ್ಯದ ಬರಪೀಡಿತ ಪ್ರದೇಶಗಳ ಕಡೆಗೆ ಹರಿಸಲು ಸರಕಾರ ತೀರ್ಮಾನಿಸಿದೆ. ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಈ ನಿರ್ಧಾರವು ರಾಜಕೀಯ ಪ್ರೇರಿತವೆಂದು ವಿಶ್ಲೇಷಿಸಲಾಗಿದೆ. ಬಾರಾಮತಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಗೃಹ ಜಿಲ್ಲೆ ಆಗಿದ್ದು, ಈ ಕ್ಷೇತ್ರದಿಂದ ಲೋಕಸಭೆ ಹಲವು ಬಾರಿ ಗೆದ್ದು ಅವರು ಸಂಸತ್‌ ಪ್ರವೇಶಿಸಿದ್ದರು. ಪ್ರಸ್ತುತ ಈ ಕ್ಷೇತ್ರವನ್ನು ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಪ್ರತಿನಿಧಿಸುತ್ತಿದ್ದಾರೆ.

Advertisement

ಪುಣೆಯ ನೀರಾ ದೇವಘರ್‌ ಅಣೆಕಟ್ಟಿನಿಂದ ಈವರೆಗೆ ಬಾರಾಮತಿ ಮತ್ತು ಇಂದಾಪುರಕ್ಕೆ (ಎರಡೂ ಬಾರಾಮತಿ ಲೋಕಸಭಾ ಕ್ಷೇತ್ರದ ಭಾಗವಾಗಿವೆ) ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿತ್ತು. ಇತ್ತೀಚಿನ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭ ಬಿಜೆಪಿ ನಾಯಕ ರಣಜೀತ್‌ ನಾೖಕ್‌ ನಿಂಬಾಲ್ಕರ್‌ ಅವರು ಬಾರಾಮತಿಗೆ ಹೆಚ್ಚುವರಿ ನೀರಿನ ವಿತರಣೆಯ ವಿಷಯವನ್ನು ಎತ್ತಿದ್ದರು.

ಬಾರಾಮತಿ ಮತ್ತು ಇಂದಾಪುರ ನೀರಾ ದೇವಘರ್‌ ಅಣೆಕಟ್ಟಿನಿಂದ ಪ್ರಯೋಜನವನ್ನು ಪಡೆಯುವ ಪ್ರದೇಶಗಳ (ಕಮಾಂಡ್‌ ಏರಿಯಾ) ವ್ಯಾಪ್ತಿಯಿಂದ ಹೊರಗಿವೆ. ಅಣೆಕಟ್ಟಿನ ನೀರನ್ನು ಬಾರಾಮತಿಯ ಕಬ್ಬು ರೈತರಿಗೆ ಪೂರೈಕೆ ಮಾಡಲಾಗುತ್ತಿರುವ ಕಾರಣದಿಂದಾಗಿ ಸೊಲ್ಲಾಪುರ ಮತ್ತು ಸತಾರಾ ಜಿÇÉೆಗಳಲ್ಲಿ ಸಾಕಷ್ಟು ಕುಡಿಯುವ ನೀರು ಸಿಗುತ್ತಿಲ್ಲ ಎಂದು ಬಿಜೆಪಿ ನಾಯಕ ನಿಂಬಾಳ್ಕರ್‌ ಅವರು ಪ್ರತಿಪಾದಿಸಿದ್ದರು.

11.73 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ನೀರಾ ದೇವಘರ್‌ ಅಣೆಕಟ್ಟು 2006ರಲ್ಲಿ ನಿರ್ಮಾಣಗೊಂಡಿತು. 2007ರಿಂದಲೂ ಅಣೆಕಟ್ಟಿನ ಎಡಭಾಗದ ಕಾಲುವೆಯ ಶೇ.60ರಷ್ಟು ನೀರು ಬಾರಾಮತಿ ಮತ್ತು ಇಂದಾಪುರಕ್ಕೆ ಹರಿಸಲಾಗುತ್ತಿದೆ. ಆದರೆ ಅಣೆಕಟ್ಟಿನ ಬಲಭಾಗದ ಬದಿಯಲ್ಲಿರುವ ಕಮಾಂಡ್‌ ಪ್ರದೇಶಗಳಿಗೆ ಶೇ.40ರಷ್ಟು ನೀರನ್ನು ಮಾತ್ರ ಹರಿಸಲಾಗುತ್ತಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ನೀರಾ ದೇವಘರ್‌ ಅಣೆಕಟ್ಟಿನ ಎಡಬದಿಯು 11 ಕಿ.ಮೀ. ಉದ್ದವಾಗಿದೆ ಮತ್ತು ಅದು ಅಣೆಕಟ್ಟಿನ ಕಮಾಂಡ್‌ ಪ್ರದೇಶವನ್ನು ಒಳಗೊಂಡಿಲ್ಲ. 208 ಕಿ.ಮೀ. ಉದ್ದದ ಅಣೆಕಟ್ಟಿನ ಬಲಬದಿಯು ಹಲವಾರು ಬರಪೀಡಿತ ಪ್ರದೇಶಗಳನ್ನು ಹೊಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

ಸತಾರಾ, ಸೊಲ್ಲಾಪುರ ಮತ್ತು ಸಾಂಗ್ಲಿಗೆ ನೀರನ್ನುಹರಿಸಲಾಗುವುದು
ಹೊಸದಾಗಿ ಚುನಾಯಿತ ಬಿಜೆಪಿ ಸಂಸದನ ಆಕ್ಷೇಪಣೆಗಳ ಅನಂತರ ರಾಜ್ಯ ಸರಕಾರವು ಅಣೆಕಟ್ಟಿನಿಂದ ಬಾರಾಮತಿ ಮತ್ತು ಇಂದಾಪುರ ಕಡೆಗಿನ ನೀರಿನ ಹರಿವನ್ನು ನಿಲ್ಲಿಸಲು ಆದೇಶಿಸಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿ¨ªಾರೆ. ಇನ್ಮುಂದೆ ಈ ನೀರನ್ನು ಸತಾರಾ, ಸೊಲ್ಲಾಪುರ ಮತ್ತು ಸಾಂಗ್ಲಿಯ ಬರಪೀಡಿತ ಪ್ರದೇಶಗಳಿಗೆ ಹರಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next