Advertisement

ಬರಿದಾದ ಅಘನಾಶಿನಿ: ನೀರಿಗಾಗಿ ಗೋಳು

12:33 PM May 31, 2019 | Team Udayavani |

ಕುಮಟಾ: ಕಳೆದ ಸುಮಾರು ಒಂದು ತಿಂಗಳಿಂದ ಕುಮಟಾ ಹಾಗೂ ಹೊನ್ನಾವರ ಪಟ್ಟಣದಲ್ಲಿ ತಲೆದೋರಿರುವ ಭೀಕರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ದಿನಕರ ಶೆಟ್ಟಿ ಗುರುವಾರ ತಾಲೂಕಿನ ಮರಾಕಲ್ ಕುಡಿಯುವ ನೀರಿನ ಯೋಜನಾ ಘಟಕದ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Advertisement

ಅಘನಾಶಿನಿ ನದಿಯ ನೀರನ್ನು ಮರಾಕಲ್ ನೀರು ಸರಬಾರಾಜು ಯೋಜನೆಯ ಮೂಲಕ ಕುಮಟಾ-ಹೊನ್ನಾವರ ಪಟ್ಟಣಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ಈ ಬಾರಿ ಅಘನಾಶಿನಿ ನದಿಗೆ ನೀರಿನ ಬರ ಕಾಡಿದ್ದು, ಗಣನೀಯ ಪ್ರಮಾಣದಲ್ಲಿ ನೀರು ಬತ್ತಿದೆ. ಹೀಗಾಗಿ ಪ್ರತಿನಿತ್ಯ ಅವಳಿ ಪಟ್ಟಣಗಳಿಗೆ ನೀರು ಪೂರೈಸುತ್ತಿದ್ದ ಪುರಸಭೆ ಈಗ ವಾರಕ್ಕೊಂದೆರಡು ಬಾರಿ ನೀರನ್ನು ಬಿಡಲಾರಂಭಿಸಿದೆ. ಮಳೆಯ ನಿರೀಕ್ಷೆಯನ್ನು ಇನ್ನಷ್ಟು ದಿನ ಮಾಡಬೇಕಾಗಿರುವುದರಿಂದ ನೀರಿನ ಸಮಸ್ಯೆ ಇನ್ನೂ ಹೆಚ್ಚು ಉಲ್ಭಣಗೊಳ್ಳಲಿದೆ. ಹೀಗಾಗಿ ಜನರಿಗೆ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಶಾಸಕ ದಿನಕರ ಶೆಟ್ಟಿ ಪುರಸಭೆ ಅಧಿಕಾರಿಗಳ ಜೊತೆಗೂಡಿ ನೀರು ಸರಬರಾಜು ಘಟಕ ಪ್ರದೇಶಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಲು ಮಾರ್ಗೋಪಾಯ ಸೂಚಿಸಿದರು.

ಪ್ರತಿವರ್ಷ ನೀರಿಗೆ ಹಾಹಾಕಾರ ಹೆಚ್ಚಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ಇನ್ನಷ್ಟು ನೀರಿನ ಬರ ಜನರನ್ನು ಕಾಡಲಿದೆ. ಇಂತಹ ಪರಿಸ್ಥಿತಿಯಲ್ಲಿ ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ನೀರು ಹರಿದು ಪೋಲಾಗುವುದನ್ನು ತಡೆಯಲು ಈಗಾಗಲೇ ನೀರು ಸಂಗ್ರಹಿಸಲು ಕಟ್ಟಿರುವ ಬಂಡನ್ನು ಇನ್ನಷ್ಟು ಎತ್ತರಿಸುವ ನಿರ್ಣಯ ಕೈಗೊಂಡರು. ಈಗಾಗಲೇ ಬಂಡು ವಿಸ್ತರಣೆಗೆ ಶಾಸಕರು 5 ಲಕ್ಷ ರೂ. ಅನುದಾನ ನೀಡಿದ್ದು, ಒಟ್ಟೂ 25 ಲಕ್ಷ ರೂ. ಖರ್ಚು ಮಾಡಲಾಗಿದೆ. ಹೀಗಿದ್ದರೂ ನೀರಿನ ಘಟಕ ಪ್ರದೇಶದಲ್ಲಿ ನೀರಿನ ಪ್ರಮಾಣ ತೀವ್ರ ಕುಸಿದಿದ್ದು ಕಂಡುಬರುತ್ತದೆ. ಆದ್ದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ನೀರು ನೀಡುವಂತೆ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಶಾಸಕರು ತಿಳಿಸಿದರು.

