ಬೀದರ: ರಾಸುಗಳಿಗೆ ಉನ್ನತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಸರ್ಕಾರ ರಾಜ್ಯದಲ್ಲಿ ಜಿಲ್ಲೆಗೊಂದು “ಪಶು ಪಾಲಿ ಕ್ಲಿನಿಕ್’ ಆಸ್ಪತ್ರೆ ಆರಂಭಿಸಿ ಐದಾರು ವರ್ಷಗಳೇ ಕಳೆದಿದೆ. ಆದರೆ, ತಜ್ಞ ವೈದ್ಯರು ಮತ್ತು ಆಧುನಿಕ ಚಿಕಿತ್ಸಾ ಯಂತ್ರೋಪಕರಣಗಳ ಕೊರತೆಯಿಂದಾಗಿ ಕ್ಲಿನಿಕ್‌ಗಳು ಇದ್ದೂ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿವೆ.
ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ಪುನರ್‌ರಚನೆ ಬಳಿಕ 2014ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪಾಲಿಕ್ಲಿನಿಕ್ ಕೇಂದ್ರಗಳನ್ನು ಆರಂಭಿಸಿದೆ. ಜಾನುವಾರುಗಳಿಗೆ ಉನ್ನತ ಚಿಕಿತ್ಸೆಯ ವ್ಯವಸ್ಥೆ ಕೊರತೆ ಇದೆ. ಜತೆಗೆ ಪಶುಗಳನ್ನು ಆಸ್ಪತ್ರೆವರೆಗೆ ಸಾಗಿಸುವುದು ರೈತರಿಗೆ ಕಷ್ಟ. ಹಾಗಾಗಿ ಪಾಲಿ ಕ್ಲಿನಿಕ್‌ಗಳ ಮೂಲಕ ಜಾನುವಾರುಗಳ ಆರೈಕೆ, ರೋಗ ಪತ್ತೆ ಜತೆಗೆ ಶಸ್ತ್ರಚಿಕಿತ್ಸೆ ಕಲ್ಪಿಸಿ ರೈತರಿಗೆ ನೆರವಾಗುವುದು ಮತ್ತು ರಾಸುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರ್ಕಾರ ಬೀದರ ಸೇರಿದಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪಾಲಿ ಕ್ಲಿನಿಕ್ ಗಳನ್ನು ಸ್ಥಾಪಿಸಿದೆ.
ಆದರೆ, ರಾಜ್ಯದ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಈವರೆಗೆ ಸುಸಜ್ಜಿತ ಸ್ವಂತ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಕೆಲವೆಡೆ ಕಟ್ಟಡ ನಿರ್ಮಾಣಗೊಂಡರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕೆಲವು ಜಿಲ್ಲೆ ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಪಶು ಆಸ್ಪತ್ರೆಯ ಒಂದೆರಡು ಕೋಣೆಗಳಲ್ಲಿಯೇ ಈ ಪಾಲಿ ಕ್ಲಿನಿಕ್‌ಗಳನ್ನು ನಡೆಸುವ ಸ್ಥಿತಿ ಇದೆ. ಇದರಿಂದಾಗಿ ಕ್ಲಿನಿಕ್‌ಗಳ ವೈದ್ಯರು ಮತ್ತು ಸಿಬ್ಬಂದಿ ಪಶು ಇಲಾಖೆಯ ಸಮನ್ವಯ ಕೆಲಸ ನಿರ್ವಹಣೆಗೆ ಮಾತ್ರ ಹೆಚ್ಚು ಬಳಕೆಯಾಗುತ್ತಿದ್ದಾರೆ.
ಹೀಗಿದೆ ನೋಡಿ ದುಸ್ಥಿತಿ: ದೊಡ್ಡ ರಾಸುಗಳ ತಪಾಸಣೆಗಾಗಿ ಅಲ್ಟ್ರಾ ಸೋನೋಗ್ರಾಫಿ, ಪ್ರಾಣಿಗಳ ದೇಹದಲ್ಲಿ ನೋವಿನ ನಿಖರ ಕಾರಣ ತಿಳಿಯಲು ಎಕ್ಸರೇ ಯಂತ್ರ, ಗರ್ಭಧಾರಣೆಗಾಗಿ ಆಧುನಿಕ ಉಪಕರಣ, ರಕ್ತ ಸಂಬಂಧಿ ಕಾಯಿಲೆಗಳ ಪತ್ತೆಗೆ ಬ್ಲಿಡ್ ಅನಲೈಜರ್, ಶಸ್ತ್ರಚಿಕಿತ್ಸೆ ಮತ್ತು ಹೆರಿಗೆ ಕೊಠಡಿ ಸೇರಿ ಅಗತ್ಯ ಸೌಲಭ್ಯ ಹಾಗೂ ಆಧುನಿಕ ಯಂತ್ರಗಳನ್ನು ಈ ಕ್ಲಿನಿಕ್‌ಗಳು ಹೊಂದಿರಬೇಕು. ಇದರೊಟ್ಟಿಗೆ ಕ್ಲಿನಿಕ್‌ಗಳಲ್ಲಿ ಒಂದು ಪ್ರತ್ಯೇಕ ಉಪ ನಿರ್ದೇಶಕರ ಹುದ್ದೆ ಜತೆಗೆ 3 ಜನ ತಜ್ಞ ಪಶು ವೈದ್ಯರು, ಪರೀಕ್ಷಕರು, ಲ್ಯಾಬ್ ಟೆಕ್ನಿಶಿಯನ್ ಸೇರಿ 9 ಸಿಬ್ಬಂದಿ ನಿಯೋಜನೆ ಇರಬೇಕು. ಆದರೆ, ಬಹುತೇಕ ಕೇಂದ್ರಗಳಲ್ಲಿ ಈ ವ್ಯವಸ್ಥೆ ಕಲ್ಪಿಸುವಲ್ಲಿ ನಿರ್ಲಕ್ಷ ತೋರಲಾಗಿದೆ.
ಜಿಲ್ಲಾ ಕೇಂದ್ರ ಬೀದರನಲ್ಲಿ ಪಾಲಿ ಕ್ಲಿನಿಕ್ ಕಟ್ಟಡ ನಿರ್ಮಾಣಗೊಂಡರೂ ಉದ್ಘಾಟನೆಗೊಂಡಿಲ್ಲ. ಹಾಗಾಗಿ ಸಧ್ಯ ಸ್ಥಳೀಯ ಪಶು ಇಲಾಖೆಯ ಕಟ್ಟಡದಲ್ಲಿ ಈ ಕ್ಲಿನಿಕ್ ನಡೆಸಲಾಗುತ್ತಿದೆ. ಉಪ ನಿರ್ದೇಶಕರು ಸೇರಿ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಸೋನೋಗ್ರಾಫಿ ಸೇರಿ ಒಂದೆರಡು ಯಂತ್ರಗಳು ಬಿಟ್ಟರೆ ವೈದ್ಯಕೀಯ ಪರೀಕ್ಷೆಗಳಿಗೆ ಬೇಕಾದ ಇನ್ನೂ ಸಾಕಷ್ಟು ಯಂತ್ರಗಳು ಬಂದಿಲ್ಲ. ಹಾಗಾಗಿ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಮೂಲ ಉದ್ದೇಶಕ್ಕೆ ಹಿನ್ನಡೆ ಆಗಿದೆ.
-ಶಶಿಕಾಂತ ಬಂಬುಳಗೆ