Advertisement

ಬಾವಿಗಳೆಲ್ಲ ಬರಿದು; ನಳ್ಳಿ ನೀರು ಪೂರೈಕೆ ಅಬಾಧಿತ

01:14 AM May 01, 2019 | sudhir |

ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿರುವ ಸಿಹಿನೀರ ಬಾವಿಗಳೆಲ್ಲ ಹೆಚ್ಚು ಕಡಿಮೆ ಬರಿದಾಗಿವೆ; ನಳ್ಳಿ ನೀರು ಮಾತ್ರ ಸದ್ಯ ನಿಯಮಿತವಾಗಿ ಪೂರೈಕೆಯಾಗುತ್ತಿದೆ.

Advertisement

ಪುಚ್ಚಮೊಗರು ಫಲ್ಗುಣಿ ನದಿಯಿಂದ ಪೂರೈಕೆಯಾಗುವ ನೀರೇ ಮೂಡುಬಿದಿರೆಯ ಜೀವಾಳವಾಗಿದೆ. ಈಗಿರುವ ಜಲ ಸಂಪತ್ತು ಮೂಡುಬಿದಿರೆಯ ಜ್ಯೋತಿ ನಗರದಲ್ಲಿರುವ ಜಲಶುದ್ಧೀಕರಣ ಘಟಕದ ಮೂಲಕ ಪುರಸಭೆಗೆ ಹರಿದು ಬರುತ್ತಿದ್ದು ಸದ್ಯ ದಿನದಲ್ಲಿ 3- 3.30 ಗಂಟೆಗಳ ಕಾಲ ನೀರನ್ನು ಪೂರೈಸಲು ಸಾಧ್ಯವಾಗುತ್ತಿದೆ. ಇದ ರೊಂದಿಗೆ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು 150 ಬೋರ್‌ವೆಲ್‌ಗ‌ಳ ಮೂಲಕವೂ ನೀರನ್ನು ಬಗೆದು ಗ್ರಾಹಕರಿಗೆ ಪೂರೈಸಲಾಗುತ್ತಿದೆ.

ಸಾಮಾನ್ಯ ಸಮತಟ್ಟಾದ ಪ್ರದೇಶಗಳಿಗೆ ಯಾವುದೇ ಸಮಸ್ಯೆ ಇಲ್ಲ. ವಿದ್ಯುತ್‌ ಸಮಸ್ಯೆಯೂ ಅಷ್ಟಾಗಿ ಕಾಡುತ್ತಿಲ್ಲ. ಆದರೆ ಎತ್ತರದ ಪ್ರದೇಶಗಳಿಗೆ ನಳ್ಳಿ ನೀರಿನ ಪೂರೈಕೆಗೆ ಬಹಳ ಕಷ್ಟವಾಗುತ್ತಿದೆ. ಮಾರೂರು, ನೆತ್ತೋಡಿ, ಮರಿಯಾಡಿ, ಕಕ್ಕೆ ಬೆಟ್ಟು ಮೊದಲಾದ ಕಡೆಗಳಿಗೆ ಟ್ಯಾಂಕರ್‌ ಮೂಲಕ ನೀರು ಸಾಗಿಸಿ ಜನರಿಗೆ ಒದಗಿಸಲಾಗುತ್ತಿದೆ.

ಮಾರೂರು -ವಾರ್ಡ್‌ 22ರಲ್ಲಿ 9 ಬೋರ್ ವೆಲ್ ಗಳಿದ್ದು, ಮೇಲಂದ ಗುಡ್ಡೆಯಲ್ಲಿ ಹೊಸದಾಗಿ ಬೋರ್‌ವೆಲ್‌ ತೋಡಲಾಗಿದೆ. ಉಪೆìಲ್‌ಪಾದೆಯಲ್ಲಿ ಶಾಸಕರ ನಿಧಿಯಿಂದ ಬೋರ್‌ವೆಲ್‌ ಕೊರೆಯಲಾಗುವುದು ಎಂದು ಪುರಸಭಾ ಸದಸ್ಯ ದಿನೇಶ್‌ ಕುಮಾರ್‌ ತಿಳಿಸಿದ್ದಾರೆ.

ವಾರ್ಡ್‌ 23ರಲ್ಲಿ ನೆಕ್ಕಿದ ಪಡು³ ಮತ್ತು ಪರಿಸರಕ್ಕೆ ಅನುಕೂಲವಾಗುವಂತೆ ಬೋರ್‌ವೆಲ್‌ ಕೊರೆಯಲು ಸಿದ್ಧತೆ ನಡೆದಿದೆ. ಕಲ್ಲಬೆಟ್ಟು ವಾರ್ಡ್‌ 19 ಪರಿಸರದಲ್ಲಿ ನೀರಿನ ಸಮಸ್ಯೆ ನಿಧಾನವಾಗಿ ಬಿಗಡಾಯಿ ಸುತ್ತಿದೆ. ಪಿಲಿಪಂಜರ, ನಾಯಿಬಸ್ತಿ ಪ್ರದೇಶಗಳಲ್ಲಿ ಈಗಾಗಲೇ 2 ಬೋರ್‌ವೆಲ್‌ ತೋಡಲಾಗಿದೆ.

Advertisement

ಸದ್ಯವೇ ಎಕ್ಸಲೆಂಟ್‌ ಕಾಲೇಜು ಬಳಿಯ ಬಂಗಾಲಪದವು, ಕಲ್ಲಬೆಟ್ಟು ಸಹಕಾರಿ ಸಂಘದ ಎದುರಿನ ಕೋಂಕೆ ರಸ್ತೆ ಬಳಿ ಬೋರ್‌ವೆಲ್‌ ತೋಡಲು ಸಿದ್ಧತೆ ನಡೆಸಲಾಗಿದೆ.

