Advertisement

ಜಿಲ್ಲೆಗಿಲ್ಲ ನೀರು, ಕುಣಿಗಲ್‌ಗೆ ಹೆಚ್ಚುವರಿಯಾಗಿ ಹರಿದ ಹೇಮೆ

11:49 AM Jun 18, 2019 | Team Udayavani |

ಚನ್ನರಾಯಪಟ್ಟಣ: ಹೇಮಾವತಿ ಅಣೆಕಟ್ಟೆ ನೀರು ಸದ್ಬಳಕೆ ಮಾಡಿಕೊಳ್ಳುವಲ್ಲಿ ತಾಲೂಕಿನ ಜನಪ್ರತಿನಿಧಿಗಳು ವಿಫ‌ಲರಾದರೆ, ಪಕ್ಕದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಜಕಾರಣಿಗಳು ಇದರ ಲಾಭ ಪಡೆಯುತ್ತಿದ್ದಾರೆ.

Advertisement

615 ಕೋಟಿ ರೂ. ವೆಚ್ಚದಲ್ಲಿ ಲಿಂಕ್‌ ಕೆನಾಲ್ ನಿರ್ಮಾಣ: ಕುಣಿಗಲ್ ಕೆರೆಗೆ ಹೇಮೆ ಸರಾಗವಾಗಿ ಹರಿದು ಕುಣಿಗಲ್ನ ಸೂಳೆಕರೆ ಪ್ರತಿವರ್ಷವೂ ತುಂಬುತ್ತಿದೆ ಆದರೆ ಅಲ್ಲಿನ ಜನಪ್ರತಿನಿಧಿಗಳು ಈಗ ಸುಮಾರು 615 ಕೋಟಿ ರೂ. ವೆಚ್ಚದಲ್ಲಿ ಲಿಂಕ್‌ ಕೆನಾಲ್(ಪೈಪ್‌ಲೈನ್‌) ಯೋಜನೆ ಮೂಲಕ ಕರೆಯಿಂದ ಸುಮಾರು 165 ಕಿ.ಮೀ. ವರೆಗೆ ಲಿಂಕ್‌ ಕೆನಾಲ್ ನಿರ್ಮಾಣಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಮೈತ್ರಿ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ತಾಲೂಕಿಗೆ ವಂಚನೆ ಮಾಡಿದೆ.

ಲಿಂಕ್‌ ಕೆನಾಲಿನಿಂದ ಲಾಭ: ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಕುಣಿಗಲ್ ತಾಲೂಕಿಗೆ ಲಿಂಕ್‌ ಕೆನಾಲ್ ಯೋಜನೆಗೆ ಒಪ್ಪಿಗೆ ನೀಡಿರುವುದರಿಂದ ಹುತ್ರಿದುರ್ಗ ಹೋಬಳಿ 16 ಕೆರೆಗಳು, ಹುಲಿಯೂರು ದುರ್ಗ ಹೋಬಳಿಯ ಮುತ್ತುರಾಯನಕರೆ ಸೇರಿದಂತೆ ಅನೇಕ ಕೆರಗಳಿಗೆ ಹಾಸನ ಜಿಲ್ಲೆಯ ಹೇಮಾವತಿ ನೀರು ಹರಿಯಲಿದೆ, ಇದಲ್ಲದೆ ಬೇಗೂರು ಕೆರೆ ಮೂಲಕ ಕುಣಿಗಲ್ ಚಿಕ್ಕೆರೆ, ಮಂಗಳಾ ಜಲಾಶಯಕ್ಕೂ ಜಿಲ್ಲೆಯ ಹೇಮಾವತಿ ಹರಿಯಲಿದ್ದಾಳೆ.

ಲಿಂಕ್‌ ಕೆನಾಲ್ ಯೋಜನೆ ವಿವರ: ತುಮಕೂರು ಜಿಲ್ಲೆಯ ಎಲ್ಲಾ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ತುಂಬಿದ ನಂತರವೇ ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಹರಿಯುತ್ತಿತ್ತು. ಆದರೆ ಈಗ ನೂತನ ಯೋಜನೆಯಿಂದ ಟಿಬಿಸಿ ನಾಲೆಯ ಶ್ಯೂನ ಕಿ.ಮೀ. ನಿಂದ 72ನೇ ಕಿ.ಮೀ. ವರೆಗೆ ನಾಲ ಆಧುನೀಕರಣಕ್ಕೂ ಮೈತ್ರಿ ಸರ್ಕಾರ 478 ಕೋಟಿ ಹಣ ಬಿಡುಗಡೆ ಮಾಡಿದೆ.

ಜೊತೆಗೆ 70 ಕಿ.ಮೀ. ಸಂಪಿಗೆ ಬಳಿಯಿಂದ ತಾಲೂಕಿ 165ನೇ ಕಿ.ಮೀ. ಚೀರನಹಳ್ಳಿ ವರೆಗೂ ಲಿಂಕ್‌ ಕೆನಾಲ್ ನಿರ್ಮಾಣ ಮಾಡಿ ಗುರುತ್ವಾಕರ್ಷಣೆ ಮೂಲಕ ನೀರು ಹರಿಸಲು 615 ಕೋಟಿ ರೂ. ಯೋಜನೆಗೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ಒಪ್ಪಿಗೆ ನೀಡುವ ಮೂಲಕ ಹೇಮೆ ಹೊಂದಿರುವ ಜಿಲ್ಲೆಗೆ ದ್ರೋಹ ಮಾಡಿದೆ.

