Advertisement

ಖಾಲಿಯಾದ ಬಜೆ: ಇನ್ನು ನಗರಕ್ಕೆ ಹಳ್ಳಗಳ ನೀರೇ ಆಧಾರ

11:21 PM May 05, 2019 | sudhir |

ಉಡುಪಿ: ರವಿವಾರದಿಂದ ನಗರಕ್ಕೆ ನೀರು ಪೂರೈಕೆ ಸ್ಥಗಿತವಾಗಿದ್ದು, ಇನ್ನೇನಿದ್ದರೂ ಹಳ್ಳ(ಗುಂಡಿ)ಗಳಿಂದ ಸಿಗುವ ನೀರೇ ಆಧಾರವಾಗಿದೆ. ಈ ಹಳ್ಳಗಳಲ್ಲಿ ಎಷ್ಟು ನೀರಿದೆ, ಎಷ್ಟು ದಿನಕ್ಕೆ ಸಿಗಬಹುದು ಎಂಬ ಮಾಹಿತಿ ಸದ್ಯಕ್ಕೆ ಅಧಿಕಾರಿಗಳಲ್ಲೂ ಇಲ್ಲ.

Advertisement

ಬಜೆ ಡ್ಯಾಂನ ಡೆಡ್‌ ಸ್ಟೋರೇಜ್‌ ಮಟ್ಟ 1.70 ಮೀ. ಆಗಿದೆ. ಆದರೆ ಈ ಬಾರಿ ಅದನ್ನೂ ಮೀರಿ ಪಂಪ್‌ಗೆ ಸಿಗುವ ಕೊನೆಯ ಹನಿಯವರೆಗೂ ಪಂಪ್‌ ಮಾಡಲಾಗಿದೆ. ಇಲ್ಲಿ 1.20 ಮೀ. ಹೂಳು ತುಂಬಿದ್ದು, ಒಂದು ವೇಳೆ ಇದಿಲ್ಲದಿದ್ದರೆ ಈ ಮಟ್ಟದ ನೀರಾದರೂ ಸಿಗುತ್ತಿತ್ತು.

ಅಂದು ಹೀಗಾಗಿರಲಿಲ್ಲ!
2017ರಲ್ಲೂ ನೀರಿನ ಪ್ರಮಾಣ ಇಷ್ಟೇ ಮಟ್ಟಕ್ಕೆ ಇಳಿದಿತ್ತು. ಅಂದು ಕೂಡ ಹಳ್ಳಗಳಿಂದ ಪಂಪ್‌ ಮಾಡಿ ನೀರನ್ನು ಬಜೆ ಡ್ಯಾಂಗೆ ಹರಿಸಿ ಪೂರೈಕೆ ಮಾಡಲಾಗಿತ್ತು. 2018ರ ಮೇ 5ರಂದು ನೀರಿನ ಮಟ್ಟ 0.95 ಮೀ. ಇತ್ತು. ಆದರೆ ಅಷ್ಟರಲ್ಲಿ ಮಳೆ ಸುರಿದಿದ್ದರಿಂದ ನೀರಿನ ಸಮಸ್ಯೆ ಎದುರಾಗಿರಲಿಲ್ಲ.

ಮರಳು ಮಿಶ್ರಿತ ಹೂಳು
ಪ್ರಸ್ತುತ ಬಜೆ ಡ್ಯಾಂನಲ್ಲಿ ಮರಳು ಮಿಶ್ರಿತ ಕೆಸರು ತುಂಬಿ ಹೋಗಿದೆ. ಸುಮಾರು 4 ಅಡಿಗಳಷ್ಟು ಕೆಸರು ತುಂಬಿಕೊಂಡಿದೆ. ಹೂಳು ತೆಗೆಯಲು ಅನುಮತಿ ಪ್ರಕ್ರಿಯೆ ಆರಂಭವಾಗುವುದೇ ಅನುಮಾನವಾಗಿದೆ.

