Advertisement

ಬತ್ತಿದ ಸೌಪರ್ಣಿಕಾ: ಕೊಲ್ಲೂರಿನಲ್ಲಿ ಕುಡಿಯಲೂ ನೀರಿಲ್ಲ

11:36 PM May 16, 2019 | sudhir |

ಕೊಲ್ಲೂರು: ಬಿರು ಬೇಸಗೆಯ ದಿನಗಳಲ್ಲೂ ಹರಿಯುತ್ತಿದ್ದ ಸೌಪರ್ಣಿಕಾ ನದಿ ಈ ಬಾರಿ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದಾಗಿ ಕೊಲ್ಲೂರು ಸಹಿತ ನದಿಯ ಆಸುಪಾಸಿನ ಊರು ಗಳು ನೀರಿಲ್ಲದೆ ಬಸವಳಿದಿವೆ. ಕೊಲ್ಲೂರು ಗ್ರಾಮದ ಹೆಗ್ಡೆಹಕ್ಲು, ಕಲ್ಯಾಣಿ ಗುಡ್ಡೆಯಲ್ಲಿ ಬಾವಿಗಳು ಕೂಡ ಬರಿದಾಗಿದ್ದು ಕುಡಿಯುವ ನೀರಿ ಗಾಗಿ ಹಾಹಾಕಾರ ಉಂಟಾಗಿದೆ.

Advertisement

ನೀರಿಗಾಗಿ ಬವಣೆ
ಕಳೆದ ಒಂದು ವಾರದಿಂದ ಹೆಗ್ಡೆಹಕ್ಲು ಹಾಗೂ ಕಲ್ಯಾಣಿಗುಡ್ಡೆಯ ನಿವಾಸಿಗಳು ನೀರಿಲ್ಲದೆ ನೀರಿಗಾಗಿ ಗ್ರಾಮ ಪಂಚಾಯತ್‌ಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ 10 ದಿನಗಳಿಂದ ಇಲ್ಲಿ ನೀರಿನ ತೀವ್ರ ಅಭಾವವಾಗಿದೆ.
ಹೆಗ್ಡೆಹಕ್ಲುವಿನಲ್ಲಿ ವಾಸವಾಗಿರುವ 54 ಮತ್ತು ಕಲ್ಯಾಣಿಗುಡ್ಡೆಯ 46
ಕುಟುಂಬಗಳು ನೀರಿಲ್ಲದೆ ಚಡಪಡಿಸು ವಂತಾಗಿದೆ.

ಕೊಲ್ಲೂರಿನಲ್ಲಿ ಜಲಕ್ಷಾಮ
ಸೌಪರ್ಣಿಕಾ ನದಿ ಸಹಿತ ಬೆಳ್ಕಲ್‌ ತೀರ್ಥ ಪ್ರದೇಶ ನೀರಿಲ್ಲದೆ ಬರಿದಾಗಿದೆ. ಸೌಪರ್ಣಿಕ ಸ್ನಾನ ಘಟ್ಟದಲ್ಲಿ ಇರುವ ಒಂದಿಷ್ಟು ನೀರು ಮೂರು ನಾಲ್ಕು ದಿನಗಳ ಬಳಕೆಗೆ ಮಾತ್ರ ಸಾಲುವಂತಿದ್ದು, ಮಳೆ ಬಾರದಿದ್ದಲ್ಲಿ ಕೊಲ್ಲೂರು ನಿವಾಸಿಗಳು ನೀರಿಗಾಗಿ ವಲಸೆ ಹೋಗಬೇಕಾಗುವ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ವೆಂಟೆಡ್‌ ಡ್ಯಾಮ್‌ ನಿರ್ಮಾಣ
ಕೊಲ್ಲೂರಿನಲ್ಲಿ ನಿರ್ಮಾಣ ಗೊಳ್ಳುತ್ತಿರುವ ಮೆಕ್ಯಾನಿಕಲ್‌ ಗೇಟ್‌ನ ವೆಂಟೆಡ್‌ ಡ್ಯಾಮ್‌ ಕಾಮಗಾರಿ ಬಹುತೇಕ ಪೂರ್ತಿಗೊಂಡಿದ್ದು ಇಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಉಪಯೋಗ ವಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ಟ್ಯಾಂಕರ್‌ ಮೂಲಕ ನೀರು ಪೂರೈಕೆ
ಕೊಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆಯಿದೆ.ಹಾಗಾಗಿ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಹೆಗ್ಡೆ ಹಕ್ಲು ಹಾಗೂ ಕಲ್ಯಾಣಿಗುಡ್ಡೆಯಲ್ಲಿ ಭಾರಿ ನೀರಿನ ಸಂಸ್ಯೆ ಎದುರಾಗಿದ್ದು ಬಾವಿಗಳು ಸಂಪೂರ್ಣ ಬರಿದಾಗಿದೆ. ಈ ಭಾಗಕ್ಕೆ ಹೆಚ್ಚಿನ ನೀರನ್ನು ಒದಗಿಸಲಾಗುತ್ತಿದೆ.
-ರಾಜೇಶ್‌, ಪಿಡಿಒ ಕೊಲ್ಲೂರು ಗ್ರಾ.ಪಂ.

