ಗುಳೇದಗುಡ್ಡ: ಗ್ರಾಮದಲ್ಲಿ ಕಳೆದ ಏಳೆಂಟು ತಿಂಗಳಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯಲು ಜಂಗುಗೊಂಡ ನೀರೇ ಜನರಿಗೆ ಗತಿಯಾಗಿದ್ದು, ನಿತ್ಯವೂ ಶುದ್ಧ ಕುಡಿಯುವ ನೀರಿನ ಘಟಕದ ವೇಸ್ಟ್ ನೀರನ್ನು ದಿನಬಳಕೆಗೆ ಬಳಸುವಂತಾಗಿದೆ.
ಕೆಲವಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಲಿಂಗಾಪುರ ಗ್ರಾಮದ ಸದ್ಯದ ಸ್ಥಿತಿ.ಗ್ರಾಮದಲ್ಲಿ ಅಂದಾಜು 3 ಸಾವಿರ ಜನರಿದ್ದು, 450 ಕ್ಕೂ ಹೆಚ್ಚು ಮನೆಗಳಿವೆ. ಆದರೆ ಇಲ್ಲಿ ಹೇಳಿಕೊಳ್ಳುವಷ್ಟು ನೀರಿನ ಸೌಲಭ್ಯವಿಲ್ಲ. ಬಾವಿ ಇದ್ದರೂ ಕುಡಿಯುವ ನೀರಿಲ್ಲ.
ಅರ್ಧ ಇಂಚು ನೀರು: ಗ್ರಾಮದ ಜನರಿಗೆ ನೀರು ಪೂರೈಸುವ ಸಲುವಾಗಿ 6-7 ಕೊಳವೆ ಬಾವಿ ಕೊರೆಸಲಾಗಿತ್ತು. ಆದರೆ, ಅದರಲ್ಲಿ ಎರಡು ಮಾತ್ರ ನೀರು ಬಿದ್ದಿದ್ದು, ಅವು ಕೂಡಾ ತಲಾ ಅರ್ಧ ಇಂಚಿನಷ್ಟು ಮಾತ್ರ ನೀರು ಕೊಡುತ್ತವೆ. ಇದರಿಂದ ಲಭ್ಯವಿರುವ ನೀರಿನಲ್ಲಿಯೇ ಗ್ರಾಮ ಪಂಚಾಯಿತಿಯು ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸಿದೆ. ಗ್ರಾಮದಲ್ಲಿ ಮೂರು ವರ್ಷಗಳಿಂದ ನೀರಿನ ಸಮಸ್ಯೆಯಿದೆ. ಆದರೆ, ಯಾರೊಬ್ಬರು ಗಮನಹರಿಸುತ್ತಿಲ್ಲ.
ವೇಸ್ಟ್ ನೀರು: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಆ ಘಟಕದಿಂದ ಫಿಲ್ಟರ್ ಆಗಿ ಬಂದ ನಂತರ ಬರುವ ವೇಸ್ಟ್ ನೀರನ್ನು ಸಹ ಜನರು ತುಂಬಿಕೊಳ್ಳುತ್ತಿದ್ದಾರೆ. ನೀರಿನ ಸಮಸ್ಯೆ ಇರುವುದರಿಂದ ಶುದ್ಧೀಕರಣ ಘಟಕದ ವೇಸ್ಟ್ ನೀರನ್ನು ಸಹ ಅನಿವಾರ್ಯವಾಗಿ ಜನರು ದಿನಬಳಕೆಗೆ ಬಳಸುವಂತಾಗಿದೆ.
ತಿಮ್ಮಸಾಗರದಲ್ಲಿಯೂ ಇದೇ ಗೋಳು: ತಿಮ್ಮಸಾಗರ ಗ್ರಾಮದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಈ ಗ್ರಾಮದಲ್ಲಿಯು ಸಹ ಜನರಿಗೆ ನಿತ್ಯ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ನಿತ್ಯ ಕುಡಿಯುವ ನೀರು ತರಲು ಅರ್ಧ ಕಿ.ಮೀ ದೂರದ ಬಾವಿಯಿಂದ ತರಬೇಕು. ಇನ್ನೂ ಕೊಳವೆಬಾವಿ ನೀರೆ ಜನರಿಗೆ ಆಸರೆಯಾಗಿದ್ದು, ಕೈ ಕೊಟ್ಟರೇ ದೇವರೆ ಗತಿ ಈ ಜನರಿಗೆ. ತಿಮ್ಮಸಾಗರ ಗ್ರಾಮದಲ್ಲಿ ಸುಮಾರು 2 ಸಾವಿರದಷ್ಟು ಜನರಿದ್ದು, 400ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮದಲ್ಲಿ ಎರಡು ಕೊಳವೆಬಾವಿಗಳಿವೆ. ಆದರೆ ಅವುಗಳ ಪೈಪ್ ಗಳು ಕುಸಿದ್ದು ಬಿದ್ದಿವೆ. ಅಲ್ಲದೇ ಎರಡು ಬಾವಿಗಳಿದ್ದು, ಒಂದು ಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿದ್ದರೆ, ಇನ್ನೊಂದು ಗ್ರಾಮದ ಮುಂಭಾಗದಲ್ಲಿದೆ. ಆದರೆ ಅದು ಇದ್ದು ಇಲ್ಲದಂತಾಗಿದೆ. ಈ ಬಾವಿ ನೀರನ್ನು ಕೇವಲ ದಿನಬಳಕೆ ಉಪಯೋಗಿಸುವಂತಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ. ನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಜನರಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ಇನ್ನೂ ಶೌಚಾಲಯಕ್ಕೆ ಎಲ್ಲಿಂದ ನೀರು ತರಬೇಕು ಎಂಬುದು ಗ್ರಾಮಸ್ಥರ ಅಳಲು.