ವಾರ್ಡ್‌ 14 ಮಾಸ್ತಿ ಕಟ್ಟೆ-ಬೊಗ್ರುಗುಡ್ಡೆ ಯಲ್ಲಿ ವಿಶೇಷ ವಾಗಿ ವಿವೇಕಾನಂದ ನಗರ, ಬೊಗ್ರುಗುಡ್ಡೆಯಲ್ಲಿ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್‌ ಮೂಲಕ ಬೇಡಿಕೆ ಬಂದಂತೆಲ್ಲ ಪೂರೈಸಲಾಗುತ್ತಿದೆ. ಲಾಡಿ ಬ್ರಹ್ಮಸ್ಥಾನದ ಬಳಿ ತೋಡಲಾದ ಬೋರ್‌ವೆಲ್‌ನಲ್ಲಿ ಒಳ್ಳೆಯ ನೀರಿರುವುದು ಈ ಭಾಗದವರಿಗೆ ಚೇತೊಧೀಹಾ ರಿಯಾಗಿದೆ. ವರ್ಷದ 4 ತಿಂಗಳ ಕಾಲ ನೀರು ನಿಲ್ಲುವ ಪಟ್ಲ ಗದ್ದೆಗಳ ಬದಿಯಲ್ಲೇ ಇರುವ ಸಿಹಿ ನೀರಿನ ಬಾವಿಗಳೂ ಬತ್ತತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬೋರ್‌ವೆಲ್‌ಗ‌ಳ ಸಂಖ್ಯೆ ಮಿತಿಮೀರಿದೆ. ಹೆಚ್ಚು ಆಳಕ್ಕೆ ಬೋರ್‌ವೆಲ್‌ಗ‌ಳನ್ನು ಕೊರೆಯ ಲಾಗುತ್ತಿರುವುದರಿಂದ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಭತ್ತದ ಕೃಷಿ ಇದ್ದ ಜಾಗ ವಾಣಿಜ್ಯ ಕೃಷಿಗೆ ತೆರೆದುಕೊಂಡಿದೆ. ಹಾಗಾಗಿ ಅಲ್ಲಿ ನೀರು ಇಂಗುವ ಪ್ರಮಾಣ ಕಡಿಮೆಯಾಗುತ್ತಿದೆ. ಗುಡ್ಡ ಸಮತಟ್ಟು ಮಾಡಿ ಕಟ್ಟಡಗಳನ್ನು ಎಬ್ಬಿಸುವ ಪ್ರಕ್ರಿಯೆಯಲ್ಲಿ ಅದೆಷ್ಟೋ ಜಲ ಮೂಲಗಳು ಬತ್ತಿಹೋಗಿವೆ. ಇನ್ನೊಂದೆಡೆ, ವರ್ಷದಲ್ಲಿ ಕನಿಷ್ಠ 4 ತಿಂಗಳ ಕಾಲ ಎರಡರಿಂದ ಮೂರಡಿಯವರೆಗೆ ನೀರು ನಿಲ್ಲುತ್ತಿದ್ದ ಪಟ್ಲ ಗದ್ದೆಗಳಿಗೆ ಮಣ್ಣು ತುಂಬಿಸಿ ಸೈಟ್‌ ಮಾಡುವ ಉದ್ಯಮ ಬಿರುಸಾಗಿ ನಡೆಯುತ್ತ ಇರುವುದರಿಂದ ಜಲ ಮೂಲಗಳಿಗೆ ಕುತ್ತು ಬಂದೊದಗಿದೆ. ಜೈನ ಪೇಟೆ, ಸ್ವರಾಜ್ಯ ಮೈದಾನ್‌, ಕಲ್ಸಂಕ, ದೊಡ್ಮನೆರಸ್ತೆ, ಮಾರ್ಪಾಡಿ, ಪ್ರಾಂತ್ಯ ಗ್ರಾಮಗಳ ಹಲವೆಡೆ ಪಟ್ಲ   ಗದ್ದೆಗಳಿಗೆ ಮಣ್ಣು ತುಂಬಿಸುವ ಮೂಲಕ ಜಲ ಮೂಲಗಳ ಅಸ್ತಿತ್ವಕ್ಕೆ ಸಂಚಕಾರ ಒದಗಿಬರುತ್ತಲಿದೆ.

ನೀರು ಪೂರೈಸಲು ಪುರಸಭೆ ಕ್ರಮ
ಈಗಿರುವ ಜಲಸಂಪನ್ಮೂಲದಿಂದ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ನಿಯಮಿತವಾಗಿ ನೀರನ್ನು ಪೂರೈಸಲು ಸಾಧ್ಯವಾಗುತ್ತಿದೆ. ಎತ್ತರದ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸುತ್ತಿದ್ದೇವೆ. ಅವಶ್ಯಕಂಡಿರುವಲ್ಲಿ ಬೋರ್‌ವೆಲ್‌ಗ‌ಳನ್ನು ದುರಸ್ತಿ ಮಾಡಲಾಗಿದೆ. ಯಾರಿಗೂ ಸಮಸ್ಯೆಯಾಗದಂತೆ ನೀರು ಪೂರೈಸಲು ಪುರಸಭೆ ಎಲ್ಲ ಕ್ರಮ ಜರಗಿಸುತ್ತಿದೆ.
– ಸೂರ್ಯಕಾಂತ ಖಾರ್ವಿ, ಪ್ರಬಂಧಕರು, ಪ್ರಭಾರ ಮುಖ್ಯಾಧಿಕಾರಿ, ಮೂಡುಬಿದಿರೆ ಪುರಸಭೆ

-  ಧನಂಜಯ ಮೂಡುಬಿದರೆ

Advertisement

Udayavani is now on Telegram. Click here to join our channel and stay updated with the latest news.

Next