ನವದೆಹಲಿ: ಕೋವಿಡ್ 19 ಲಸಿಕೆ ಅಭಿಯಾನ ಚುರುಕುಗೊಳಿಸಲು ಉತ್ತರಪ್ರದೇಶದ ಇಟಾವಾ ಜಿಲ್ಲಾಡಳಿತ ಹೊಸ ಮಾರ್ಗವೊಂದನ್ನು ಕಂಡುಕೊಂಡಿದೆ. ಅದೇನೆಂದರೆ ” ಲಸಿಕೆ ಸರ್ಟಿಫಿಕೇಟ್ ಇಲ್ಲದಿದ್ದರೆ ಮದ್ಯ ಇಲ್ಲ” ಎಂಬ ಸೂತ್ರ ಇದಾಗಿದೆ!
ಇದನ್ನೂ ಓದಿ:ತಂದೆ ತಾಯಿ ಮರಣ ಹೊಂದಿದ ನಂತರ ಮಕ್ಕಳಿಗೆ ಸಿಗಲಿದೆ 1.25 ಲಕ್ಷ ರೂ ಪಿಂಚಣಿ
ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಗಳ ಹೊರಭಾಗದಲ್ಲಿ “ಲಸಿಕೆ ಪ್ರಮಾಣಪತ್ರ ಇಲ್ಲದಿದ್ದರೆ ಮದ್ಯ ಇಲ್ಲ” ಎಂಬ ಬರಹವನ್ನು ಪ್ರದರ್ಶಿಸುವಂತೆ ಇಟಾವಾ ಜಿಲ್ಲಾಡಳಿತ ನೋಟಿಸ್ ಅನ್ನು ಜಾರಿಗೊಳಿಸಿದೆ ಎಂದು ವರದಿ ತಿಳಿಸಿದೆ. ಇಟಾವಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಮ್ ಕುಮಾರ್ ಸಿಂಗ್ ಅವರ ನಿರ್ದೇಶನದ ಮೇರೆಗೆ ನೋಟಿಸ್ ನೀಡಲಾಗಿದೆ ಎಂದು ವರದಿ ಹೇಳಿದೆ.
ಕಳೆದ ವಾರ ಅಲಿಗಢ್ ನಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಈ ಸೂಚನೆಯ ನಂತರ ಹೇಮ್ ಕುಮಾರ್ ಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ಸೆಫಾಯಿ ಜಿಲ್ಲೆಯಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಪರಿಶೀಲಿಸಿ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ 19 ಸೋಂಕಿನ ವಿರುದ್ಧ ಯಾರು ಲಸಿಕೆ ತೆಗೆದುಕೊಂಡಿಲ್ಲವೋ ಅವರಿಗೆ ಮದ್ಯವನ್ನು ಮಾರಾಟ ಮಾಡಬಾರದು ಎಂದು ಖಡಕ್ ಸೂಚನೆಯನ್ನು ಸಿಂಗ್ ನೀಡಿದ್ದು, ಮದ್ಯದ ಅಂಗಡಿ ಹೊರಭಾಗದಲ್ಲಿ ನೋಟಿಸ್ ಗಳನ್ನು ಪ್ರದರ್ಶಿಸುವಂತೆ ತಿಳಿಸಿದ್ದಾರೆ.