Advertisement

ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ: ಯುದ್ಧವಾದರೆ ಐಎಎಫ್ ಪಾತ್ರ ನಿರ್ಣಾಯಕ: ಭದೌರಿಯಾ ಗರ್ಜನೆ

01:15 AM Sep 30, 2020 | mahesh |

ಹೊಸದಿಲ್ಲಿ: ಪ್ರಸ್ತುತ ಪೂರ್ವ ಲಡಾಖ್‌ನ ಎಲ್‌ಎಸಿಯ ಚಿತ್ರಣ ಒಗಟಾಗಿದೆ. ಅಲ್ಲಿ ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ ಎನ್ನುವ ಸ್ಥಿತಿಯಿದೆ ಎಂದು ವಾಯುಸೇನೆ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಆರ್‌.ಕೆ.ಎಸ್‌. ಭದೌರಿಯಾ ಗಡಿಯ ವಸ್ತುಸ್ಥಿತಿಯನ್ನು ಮುಂದಿಟ್ಟಿದ್ದಾರೆ.

Advertisement

“ಪಿಟಿಐ’ಗೆ ನೀಡಿದ ಹೇಳಿಕೆಯಲ್ಲಿ ಅವರು, “ಉತ್ತರದ ಗಡಿಯುದ್ದಕ್ಕೂ ನೆಮ್ಮದಿ ಇಲ್ಲದ ವಾತಾವರಣ ಸೃಷ್ಟಿಯಾಗಿದೆ. ಪೂರ್ವ ಲಡಾಖ್‌ನಲ್ಲಿ ಚೀನದ ಯಾವುದೇ ದುಸ್ಸಾಹಸಗಳನ್ನು ಹಿಮ್ಮೆಟ್ಟಿಸಲು ಐಎಎಫ್ ಸಮರ್ಥವಾಗಿದೆ. ಭವಿಷ್ಯದಲ್ಲಿ ಗಡಿಬಿಕ್ಕಟ್ಟು ತಾರಕಕ್ಕೇರಿದ್ದೇ ಆದಲ್ಲಿ ನಮ್ಮ ದಿಗ್ವಿಜಯದಲ್ಲಿ ವಾಯುಶಕ್ತಿಯೇ ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದು ಬೀಜಿಂಗ್‌ಗೆ ನೇರ ಸಂದೇಶ ರವಾನಿಸಿದ್ದಾರೆ.

“ಎದುರಾಳಿಗಳನ್ನು ಹಿಮ್ಮೆಟ್ಟಿಸಲು ಐಎಎಫ್ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಎಂಥದ್ದೇ ದುರ್ಗಮ ವಾತಾವರಣದಲ್ಲೂ ಯಶಸ್ವಿ ಕಾರ್ಯಾಚರಣೆ ನಡೆಸಲು ಸಮರ್ಥವಾಗಿದೆ’ ಎಂದು ಹೇಳಿದರು. ಕಳೆದ ವಾರದಿಂದ ಪೂರ್ವ ಲಡಾಖ್‌ನ ಉದ್ದಕ್ಕೂ ಐಎಎಫ್ ಜೆಟ್‌ಗಳು ಯುದ್ಧಸಾಮಗ್ರಿಗಳನ್ನು ಹೊತ್ತೂಯ್ಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

ಚೀನ ಮತ್ತೆ ಕ್ಯಾತೆ
ವಾಸ್ತವ ನಿಯಂತ್ರಣ ರೇಖೆ ಬಗ್ಗೆ ಚೀನ ಮತ್ತೆ ಹಗುರ ಹೇಳಿಕೆ ನೀಡಿದೆ. “ಭಾರತ ಕಾನೂನು ಬಾಹಿರವಾಗಿ, ಏಕಪಕ್ಷೀಯಾಗಿ ರಚಿಸಿರುವ ಸ್ವಘೋಷಿತ ಎಲ್‌ಎಸಿಯನ್ನು ಬೀಜಿಂಗ್‌ ಯಾವತ್ತೂ ಗುರುತಿಸಿಯೇ ಇಲ್ಲ. ಇದು ನಮ್ಮ ಗಮನಕ್ಕೂ ಬಂದಿಲ್ಲ’ ಎಂದು ಚೀನ ವಿದೇಶಾಂಗ ಇಲಾಖೆ ಅಪಸ್ವರವೆತ್ತಿದೆ. “ಗಡಿಯ ವಿವಾದಿತ ಪ್ರದೇಶಗಳಲ್ಲಿ ಸೇನಾಶಕ್ತಿ ಮೂಲಕ ನಿಯಂತ್ರಣ ಸಾಧಿಸುವುದು, ಮೂಲ ಸೌಕರ್ಯಗಳನ್ನು ಹೆಚ್ಚಿಸುವುದನ್ನು ಬೀಜಿಂಗ್‌ ವಿರೋಧಿಸುತ್ತದೆ’ ಎಂದು ಇಲಾಖೆ ವಕ್ತಾರ ವ್ಯಾಂಗ್‌ ವೆನ್‌ಬಿನ್‌ ತಿಳಿಸಿದ್ದಾರೆ.