Advertisement

ಜಿಲ್ಲೆ ಮುಖ್ಯ ಮಂತ್ರಿಯಿಂದ ಜಿಲ್ಲೆಗೆ ದ್ರೋಹ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಹರದನಹಳ್ಳಿ ಗ್ರಾಮದ ಪುತ್ರ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾರೆ, ಅವರು ತಮ್ಮ ಜಿಲ್ಲೆಯಲ್ಲಿನ ಹೇಮಾವತಿ ಅಣೆಕಟ್ಟೆಯ ನೀರನ್ನು ಸಂಮರ್ಪಕವಾಗಿ ಜಿಲ್ಲೆಗೆ ಬಳಸಲು ಮುಂದಾಗಬೇಕು.

ಆದರೆ ಈಗ ನೂರಾರು ಕೋಟಿ ಅನುದಾನ ನೀಡಿ ಲಿಂಕ್‌ ಕೆನಾಲ್ ಯೋಜನೆ ಮೂಲಕ ನಮ್ಮ ನೀರನ್ನು ಪಕ್ಕದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹತ್ತಾರು ಕೆರೆಗೆ ಹರಿಸಲು ಮುಂದಾಗುವ ಮೂಲಕ ಜಿಲ್ಲೆ ರೈತರಿಗೆ ದ್ರೋಹ ಮಾಡುತ್ತಿದ್ದಾರೆ.

ತಾಲೂಕಿನಲ್ಲಿ ನೆನಗುದಿಗೆ ಬಿದ್ದಿರು ಏತನೀರಾವರಿ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಏತನೀರಾವರಿ ಯೋಜನೆಗಳು ಹಲವು ದಶಕದಿಂದ ನೆನೆಗುದಿಗೆ ಬಿದ್ದಿವೆ ಇವುಗಳನ್ನು ಪೂರ್ಣ ಮಾಡುವಲ್ಲಿ ದೇವೇಗೌಡರು ಹಾಗೂ ಅವರ ಮಕ್ಕಳು ಮುಂದಾಗುತ್ತಿಲ್ಲ. ಇನ್ನು ತುಮಕೂರು ಜಿಲ್ಲೆಗೆ ನೀರು ಹರಿಸಲು ತಾಲೂಕಿನ ಬಾಗೂರು ಹೋಬಳಿ ಜನ ತಮ್ಮ ನೆಲವನ್ನು ಬರಡು ಮಾಡಿಕೊಂಡಿದ್ದಾರೆ. ಅವರ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಆ ಭಾಗದ ತೆಂಗಿನ ಮರಗಳು ಒಣಗುತ್ತಿವೆ. ಕುಡಿಯಲು ನೀರಿಲ್ಲದೇ ಜನತೆ ಪರದಾಡುತ್ತಿದ್ದಾರೆ.ಅವರಿಗೆ ಮೊದಲು ನೀರು ನೀಡಲು ಜಿಲ್ಲಾ ಮಂತ್ರಿ ಮುಂದಾಗಬೇಕಿದೆ.

ಸಿಎಂಗೆ ರಕ್ತದಲ್ಲಿ ಪತ್ರ ಬರೆದರು ಪ್ರಯೋಜನವಿಲ್ಲ: ಬಾಗೂರು ಹೋಬಳಿಯ ರೈತರು ಮುಖ್ಯ ಮಂತ್ರಿ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಬಾಗೂರು ಹೋಬಳಿಯ ರೈತರಿಗೆ ಏತನೀರಾವರಿ ಮೂಲಕ ಕುಡಿಯಲು ನೀರು ಕೊಡುವಂತೆ ಮನವಿ ಮಾಡಿದರು ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.

ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯ: ತಾಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಕಳೆದ ಆರು ವರ್ಷದಿಂದ ಹಲವು ಗ್ರಾಮದಲ್ಲಿ ಕುಡಿಯುವ ನೀರಿಗೆ ತಾತ್ವಾರ ಶುರುವಾಗಿದೆ. ಮಳೆಗಾಲದಲ್ಲಿ ಹೇಮಾವತಿ ಅಣೆಕಟ್ಟೆಯಲ್ಲಿ ಶೇಖರಣೆಯಾಗುವ ನೀರನ್ನು ನಿರಂತರವಾಗಿ ಆರು ತಿಂಗಳು ತುಮಕೂರು ಜಿಲ್ಲೆಗೆ ಹರಿಸಲಾಗುತ್ತಿದ್ದರು ಜಿಲ್ಲೆಯ ಜನಪ್ರತಿನಿಧಿಗಳು ಮಾತ್ರ ಜಾಣಕುರುಡು ಅನುಸರಿಸುತ್ತಿದ್ದಾರೆ, ರಾಜ್ಯ ರಾಜಕೀಯದಲ್ಲಿನ ಅಘ್ರಗಣ್ಯ ಸ್ಥಾನದಲ್ಲಿರುವ ಜಿಲ್ಲೆಯಲ್ಲಿ ಹಲವು ಏತನೀರಾವರಿ ಯೋಜನೆ ಕಾಮಗಾರಿ ಸ್ಥಗಿತವಾಗಿರುವುದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.

