ಕೆರೂರ: ಪಟ್ಟಣದಲ್ಲಿ ಸುಮಾರು 15- 20ದಿನಗಳಾದರೂ ನಲ್ಲಿಗಳಿಗೆ ನೀರು ಬರುತ್ತಿಲ್ಲ. ಮನೆ ಬಿಟ್ಟು ಹೊರಗೆ ಅಡಿಯಿಟ್ಟರೆ ನೆತ್ತಿ ಸುಡುವಷ್ಟು ಕೆಂಡದಂಥ ರಣ ಬಿಸಿಲು. ಕುಡಿಯಲು ನೀರು ಬೇಕಾದರೆ ಎರಡ್ಮೂರು ಕಿ.ಮೀ. ದೂರ ನೀರು ಸಿಗುವಲ್ಲಿಗೆ ತಳ್ಳುಗಾಡಿ, ಸೈಕಲ್ ಹಾಗೂ ಬೈಕ್‌ಗಳಲ್ಲಿ ನಿತ್ಯವೂ ಅಲೆಯಬೇಕಾಗಿದೆ.
ಒಂದೇ ಕೊಳವೆಬಾವಿ: ಬೇಸಿಗೆ ಅವಧಿಗೆ ಮುನ್ನ ಪಟ್ಟಣಕ್ಕೆ ನೀರು ಪೂರೈಸುವ ಹಳಗೇರಿ ಬಳಿಯ ಪಂಪ್‌ಹೌಸ್‌ಗೆ ನಾಲ್ಕೈದು ಬೋರವೆಲ್ಗಳಿಂದ ನೀರು ಪೂರೈಸಲಾಗುತ್ತಿತ್ತು. ಆದರೆ, ಸತತ ಭೀಕರ ಬರಗಾಲದಿಂದ ಈ ಕಡು ಬೇಸಿಗೆಯಲ್ಲಿ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಸದ್ಯ ಒಂದು ಬೋರವೆಲ್ ಮಾತ್ರ ದಿನಕ್ಕೆ ಕನಿಷ್ಠ ಪ್ರಮಾಣದಲ್ಲಿ ಕೆಂಪುಮಣ್ಣು ಮಿಶ್ರಿತ ನೀರು ಪೂರೈಸುತ್ತಿದ್ದು, ಸ್ಥಳೀಯ ಜನತೆಯ ಬೇಡಿಕೆಗೆ ತಕ್ಕಂತೆ ನೀರು ಸರಬರಾಜು ಆಗುತ್ತಿಲ್ಲ.
ಮುಖ್ಯಾಂಶಗಳು:
Advertisement
ಬಿರು ಬೇಸಿಗೆಯ ವಿಷಮ ಸ್ಥಿತಿಯಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರಿನ ವ್ಯವಸ್ಥೆ ಕೈಗೊಳ್ಳಬೇಕಾದ ಸ್ಥಳೀಯ ಪಟ್ಟಣ ಪಂಚಾಯತ, ಎಷ್ಟು ಕೊಳವೆಬಾವಿ ಕೊರೆಯಿಸಿದರೂ ಅಂತರ್ಜಲ ಸಿಗುತ್ತಿಲ್ಲ ಎಂದು ಕೈ ಚೆಲ್ಲಿ ಕುಳಿತಿದೆ. ಎಲ್ಲ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಕುರಿತು ವ್ಯಾಪಕ ದೂರುಗಳೇ ಕೇಳಿ ಬರುತ್ತಿವೆ.