ಭಾರತ ತಿರುಗೇಟು
“ಏಕಪಕ್ಷೀಯ ಎಲ್‌ಎಸಿ’ ಎಂಬ ಬೀಜಿಂಗ್‌ನ ಹಗುರ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. “ಎಲ್‌ಎಸಿ ಕುರಿತು 1959ರ ಅಭಿಪ್ರಾಯವನ್ನೇ ಈಗಲೂ ಮಂಡಿಸಿದೆ. ಚೀನದ ಈ ಏಕಪಕ್ಷೀಯ ನಿಲುವನ್ನು ಭಾರತ ಒಪ್ಪುವುದಿಲ್ಲ. ಆ ಬಳಿಕ ಎಲ್‌ಎಸಿ ಕುರಿತಾಗಿ ಉಭಯ ರಾಷ್ಟ್ರಗಳ ನಡುವೆ ಸಾಕಷ್ಟು ಒಪ್ಪಂದಗಳು ನಡೆದಿವೆ. ಮಹತ್ವದ ಮಾತುಕತೆಗಳು ಘಟಿಸಿವೆ. ಬೀಜಿಂಗ್‌ ಹೇಳಿಕೆ ಎಲ್‌ಎಸಿ ಕುರಿತಾದ ಗಂಭೀರ ಬದ್ಧತೆಗಳಿಗೆ ಸಂಪೂರ್ಣ ತದ್ವಿರುದ್ಧವಿದೆ. ಚೀನ ಇಚ್ಚಾಶಕ್ತಿ ತೋರಿಸದ ಕಾರಣಕ್ಕಷ್ಟೇ ಎಲ್‌ಎಸಿಯಲ್ಲಿ ಗಡಿ ನಿರ್ಣಯದ ಕೆಲಸ ಪ್ರಗತಿ ಕಂಡಿಲ್ಲ’ ಎಂದು ಭಾರತದ ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

Advertisement

“ಕ್ವಾಡ್‌’ ಕೂಟಕ್ಕೆ ಚೀನ ಅಸೂಯೆ
ಅಕ್ಟೋಬರ್‌ 6ರಂದು ಟೋಕಿಯೊದಲ್ಲಿ ನಡೆಯಲಿರುವ ಕ್ವಾಡ್‌ ವಿದೇಶಾಂಗ ಸಚಿವರ ಶೃಂಗಸಭೆಯನ್ನು ಚೀನ ತೀವ್ರವಾಗಿ ವಿರೋಧಿಸಿದೆ. “ಮೂರನೇ ಶಕ್ತಿಯ ಹಿತಾಸಕ್ತಿ¤ಗಳಿಗೆ ಹಾನಿ ಮಾಡುವುದಕ್ಕಾಗಿ ರೂಪಿಸಲಾಗುತ್ತಿರುವ ಪರಮ ಸಂಚಿನ ಕೂಟ ಇದಾಗಿದೆ’ ಎಂದು ಬೀಜಿಂಗ್‌ ವ್ಯಾಖ್ಯಾನಿಸಿದೆ. ಬಹುಪಕ್ಷೀಯ ಸಹಕಾರಗಳು ಯಾವಾಗಲೂ ಪಾರದರ್ಶಕವಾಗಿರಬೇಕು. ಪ್ರತ್ಯೇಕ ಸಂಚಿನ ಕೂಟವಾಗಬಾರದು ಎಂದು ಚೀನ ವಿದೇಶಾಂಗ ಇಲಾಖೆ ಹೇಳಿದೆ. ಜಪಾನ್‌ ವಿದೇಶಾಂಗ ಮಂತ್ರಿ ಜತೆಗಿನ ಕ್ವಾಡ್‌ ಶೃಂಗದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಪಾಲ್ಗೊಳ್ಳುತ್ತಿರುವುದು ಚೀನಕ್ಕೆ ಅಸೂಯೆ ಹೆಚ್ಚಿಸಿದೆ.

ಮಾಲ್ಡೀವ್ಸ್‌ಗೆ ಎಚ್‌ಎಎಲ್‌ ನಿರ್ಮಿತ ಡಾರ್ನಿಯರ್‌
ಎಚ್‌ಎಎಲ್‌ ನಿರ್ಮಿತ ಡಾರ್ನಿಯರ್‌ ಯುದ್ಧವಿಮಾನ ವನ್ನು ಭಾರತ, ಮಾಲ್ಡೀವ್ಸ್‌ಗೆ ಹಸ್ತಾಂತರಿಸಲಿದೆ. 2016ರಲ್ಲಿ ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ಭಾರತದ ಭೇಟಿ ವೇಳೆ ಡಾರ್ನಿಯರ್‌ ಕಡಲ ಕಣ್ಗಾವಲು ವಿಮಾನ ಹಸ್ತಾಂತರ ಕುರಿತು ಒಪ್ಪಂದ ನಡೆದಿತ್ತು. ದ್ವೀಪರಾಷ್ಟ್ರದ ಆರ್ಥಿಕ ವಲಯ ರಕ್ಷಣೆ ಮತ್ತು ಕಡಲ ಉಗ್ರರ ಮೇಲೆ ನಿಗಾ ಇಡಲು ಡಾರ್ನಿ ಯರ್‌ ನೆರವಾಗಲಿದೆ. ಪ್ರಸ್ತುತ ವಿಮಾನ ಮತ್ತು ಅದರ ಹಸ್ತಾಂತರ ವೆಚ್ಚವನ್ನು ಭಾರತವೇ ಭರಿಸಲಿದೆ. ಯುದ್ಧ ವಿಮಾನ ನಿರ್ವಹಣೆ ಸಂಬಂಧ ಮಾಲ್ಡೀವ್ಸ್‌ನ 7 ಪೈಲಟ್‌ಗಳು, ವಾಯುಪರಿವೀಕ್ಷಕರು ಮತ್ತು ಎಂಜಿನಿಯರ್‌ಗಳಿಗೆ ಭಾರತೀಯ ನೌಕಾಪಡೆ ತರಬೇತಿ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next