ನರೇಗಲ್ಲ: ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸಿ ಬಯಲು ಶೌಚ ಮುಕ್ತ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಂತರ ಅನುದಾನ ಸುರಿಯುತ್ತಿವೆ. ಆದರೆ ಇಲ್ಲಿನ ಹೋಬಳಿ ವ್ಯಾಪ್ತಿಯ ಜನ ಶೌಚಾಲಯ ಕಟ್ಟಿಕೊಂಡರೂ ಇನ್ನೂ ಬಯಲು ಶೌಚ ಬಿಟ್ಟಿಲ್ಲ!
ಪ್ರತಿ ಗ್ರಾಮ ಹಾಗೂ ಪಟ್ಟಣಗಳನ್ನು ಬಯಲು ಶೌಚಮುಕ್ತವಾಗಿಸುವ ನಿಟ್ಟಿನಲ್ಲಿ ಸರ್ಕಾರ ಸ್ವತ್ಛ ಭಾರತ ಯೋಜನೆ, ಸ್ವಚ್ಛಗ್ರಾಮ, ಗ್ರಾಮ ನೈರ್ಮಲ್ಯ, ಓಡಿಎಫ್ ಸೇರಿದಂತೆ ಹಲವಾರು ಯೋಜನೆ ಜಾರಿಗೆ ತಂದಿದೆ. ಆದರೆ ಸಮರ್ಪಕ ಜಾರಿಯಾಗಿಲ್ಲ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡರೂ ಕೆಲವರು ಬಳಕೆ ಮಾಡುತ್ತಿಲ್ಲ.
ಸಂಗ್ರಹ ಕೊಠಡಿಯಾದ ಶೌಚಾಲಯ: ಪ.ಪಂ ಹಾಗೂ ಗ್ರಾ.ಪಂ ಅನುದಾನದಲ್ಲಿ ನಿರ್ಮಿಸಿಕೊಂಡಿರುವ ವೈಯಕ್ತಿಕ ಶೌಚಾಲಯಗಳಲ್ಲಿ ಜನರು ಕಟ್ಟಿಗೆ, ಕುಳ್ಳು, ಹಳೇ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಇಡುವುದಕ್ಕೆ ಮಾತ್ರ ಸೀಮಿತವಾಗಿವೆ. ಶೌಚಾಲಯಗಳು ಬಳಕೆಯಾಗದೇ ಯೋಜನೆ ಹಳ್ಳ ಹಿಡಿದಿದ್ದು, ಉದ್ದೇಶ ಈಡೇರುತ್ತಿಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ನೀಡಿದೆ. ಆದರೆ, ಜನರು ಸರ್ಕಾರದ ಹಣ ಪಡೆದು ಶೌಚಾಲಯ ನಿರ್ಮಿಸಿಕೊಂಡರೂ ಬಳಕೆ ಮಾತ್ರ ಮಾಡುತ್ತಿಲ್ಲ. ಆರೋಗ್ಯದ ದೃಷ್ಟಿಯಿಂದ ಜನರು ಶೌಚಾಲಯ ಬಳಕೆ ಮಾಡುವುದು ಅವಶ್ಯಕವಾಗಿವೆ. ಶೌಚಾಲಯ ಕುರಿತು ಹೆಚ್ಚು ಜಾಗೃತಿ ಕಾರ್ಯಕ್ರಮ ನಡೆಯಬೇಕಿದೆ
.-ಎಂ.ಎಸ್. ಧಡೇಸೂರಮಠ, ಪರಿಸರ ಪ್ರೇಮಿ
-ಸಿಕಂದರ ಎಂ. ಆರಿ