ಹೂಳು ನಿರ್ಮೂಲನೆಯೊಂದೇ ಪರಿಹಾರ
ಉಡುಪಿಯಿಂದ ಬಜೆ ಅಣೆಕಟ್ಟು 24 ಕಿ.ಮೀ., ಶೀರೂರು ಅಣೆಕಟ್ಟು 36 ಕಿ.ಮೀ. ದೂರದಲ್ಲಿದ್ದರೆ, ಬಜೆ ಅಣೆಕಟ್ಟಿನಿಂದ ಶೀರೂರು ಅಣೆಕಟ್ಟು ನಡುವಿನ ಅಂತರ 12 ಕಿ.ಮೀ. ಇದೆ. ನೀರಿನಲ್ಲಿ ಸುಮಾರು 4 ಅಡಿಗಳಷ್ಟು ಹೂಳು ತುಂಬಿದ್ದು ಇದಕ್ಕೆ ಪರಿಹಾರ ಕಂಡುಕೊಂಡರಷ್ಟೇ ನೀರಿನ ಸಮಸ್ಯೆ ಪರಿಹಾರ ಸಾಧ್ಯವಾಗಲಿದೆ.

Advertisement

ಲಭ್ಯತೆಗೆ ಅನುಗುಣವಾಗಿ ಪೂರೈಕೆ
ನದಿಯ ಹಳ್ಳಗಳಿಂದ ರವಿವಾರದಿಂದಲೇ ನೀರೆತ್ತುವಿಕೆ (ಡ್ರೆಜ್ಜಿಂಗ್‌) ಪ್ರಕ್ರಿಯೆ ಆರಂಭಗೊಂಡಿದೆ. ನೀರಿನ ಲಭ್ಯತೆ ನೋಡಿಕೊಂಡು ನಗರಕ್ಕೆ ನೀರು ಪೂರೈಸಲಾಗುವುದು.
-ಆನಂದ್‌ ಕಲ್ಲೋಳಿಕರ್‌, ಪೌರಾಯುಕ್ತರು, ಉಡುಪಿ ನಗರಸಭೆ

ಎಲ್ಲೆಲ್ಲಿ ನೀರೆತ್ತುವಿಕೆ
ಹಿರಿಯಡ್ಕ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾಣಾಯಿ, ಭಂಡಾರಿಬೆಟ್ಟು, ಪುತ್ತಿಗೆ ಮಠದ ಬಳಿಯ ನೀರಿನ ಅಣೆಕಟ್ಟು ಪ್ರದೇಶಗಳಲ್ಲಿ ನೀರಿನ ಸಂಗ್ರಹವಿದ್ದು, ಅದನ್ನು ಕೂಡ ಪರಿಶೀಲಿಸಿ ಅಲ್ಲಿಂದಲೇ ಪಂಪಿಂಗ್‌ ಮಾಡಿ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳುವತ್ತ ಗಮನಹರಿಸಿದೆ.

ಮುಂದೇನು?
ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಪೂರೈಕೆ ಕಷ್ಟ. ಬಿಸಿಲಿನ ಝಳವೂ ಇರುವುದರಿಂದ ದಿನಕ್ಕೆ ಸರಾಸರಿ 7 ಸೆಂ.ಮೀ.ನಷ್ಟು ನೀರು ಆವಿಯಾಗುತ್ತಿದೆ. ರವಿವಾರ ಸಂಜೆಯಿಂದಲೇ ಹಳ್ಳಗಳಿಂದ ನೀರೆತ್ತುವ ಕೆಲಸಕ್ಕೆ ತಯಾರಿ ನಡೆಸಲಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು ಎಷ್ಟು ದಿನಕ್ಕೆ ಸಾಕು ಎನ್ನುವುದು ನೀರೆತ್ತಲು ಆರಂಭಿಸಿ 5 ದಿನಗಳಲ್ಲಿ ತಿಳಿಯಲಿದೆ. ಆದರೂ ಇದು ಹೆಚ್ಚೆಂದರೆ 20 ದಿನಗಳಿಗೆ ಸಿಗಬಹುದು ಎನ್ನಲಾಗಿದೆ. ಅಷ್ಟರೊಳಗೆ ಮಳೆ ಬಾರದಿದ್ದರೆ ಪರಿಸ್ಥಿತಿ ತೀರಾ ಬಿಗಡಾಯಿಸಲಿದೆ. ಪ್ರಸ್ತುತ ದಿನವೊಂದಕ್ಕೆ 24 ಎಂಎಲ್‌ಡಿ ನೀರು ಪೂರೈಕೆ ಅಗತ್ಯವಿದೆ.

  • ಪುನೀತ್‌ ಸಾಲ್ಯಾನ್‌
Advertisement

Udayavani is now on Telegram. Click here to join our channel and stay updated with the latest news.

Next