ಸಮಸ್ಯೆ ಬಗೆಹರಿದರೆ ಶಾಶ್ವತ ಪರಿಹಾರ: ಕೆಲವಡಿ ಪಂಚಾಯತ ವ್ಯಾಪ್ತಿಯಲ್ಲಿನ ಕೆಲವಡಿ, ಲಿಂಗಾಪುರ, ತಿಮ್ಮಸಾಗರ ಗುಳೇದಗುಡ್ಡ ರೇಲ್ವೆ ಸ್ಟೇಶನ್ ಈ ನಾಲ್ಕು ಗ್ರಾಮಗಳಿಗೆ ಅನಗವಾಡಿಯ ಘಟಪ್ರಭಾ ನದಿಗೆ ಪೈಪ್ ಲೈನ್ ಮಾಡಿ ಅಲ್ಲಿಂದ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ ಅನಗವಾಡಿ ಬ್ಯಾರೇಜ್‌ನಲ್ಲಿ ಹಾಕಲಾಗಿದ್ದ ಪೈಪ್, ಮೋಟಾರ್ ಸುಟ್ಟಿದ್ದು, ಇದರಿಂದ ನೀರು ಸರಬರಾಜು ಸ್ಥಗಿತಗೊಂಡಿದೆ. ಆ ಪೈಪ್‌ಲೈನ್ ದುರಸ್ತಿಗೊಂಡರೇ ಈ ನಾಲ್ಕು ಗ್ರಾಮಗಳಿಗೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಯಲಿದೆ.
ಗ್ರಾಮಕ್ಕೆ ಅನಗವಾಡಿಯಿಂದ ನೀರು ಪೂರೈಸಲು ಯೋಜನೆ ಮಾಡಲಾಗಿದೆ. ಆದರೆ ಕಳೆದ ವರ್ಷದ ಪ್ರವಾಹದಿಂದ ಪೈಪ್ ಹಾಳಾಗಿದ್ದು, ಆದ್ದರಿಂದ ಇಷ್ಟೇಲ್ಲ ಸಮಸ್ಯೆಯಾಗುತ್ತಿದೆ. ಅನಗವಾಡಿಯಿಂದ ನೀರು ಪೂರೈಸಿ ಸಂಗ್ರಹಿಸಲು ಈಗಾಗಲೇ ಟ್ಯಾಂಕ್ ಕೂಡಾ ನಿರ್ಮಾಣವಾಗುತ್ತಿದೆ. 15 ದಿನಗಳಲ್ಲಿ ಲಿಂಗಾಪುರ, ತಿಮ್ಮಸಾಗರ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಈ ವಾರದಲ್ಲಿ ಬಾದಾಮಿ ತಾಲೂಕಿನ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಟೆಂಡರ್ ಆಹ್ವಾನಿಸಲಾಗುವುದು. ಆ ನಂತರವೇ ಗ್ರಾಮಗಳಿಗೆ ಟ್ಯಾಕರ್ ಮೂಲಕ ನೀರು ಪೂರೈಸಲಾಗುವುದು. ಖಾಸಗಿ ಒಡೆತನದ ಬೊರವೆಲ್‌ಗಳಿಂದ ನೀರು ಪಡೆದು ಜನರಿಗೆ ನೀರು ಕೊಡಿ. ಒಪ್ಪದಿದ್ದರೇ ಸ್ವಾಧೀನಪಡಿಸಿಕೊಂಡು ಜನರಿಗೆ ನೀರು ಕೊಡಿಸುವ ವ್ಯವಸ್ಥೆ ಮಾಡುವೆ.
-ಸುಹಾಸ್ ಇಂಗಳೆ, ತಹಶೀಲ್ದಾರ್