Advertisement
ನ.21ಕ್ಕೆ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಸುಳ್ಯ, ಪುತ್ತೂರಿನ 39 ಮಂದಿ ಪೈಕಿ 25ಕ್ಕೂ ಅಧಿಕ ಪ್ರಯಾಣಿಕರು ವೀಸಾ ಸಿಗದೆ ಮನೆಗೆ ಮರಳಿದ್ದಾರೆ. ವೀಸಾ ಸಿಗುವ ನಿರೀಕ್ಷೆಯಲ್ಲಿ ಕೆಲವರು ಎರಡು ದಿನಗಳಿಂದ ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದರು. ಆದರೆ ಟ್ರಾವೆಲ್ ಸಂಸ್ಥೆ ಗುರವಾರ ಸಂಜೆ ತನಕವು ವೀಸಾ ಒದಗಿಸುವ ವ್ಯವಸ್ಥೆ ಮಾಡಿಲ್ಲ ಎಂದು ಕೆಲವರು ಆಪಾದಿಸಿದ್ದಾರೆ.
ವಿಶ್ವ ತುಳು ಸಾಹಿತ್ಯ ಸಮ್ಮೇಳನದ ಕಾರಣಕ್ಕಾಗಿ 39 ಮಂದಿ ಬೆಂಗಳೂರಿನ ಟ್ರಾವೆಲ್ ಸಂಸ್ಥೆಗೆ ಸುಳ್ಯದ ವ್ಯಕ್ತಿಯೊಬ್ಬರ ನೇತೃತ್ವದಲ್ಲಿ ಎರಡು ತಿಂಗಳ ಹಿಂದೆ ಹಣ ಪಾವತಿಸಿದ್ದರು. ಎರಡು ದಿನಗಳ ಹಿಂದೆ ಆರೇಳು ಮಂದಿಗೆ ವೀಸಾ ಬಂದಿತ್ತು. ಉಳಿದವರ ವೀಸಾದ ಬಗ್ಗೆ ಟೂರ್ ನೇತೃತ್ವದ ವಹಿಸಿದ್ದ ಸಂಸ್ಥೆಯ ಬಳಿ ವಿಚಾರಿಸಿದಾಗ, ನ.21ಕ್ಕೆ ಬಜಪೆ ವಿಮಾನ ನಿಲ್ದಾಣಕ್ಕೆ ಬರುವಂತೆ ಟ್ರಾವೆಲ್ ಸಂಸ್ಥೆಯ ಸಿಬಂದಿ ತಿಳಿಸಿದ್ದು, ಅಲ್ಲಿ ವೀಸಾ ನೀಡುವುದಾಗಿ ಹೇಳಿದ್ದ. ಇದನ್ನು ನಂಬಿ ಎಲ್ಲರೂ ಬಜಪೆಗೆ ತೆರಳಿದ್ದರು. ಆ ವೇಳೆ ಮೂವರ ವೀಸಾ ಮಾತ್ರ ಸಿಕ್ಕಿದೆ. ಉಳಿದವರ ವೀಸಾದ ಬಗ್ಗೆ ವಿಚಾರಿಸಿದಾಗ, ಏಜೆನ್ಸಿ ಸಂಸ್ಥೆಯ ವ್ಯಕ್ತಿ ತಾನು ದುಬೈನಲ್ಲಿದ್ದು, ಇಂಟರ್‌ನೆಟ್ ಸಮಸ್ಯೆ ಇದ್ದು, ಈಗ ಕಳಿಸುವೆ ಎಂದು ಉತ್ತರಿಸಿದ್ದ.
Related Articles
ಇದನ್ನು ನಂಬಿ ಏರ್‌ಪೋರ್ಟ್‌ನಲ್ಲಿ ಕಾದು ಕುಳಿತರು. ಆದರೆ ಮೊದಲ ದಿನ ವೀಸಾ ಬರಲಿಲ್ಲ. ನ.22ಕ್ಕೆ ಏಳೆಂಟು ಮಂದಿಗೆ ವೀಸಾ ಬಂದಿದೆ. ಅದರಲ್ಲಿಯು ಒಂದೇ ಕುಟುಂಬದ ಎಲ್ಲರಿಗೂ ವೀಸಾ ಸಿಗದೆ ಅವರು ತೆರಳಲು ಸಾಧ್ಯವಾಗಿಲ್ಲ. ಕಾದು ಕಾದು ವೀಸಾ ಸಿಗದೆ ಇದ್ದ ಹಲವು ಪ್ರಯಾಣಿಕರು ಗುರುವಾರ ರಾತ್ರಿ ಮನೆಗೆ ಮರಳಿದ್ದಾರೆ. ಇನ್ನು ವೀಸಾ ಬಂದರೂ, ವಿಮಾನ ಟಿಕೆಟ್ ಶುಲ್ಕ, ದುಬೈಯಲ್ಲಿ ಉಳಿದುಕೊಳ್ಳುವ ವೆಚ್ಚ ಮುಂತಾದವುಗಳನ್ನು ಪ್ರಯಾಣಿಕರೇ ಭರಿಸಬೇಕಾದ ಸಾಧ್ಯತೆ ಇರುವ ಕಾರಣ ಉಳಿದವರು ತೆರಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
Advertisement
11 ಲ. ರೂ.ಪಾವತಿಟ್ರಾವೆಲ್ ಸಂಸ್ಥೆಗೆ 39 ಮಂದಿ ತಲಾ 35 ಸಾವಿರಕ್ಕೂ ಅಧಿಕ ಹಣ ಪಾವತಿಸಿದ್ದರು. ಒಟ್ಟು 11 ಲ.ರೂ. ಅನ್ನು ಟ್ರಾವೆಲ್ ಸಂಸ್ಥೆಯ ಅಕೌಂಟ್‌ಗೆ ನೆಫ್ಟ್ ಮಾಡ ಲಾಗಿತ್ತು. ವಿಮಾನ ಟಿಕೆಟ್, ವೀಸಾ, ಐದು ದಿನದ ಪ್ರವಾಸ ವೆಚ್ಚವೆಲ್ಲವೂ ಇದರಲ್ಲಿ ಸೇರಿದೆ ಎಂದು ಸಂಸ್ಥೆ ಹೇಳಿ, ಪ್ರಯಾಣದ ವಿವರವನ್ನು ಕಳಿಸಿತ್ತು. ಆದರೆ ಅಗತ್ಯ ವ್ಯವಸ್ಥೆ ಮಾಡುವಲ್ಲಿ ಎಡವಿದೆ.