Advertisement

ಶಿಗ್ಗಾವಿಯಲ್ಲಿ ಕುಡಿವ ನೀರಿಗಿಲ್ಲ ತೊಂದರೆ

06:23 PM Apr 24, 2021 | Team Udayavani |

ವರದಿ : ಬಸವರಾಜ ಹೊನ್ನಣ್ಣವರ

Advertisement

ಶಿಗ್ಗಾವಿ: ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯ ಹಿನ್ನೆಲೆಯಲ್ಲಿ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಸಕ್ತ ವರ್ಷ ಅಷ್ಟಾಗಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿಲ್ಲ. ತಾಲೂಕಿನಲ್ಲಿ ಕೇವಲ 7-8 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳೆಂದು ಗುರುತಿಸಲಾಗಿದೆ.

ಪ್ರತಿ ವರ್ಷದ ಬೇಸಿಗೆ ಸಂದರ್ಭದಲ್ಲಿ ಗ್ರಾಮೀಣ ಭಾಗ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆಯ ಸಮಸ್ಯೆ ಉಲ್ಬಣವಾಗಿ ನಿತ್ಯ ಬಳಕೆ ಹಾಗೂ ಕುಡಿಯುವ ನೀರನ್ನು ಮೈಲಿಗಟ್ಟಲೇ ದೂರ ಸಾಗಿ ಬಿಸಿಲಲ್ಲಿ ತರುವಂತಹ ಪರಿಸ್ಥಿತಿ ಎದುರಾಗತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಸಂಪನ್ಮೂಲಕ್ಕೆ ಬರ ಬಂದಿಲ್ಲ.

ನೀರಿನ ಸಂಪನ್ಮೂಲಗಳಾದ ಕೆರೆ, ಕಟ್ಟೆಗಳು ಮೈದುಂಬಿಕೊಂಡಿವೆ. ಇದರಿಂದ ತಾಲೂಕಿನ ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟವೂ ಹೆಚ್ಚಳಗೊಂಡಿದ್ದು ನೆಮ್ಮದಿಗೆ ಕಾರಣವಾಗಿದೆ. ಕಳೆದ ಹತ್ತಾರು ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾ ಬಂದಿರುವ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇದುವರೆಗೆ ನೀರಿನ ಸಮಸ್ಯೆ ಎದುರಾಗಿಲ್ಲ. ಅಲ್ಲದೇ, ಪ್ರತಿ ಗ್ರಾಮ ಪಂಚಾಯತಿಗಳು ಜನಸಂಖ್ಯೆ ಹಾಗೂ ಜನರ ಬೇಡಿಕೆಗೆ ಅನುಗುಣವಾಗಿ ಕೊಳವೆ ಬಾವಿ, ನೀರು ಸಂಗ್ರಣೆಯ ಕೆರೆಕಟ್ಟೆಗಳ ಮೂಲಕ ಕುಡಿಯುವ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಕೊಂಡಿವೆ. ಹಾಗಾಗಿ, ನೀರಿನ ಸಮಸ್ಯೆಯ ಬಿಸಿ ತಾಲೂಕಿನ ಜನತೆಗೆ ಅಷ್ಟಾಗಿ ಕಂಡು ಬಂದಿಲ್ಲ.

ತಾಲೂಕಿನಲ್ಲಿ ಬಂಕಾಪೂರ, ಶಿಗ್ಗಾವಿ ಪಟ್ಟಣ ಹೆಚ್ಚು ಜನಸಂಖ್ಯೆ ಹೊಂದಿದ ಪ್ರದೇಶಗಳಾಗಿದ್ದು, ಪುರಸಭೆ ಆಡಳಿತ ಮಂಡಳಿ ವ್ಯಾಪ್ತಿ ಹೊಂದಿವೆ. ಅಲ್ಲದೇ, 28 ಗ್ರಾಮ ಪಂಚಾಯತಿ ಪ್ರದೇಶ ವ್ಯಾಪ್ತಿಯ 95ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಿವೆ. ಗ್ರಾಮೀಣ ಭಾಗದಲ್ಲಿ ಪ್ರತಿದಿನ ನಾಗರಿಕರ ಅವಶ್ಯಕತೆಗೆ ತಕ್ಕಂತೆ ಕುಡಿಯುವ ನೀರು ಪೂರೈಸಲು ಸಮರ್ಥವಾಗಿವೆ. ತಾಲೂಕು ವ್ಯಾಪ್ತಿಯ ಕುಡಿಯುವ ನೀರು ಹಾಗೂ ನೈರ್ಮಲ್ಯ ನಿರ್ವಹಣೆ ಉಪವಿಭಾಗದ ತಾಂತ್ರಿಕ ಅಭಿಯಂತರರು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಪೂರ್ವಭಾವಿ ತಯಾರಿ ಮಾಡಿಕೊಂಡಿದ್ದರಿಂದ ಎಲ್ಲೂ ನೀರಿಗಾಗಿ ಹಾಹಾಕಾರ ಕಂಡು ಬಂದಿಲ್ಲ.

Advertisement

ಕಳೆದ ಬಾರಿ ಅತೀ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ತಾಲೂಕಿನ ಕೆಂಗಾಪೂರ, ಅತ್ತಿಗೇರಿ, ಬಸವನಾಳ, ಶಿಶುವಿನಾಳ, ಬನ್ನೂರು, ಬನ್ನಿಕೊಪ್ಪ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷ ಈ ಪ್ರದೇಶದಲ್ಲಿ ಸದ್ಯಕ್ಕಂತೂ ನೀರಿನ ಕೊರತೆ ಕಂಡು ಬಂದಿಲ್ಲ. ಹಾಗಾಗಿ, ಅವಶ್ಯಕ ಕುಡಿಯುವ ನೀರಿಗಾಗಿ ಇದುವರೆಗೂ ಯಾವುದೇ ಕೃಷಿಕರ, ಖಾಸಗಿ ವ್ಯಕ್ತಿಗಳ ಕೊಳವೆ ಭಾವಿಯನ್ನು ಪಡೆದುಕೊಂಡಿಲ್ಲ.;

Advertisement

Udayavani is now on Telegram. Click here to join our channel and stay updated with the latest news.

Next