Advertisement

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

11:46 PM Mar 24, 2021 | Team Udayavani |

ತೆಕ್ಕಟ್ಟೆ: ಇಲ್ಲಿನ ಕೊರ್ಗಿ ಗ್ರಾ.ಪಂ. ವ್ಯಾಪ್ತಿಯ ಚಾರುಕೊಟ್ಟಿಗೆ ಗ್ರಾಮದ ಪುರಾತನ ಕುರುವಾಡಿ ಮದಗ ಸಂಪೂರ್ಣ ಬತ್ತಿಹೋಗಿದ್ದು, ಒತ್ತುವರಿಯಾಗುವ ಭೀತಿ ಎದುರಾಗಿದೆ.

Advertisement

ಕೊರ್ಗಿ, ಶಾನಾಡಿ, ಕೆದೂರು ಗ್ರಾಮಗಳಿಗೆ ನೀರಾಶ್ರಯವನ್ನು ನೀಡುತ್ತಿದ್ದ ಈ ಮದಗವು ಏರುತ್ತಿರುವ ಬಿಸಿಲ ತಾಪಮಾನ ಮತ್ತು ನಿರ್ವಹಣಾ ಕೊರತೆಯಿಂದಾಗಿ ಮಾರ್ಚ್‌ ತಿಂಗಳಲ್ಲೇ ಬತ್ತಿ ಸೋಗಿದ್ದು ಪರಿಸರದಲ್ಲಿ ಕುಡಿಯುವ ನೀರಿನ ತತ್ತ್ವಾರ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಮದಗದ ಸಮೀಪದಲ್ಲಿಯೇ ಹರಿದು ಹೋದ ವಾರಾಹಿ ಎಡದಂಡೆ ಕಾಲುವೆಗೆ ಉಪನಾಲೆಯನ್ನು ನಿರ್ಮಿಸಿ ಮದಗಕ್ಕೆ ನೀರು ಹಾಯಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕನಸಾಗಿ ಉಳಿದ ಗ್ರಾಮಸ್ಥರ ಬೇಡಿಕೆ
ಈಗಾಗಲೇ ವಾರಾಹಿ ಎಡದಂಡೆ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಕಾಲುವೆ ಹಾದು ಹೋದ ಗ್ರಾಮಗಳಿಗೆ ಸಿಗು ವ ನೀರು ಸದ್ಬಳಕೆಯಾಗದೆ ನೂರಾರು ಕ್ಯೂಸೆಕ್ಸ್‌ ನೀರು ಸಮುದ್ರ ಸೇರುತ್ತಿದೆ. ಈಗಾಗಲೇ ಹೂವಿನಕೆರೆ, ಅಸೋಡು ಗ್ರಾಮದಲ್ಲಿ ಹಾದು ಹೋದ ಪ್ರಮುಖ ಕಾಲುವೆಗೆ ಉಪ ನಾಲೆ ನಿರ್ಮಿಸುವ ನಿಟ್ಟಿನಿಂದ ಇಲಾಖೆ ಗೇಟ್‌ ನಿರ್ಮಿಸಿದೆ. ಆದರೆ ಗೇಟ್‌ನಿಂದ ಸುಮಾರು 1 ಕಿ.ಮೀ. ಅಂತರದಲ್ಲಿರುವ ಚಾರುಕೊಟ್ಟಿಗೆಯ ಕುರುವಾಡಿ ಮದಗಕ್ಕೆ ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಗೆ ಅನುಗುಣವಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವೈಜ್ಞಾನಿಕವಾಗಿ ನೀರು ಹಾಯಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇದರಿಂದ ಚಾರುಕೊಟ್ಟಿಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು, ಪ್ರಾಣಿ, ಪಕ್ಷಿಗಳು ಸೇರಿದಂತೆ ನೂರಾರು ಎಕರೆ ಕೃಷಿ ಭೂಮಿಗಳಿಗೆ ಆಶ್ರಯವಾಗುವುದು.

Advertisement

3 ಸ್ತರಗಳನ್ನು ಒಳಗೊಂಡ ಮದಗ
ಸರ್ವೇ ನಂಬರ್‌ 64ರಲ್ಲಿ ಸುಮಾರು 5.10 ಎಕರೆ ವಿಸ್ತೀರ್ಣವನ್ನು ಒಳಗೊಂಡಿರುವ ಈ ಕುರುವಾಡಿ ಮದಗವು ಹಿಂದೆ ಚಾರುಕೊಟ್ಟಿಗೆ ಸುತ್ತಮುತ್ತಲಿನ ಮೂರು ಗ್ರಾಮಗಳಿಗೆ ನೀರಿನ ಮೂಲ ಸೆಲೆಯಾಗಿದ್ದು, ಅಂದಿನ ದಿನಗಳಲ್ಲಿ ಭೌಗೋಳಿಕವಾಗಿ ಚಿಂತನೆ ಮಾಡಿ ಗ್ರಾಮಸ್ಥರೆಲ್ಲ ಮೂರು ಸ್ತರಗಳಲ್ಲಿ ಮದಗವನ್ನು ವಿಂಗಡಣೆ ಮಾಡಿ ಜಲ ಮೂಲವನ್ನು ಸಂರಕ್ಷಿಸುತ್ತಿದ್ದರು. ಇದàಗ ಅಂತರ್ಜಲ ಮಟ್ಟ ಸಂಪೂರ್ಣ ಕುಸಿತವಾದ ಪರಿಣಾಮ ಮದಗದಲ್ಲಿ ನೀರಿಲ್ಲದೆ ಬರಿದಾಗಿದೆ. ಈ ಮದಗದಲ್ಲಿ ಶೇಖರಣೆಯಾಗಿರುವ ಹೂಳನ್ನು ತೆಗೆದು ಸಮರ್ಪಕವಾಗಿ ನಿರ್ವಹಣೆ ಮಾಡಿದಾಗ ಮಾತ್ರ ಜಲ ಮೂಲಗಳ ಸಂರಕ್ಷಣೆಯಾಗಿ ಇಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