Related Articles
Advertisement
•ನಲ್ಲಿ ನೀರು ಬಿಟ್ಟರೆ ಬೇರೆ ವ್ಯವಸ್ಥೆ ಇಲ್ಲದ ನಿವಾಸಿಗಳ ಗೋಳಾಟ
•ಬೇಸಿಗೆಯಲ್ಲಿ ಒಂದೇ ಬೋರವೆಲ್ನಿಂದ ಮಾತ್ರ ನೀರು ಪೂರೈಕೆ
•ದಿನವಿಡಿ ನೀರು ತರುವುದೇ ಕೆಲಸ
•ಪಟ್ಟಣ ಪಂಚಾಯತ ನಿರ್ಲಕ್ಷ್ಯ ಧೋರಣೆ
ಬೇಸಿಗೆ ಹೆಚ್ಚಿದ ಬವಣೆ: ಸ್ಥಳೀಯ ಕುಂಬಾರ, ಚೋರಗಸ್ತಿ ಗಲ್ಲಿಗಳು, ಚಿನಗುಂಡಿ ಫ್ಲಾಟ್ ಹಾಗೂ ನೆಹರುನಗರ, ನವನಗರ, ಆಶ್ರಯ ಬಡಾವಣೆ, ಕೆಎಚ್‌ಡಿಸಿ ಫ್ಲಾಟ್, ಹೊಸಪೇಟೆ ಸೇರಿದಂತೆ ಇತರೆ ಬಡಾವಣೆಗಳಲ್ಲಿ ನೀರು ಪೂರೈಕೆ ವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದೆ. ಅಲ್ಲಿನ ನಿವಾಸಿಗಳ ಗೋಳು ಹೇಳತೀರದಂತಾಗಿದೆ. ತಮ್ಮ ನಿತ್ಯದ ಕೆಲಸ ಬದಿಗೊತ್ತಿ ನೀರು ಹಿಡಿದು ತರುವುದೇ ನಿತ್ಯವೂ ಕೆಲಸವಾಗಿದೆ ಎನ್ನುತ್ತಾರೆ ಚಿನಗುಂಡಿ ಫ್ಲಾಟ್‌ನ ಬಸು ಬಡಿಗೇರ. ಸ್ಥಳೀಯ ಆಶ್ರಯ ಫ್ಲಾಟ್ ಬಡಾವಣೆ, ನೆಹರುನಗರ, ನವನಗರ, ಕೆಎಚ್‌ಡಿಸಿ ಕಾಲೋನಿ, ಚಿನಗುಂಡಿಫ್ಲಾಟ್, ಕುಂಬಾರ ಗಲ್ಲಿ ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ಪಟ್ಟ ಣ ಪಂಚಾಯತ ಅಳವಡಿಸಿರುವ ನೀರು ಪೂರೈಕೆ ಕೊಳವೆ ಬಾವಿ ಬಿಟ್ಟರೆ ಬೇರೆ ಯಾವುದೇ ಬಗೆಯ ತೆರೆದ ಬಾವಿ, ಕೊಳವೆಬಾವಿ ಸೌಲಭ್ಯಗಳಿಲ್ಲ.
ಬೇಸಿಗೆ ಬವಣೆ ನೀಗಿಸಲು ಕೆರೆಯಲ್ಲಿ ಸಂಗ್ರಹಿಸಿದ್ದ ಘಟಪ್ರಭೆ ನೀರು ಖಾಲಿಯಾಗಿದೆ. ನಾಗರಿಕರಿಗೆ ನೀರು ಪೂರೈಸುವ ಬೋರವೆಲ್ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ತೀವ್ರತೆ ಮನಗಂಡು ಟ್ಯಾಂಕರ್ ಮೂಲಕ ಪೂರೈಸುತ್ತಿದ್ದೇವೆ. ತೆರೆದ ಬಾವಿಗಳ ನೀರು ಪೂರೈಕೆಗೆ ಆದ್ಯತೆ ನೀಡುತ್ತಿದ್ದು, ಶೀಘ್ರ ಶುದ್ಧ ಕುಡಿವ ನೀರಿನ ಘಟಕ ಹೆಚ್ಚಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತೇವೆ.-ಎಂ.ಜಿ. ಕಿತ್ತಲಿ, ಸಹಾಯಕ ಕಾರ್ಯ ನಿರ್ವಾಹಕ ಇಂಜನೀಯರ್, ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗ
ನೀರು ಪೂರೈಕೆ ಸಮಸ್ಯೆ ಉಲ್ಬಣಿಸದಂತೆ ಎಲ್ಲ ಬಗೆಯಲ್ಲೂ ನಿಗಾ ವಹಿಸಿದ್ದೇವೆ. ಸತತ ಬರದಿಂದ ಅಂತರ್ಜಲ ಕ್ಷೀಣಿಸಿರುವ ಪರಿಣಾಮ ಸರಬರಾಜಿನಲ್ಲಿ ವ್ಯತ್ಯಯ ಆಗುತ್ತಿದ್ದು, ಜಿಲ್ಲಾಡಳಿತದಿಂದ ಅಗತ್ಯ ನೆರವು ಪಡೆದು ಸ್ಥಳೀಯರ ನೀರಿನ ಬವಣೆ ಪರಿಹರಿಸುತ್ತೇವೆ. ಬೇಸಿಗೆ ಅವಧಿ ಕಾರಣ ನಾಗರಿಕರು ಸಹ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು.
•ಜೆ.ವಿ. ಕೆರೂರ