ತುಮಕೂರಿಗೆ ಯಾವ ವರ್ಷ ಎಷ್ಟು ನೀರು: 1996-97ಯಲ್ಲಿ 7.810 ಟಿಎಂಸಿ, 1997-98ರಲ್ಲಿ 8.869 ಟಿಎಂಸಿ, 1998-99ರಲ್ಲಿ 8.308 ಟಿಎಂಸಿ, 1999-2000ದಲ್ಲಿ 10.155 ಟಿಎಂಸಿ, 2000-01ರಲ್ಲಿ 9.767 ಟಿಎಂಸಿ, 2001-02ರಲ್ಲಿ 9.856 ಟಿಎಂಸಿ, 2002-03ರಲ್ಲಿ 4.679 ಟಿಎಂಸಿ, 2003-04ರಲ್ಲಿ 7.541 ಟಿಎಂಸಿ, 2004-05ರಲ್ಲಿ 17.259 ಟಿಎಂಸಿ, 2005-06ರಲ್ಲಿ 22.806 ಟಿಎಂಸಿ, 2007-08ರಲ್ಲಿ 25.309 ಟಿಎಂಸಿ, 2008-09ರಲ್ಲಿ 18.004 ಟಿಎಂಸಿ, 2009-10ರಲ್ಲಿ 22.969 ಟಿಎಂಸಿ, 2010-11ರಲ್ಲಿ 21.117 ಟಿಎಂಸಿ, 2011-12ರಲ್ಲಿ 19.595 ಟಿಎಂಸಿ, 2012-13ರಲ್ಲಿ 12.977ಟಿಎಂಸಿ, 2013-14ರಲ್ಲಿ 21.121 ಟಿಎಂಸಿ, 2014-15ರಲ್ಲಿ 20.262 ಟಿಎಂಸಿ, 2015-16ರಲ್ಲಿ 10.897 ಟಿಎಂಸಿ, 2016-17ರಲ್ಲಿ 4.044 ಟಿಎಂಸಿ, 2017-18ರಲ್ಲಿ 8.562 ಟಿಎಂಸಿ, 2018-19ರಲ್ಲಿ 23.470 ಟಿಎಂಸಿ ಹೇಮಾವತಿ ಅಣೆಕಟ್ಟೆ ನೀರು ಹರಿದಿದೆ.

ತುಮಕೂರಿನ ಮೇಲೆ ಗೌಡರ ವ್ಯಾಮೋಹ:

ತುಮಕೂರು ಜಿಲ್ಲೆಯ ಜನತೆ ದೇವೇ ಗೌಡರನ್ನು ಸೋಲಿಸಿದರು ದೇವೇಗೌಡ ಕುಟುಂಬದವರಿಗೆ ಮಾತ್ರ ತುಮಕೂರು ಜಿಲ್ಲೆ ಮೇಲಿನ ವ್ಯಾಮೋಹ ಕಮ್ಮಿಯಾಗಿಲ್ಲ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ.ರವಿ ಆಪಾದಿಸಿದ್ದಾರೆ. ಒಂದು ವೇಳೆ ದೇವೇಗೌಡರು ತುಮಕೂರಿ ನಲ್ಲಿ ಗೆದ್ದು ಲೋಕಸಭಾ ಸದಸ್ಯರಾಗಿದ್ದರೆ ಹೇಮಾವತಿ ಅಣೆಕಟ್ಟೆ ನೀರು ಸಂಪೂರ್ಣವಾಗಿ ತುಮಕೂರಿಗೆ ತೆಗೆದುಕೊಂಡು ಹೋಗು ತ್ತಿದ್ದರು. ಹಾಸನ ಜಿಲ್ಲೆ ಜನತೆ ಜೆಡಿಎಸ್‌ ಪಕ್ಷಕ್ಕೆ ಮತ ನೀಡಿ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ದೇವೇಗೌಡ ಪುತ್ರ ಎಚ್.ಡಿ.ರೇವಣ್ಣ ಜಿಲ್ಲಾ ಮಂತ್ರಿಯಾಗಿದ್ದಾರೆ. ತಾಲೂಕಿನ ರೈತರ ಬಗ್ಗೆ ಕಾಳಜಿ ಇದ್ದರೆ ಮೊದಲು ಕಾಚೇನಹಳ್ಳಿ, ಆಲಗೊಂಡನಹಳ್ಳಿ, ನಾರಾಯಣಪುರ, ಹಿರೀಸಾವೆ, ನುಗ್ಗೇಹಳ್ಳಿ ಏತನೀರಾವರಿ ಆದಷ್ಟು ಬೇಗ ಪೂರ್ಣಗೊಳಿಸಬೇಕು.

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next