ಒತ್ತುವರಿಯಾಗುವ ಭೀತಿಯಲ್ಲಿ ಮದಗ?
ಸಮರ್ಪಕವಾದ ನಿರ್ವಹಣೆಯ ಕೊರತೆಯಿಂದಾಗಿ ಸೊರಗಿ ಹೋಗಿ ರುವ ಕುರುವಾಡಿ ಮದಗದ ಸುತ್ತಲೂ ಗಿಡಗಂಟಿಗಳು ಆವರಿಸಿದ್ದು, ಈಗಾಗಲೇ ಮದಗಕ್ಕೆ ಸಂಪರ್ಕಿಸುವ ಮಾರ್ಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದು ಈ ಬಗ್ಗೆ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊರ್ಗಿ ಗ್ರಾಮದ ನಿವಾಸಿಗಳು ಸಾಮೂಹಿಕವಾಗಿ ಮನವಿ ಸಲ್ಲಿಸಿದ್ದಾರೆ.

ಜಲ ಸಂರಕ್ಷಣೆಗೆ ಮುಂದಾದ ಯುವಪಡೆ
ಕಳೆದ ಹಲವು ದಶಕಗಳಿಂದಲೂ ಪರಿಸರದಲ್ಲಿ ಎದುರಾಗುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವ ಕನಸು ಹೊತ್ತ ಚಾರುಕೊಟ್ಟಿಗೆಯ ಯುವಕರ ತಂಡವೊಂದು ಚಾರುಕೊಟ್ಟಿಗೆ ಗ್ರಾಮದ ಪುರಾತನ ಕುರುವಾಡಿ ಮದಗವನ್ನು ಸಂರಕ್ಷಿಸುವ ಕೈಂಕರ್ಯಕ್ಕೆ ಮುಂದಾಗುವ ಜತೆಗೆ ಜಲ ಮೂಲಗಳು ಬತ್ತದಂತೆ ನೋಡಿಕೊಳ್ಳುವ ಯೋಜನೆಯನ್ನು ರೂಪಿಸಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಗಮನಕ್ಕೆ ತರುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಯೋಜನೆ ಸಿದ್ಧ
ಗ್ರಾಮೀಣ ಭಾಗದಲ್ಲಿ ಹಾದುಹೋಗಿರುವ ವಾರಾಹಿ ಎಡದಂಡೆ ಕಾಲುವೆ ನೀರು ಸಮರ್ಪಕವಾಗಿ ಬಳಕೆಯಾಗಬೇಕು ಎನ್ನುವ ನಿಟ್ಟಿನಿಂದ ಅಲ್ಲಲ್ಲಿ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಉಪ ನಾಲೆಗಳ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧಗೊಂಡಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಡೀಮ್ಡ್ ಫಾರೆಸ್ಟ್‌ ಹಾಗೂ ಖಾಸಗಿ ಜಾಗಗಳ ಸಮಸ್ಯೆಗಳಿದ್ದರೆ ಸ್ವಲ್ಪ ವಿಳಂಬವಾಗಬಹುದೇ ಹೊರತು ಇಲ್ಲದಿದ್ದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ನಾಲೆಗಳು ನಿರ್ಮಾಣವಾಗಿ ಗ್ರಾಮೀಣ ಭಾಗದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದು.
– ಜಿ. ಭೀಮಾ ನಾಯ್ಕ, ಅಧೀಕ್ಷಕ ಅಭಿಯಂತ, ವಾರಾಹಿ ಯೋಜನೆ

ನೀರಿನ ಸಮಸ್ಯೆ
ಉದ್ಯೋಗ ಖಾತರಿ ಯೋಜನೆಗಳ ಮೂಲಕ ಚಾರುಕೊಟ್ಟಿಗೆ ಗ್ರಾಮದ ಕುರುವಾಡಿ ಮದಗವನ್ನು ಹೂಳು ತೆಗೆದು ಮತ್ತೆ ಬಳಕೆಗೆ ಯೋಗ್ಯವಾಗಿ ಮಾಡಲು ಗ್ರಾಮಸ್ಥರ ಸಹಕಾರ ಅಗತ್ಯ. ಈಗಾಗಲೇ ಚಾರುಕೊಟ್ಟಿಗೆ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜಲ ಮೂಲ ಸಂರಕ್ಷಣೆಯಲ್ಲಿ ಯುವ ಸಮುದಾಯಗಳು ಒಂದಾಗುವ ಜತೆಗೆ ವಾರಾಹಿ ಕಾಲುವೆ ನೀರು ಮದಗಕ್ಕೆ ಹರಿಸುವಲ್ಲಿ ಸಂಬಂಧ
ಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಧನಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ.
– ದಿನೇಶ್‌ ಮೊಗವೀರ ಚಾರುಕೊಟ್ಟಿಗೆ, ಸದಸ್ಯರು, ಗ್ರಾ.ಪಂ. ಕೊರ್ಗಿ

– ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next