Advertisement

ಕೊಲ್ಲೂರು ದೇಗುಲದಲ್ಲಿ ನೀರಿನ ಕ್ಷಾಮ
ಸೌಪರ್ಣಿಕ ನದಿಯ ಗುಂಡಿಯಿಂದ ನೀರು ಬಳಸಲಾಗುತ್ತಿದ್ದ ದೇಗುಲಕ್ಕೆ ನೀರಿನ ಕೊರತೆ ಬಿಸಿಮುಟ್ಟಿದ್ದು ಲಲಿತಾಂಬಿಕಾ, ಆರ್‌ಎನ್‌ಎಸ್‌, ಜಗದಾಂಬಿಕಾ ವಸತಿಗೃಹಗಳಿಗೆ 2 ಟ್ಯಾಂಕರ್‌ ಬಳಸಿ ನೀರು ಒದಗಿಸಲಾಗುತ್ತಿದೆ. ದೇಗುಲದ ಆಸುಪಾಸಿನ ಖಾಸಗಿ ಅತಿಥಿ ಗೃಹಗಳಲ್ಲಿ ಕೂಡ ನೀರಿನ ಸಮಸ್ಯೆ ಎದುರಾಗಿದ್ದು ಇದೇ ರೀತಿ ವಾತಾವರಣ ಮುಂದುವರಿದಲ್ಲಿ ಕೊಲ್ಲೂರಿನಲ್ಲಿ ನೀರಿನ ಬರಗಾಲ ಎದುರಾಗಲಿದೆ. ಆಸುಪಾಸಿನ ಗ್ರಾಮಗಳಿಗೆ ಪಂಚಾಯತ್‌ ವತಿಯಿಂದ ದಿನಕ್ಕೆ 12 ಸಾವಿರ ಲೀಟರ್‌ ನೀರನ್ನು ಟ್ಯಾಂಕರ್‌ ಮೂಲಕ ಒದಗಿಸಲಾಗಿತ್ತಿದ್ದರೂ ಬಹುತೇಕ ಕಡೆ ಅಲ್ಲಿನ ನಿವಾಸಿಗಳು ನೀರಿನ ಅಭಾವದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕ್ಷೇತ್ರಕ್ಕೂ ನೀರಿನ ಕೊರತೆಯಾಗಲಿದೆ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸಂಬಂಧಪಟ್ಟ ಅತಿಥಿಗೃಹ ಸಹಿತ ದೇಗುಲಕ್ಕೆ ಅಗತ್ಯವಿರುವ ನೀರನ್ನು ಒದಗಿಸಲು ಟ್ಯಾಂಕರ್‌ ನೀರು ಬಳಕೆ ಮಾಡಲಾಗುತ್ತಿದೆ. ಮುಂದಿನ ಒಂದು ವಾರದೊಳಗೆ ಮಳೆ ಬಾರದಿದಲ್ಲಿ ಕ್ಷೇತ್ರಕ್ಕೂ ನೀರಿನ ಬಿಸಿ ಮುಟ್ಟಲಿದೆ.
– ಎಚ್‌. ಹಾಲಪ್ಪ, ಕಾರ್ಯನಿರ್ವಹಣಾಧಿಕಾರಿ, ಕೊಲ್ಲೂರು ದೇಗುಲ

Advertisement

Udayavani is now on Telegram. Click here to join our channel and stay updated with the latest news.

Next