ದೀವಳ್ಳಿಯ ಅಘನಾಶಿನಿ ನದಿಯ ಉತ್ತರದಲ್ಲಿ ಕೈಲೋಡಿ ಗ್ರಾಮಕ್ಕೆ ಜನ ಸಂಚಾರಕ್ಕೆ ಅನುಕೂಲವಾಗುವಂತೆ ಬ್ರಿಡ್ಜ್ ಮತ್ತು ಬ್ಯಾರೇಜ್‌ ಕಟ್ಟಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದು ನಿರ್ಮಾಣಗೊಂಡರೆ ಜನರ ಓಡಾಟದ ಜೊತೆ ನೀರಿನ ಸಮಸ್ಯೆಯು ಬಗೆಹರಿಯಲಿದೆ. ಹೀಗಾಗಿ ಅತೀ ಶೀಘ್ರದಲ್ಲಿ ಈ ಯೋಜನೆಯ ಮಂಜೂರಾತಿಗೆ ಒತ್ತಾಯಿಸುತ್ತೇನೆ. ಯೋಜನೆಗೆ ಸುಮಾರು 10 ಕೋಟಿ ರೂ. ತಗಲುವ ಅಂದಾಜು ಮಾಡಲಾಗಿದ್ದು, ಇದರ ಪ್ರಸ್ತಾವನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಅಲ್ಲದೇ ನೀರಿನ ಬರ ಇನ್ನಷ್ಟು ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ಜಲ ಮೂಲಗಳಿರುವ ಪ್ರದೇಶಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಹಾಗೂ ಕೆರಗಳ ಹೂಳೆತ್ತುವುದರಿಂದ ಜಲಮೂಲಗಳನ್ನು ವೃದ್ಧಿಸಬಹುದೆಂದು ಶಾಸಕರು ಅಭಿಪ್ರಾಯಪಟ್ಟರು.

Advertisement

ಮರಾಕಲ್ ತೆರಳುವ ಮಾರ್ಗದಲ್ಲಿ ಶೇಡಿಕುಳಿಯಲ್ಲಿ ಮರಾಕಲ್ ನೀರಿನ ಯೋಜನೆಯ ಪೈಪ್‌ ಮೂಲಕ ಸೋರುತ್ತಿದ್ದ ನೀರನ್ನು ಸ್ಥಳೀಯರು ಸಂಗ್ರಹಿಸುತ್ತಿರುವುದನ್ನು ಕಂಡ ಶಾಸಕ ದಿನಕರ ಶೆಟ್ಟಿ ನೀರಿಗಾಗಿ ಜನರು ಕಷ್ಟಪಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸೊಪ್ಪಿನಹೊಸಳ್ಳಿ ಮತ್ತು ಸಂತೇಗುಳಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ತತ್ವಾರ ಎದುರಾಗಿದ್ದು, ಪಂಚಾಯತಗಳ ವ್ಯಾಪ್ತಿಯಲ್ಲಿ ನೀರಿನ ಯೋಜನೆ ರೂಪಿಸಬೇಕೆಂದು ಸಂತೇಗುಳಿ ಗ್ರಾಪಂ ಸದಸ್ಯ ವಿನಾಯಕ ಭಟ್ಟ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ., ಪುರಸಭೆ ಇಂಜಿನೀಯರ ಪ್ರಶಾಂತ ರೇವಣಕರ್‌, ಗ್ರಾಪಂ ಸದಸ್ಯರು ಹಾಗೂ ಸ್ಥಳೀಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next