ಹಾವೇರಿ: ಗ್ರಾಮೀಣ ಮಹಿಳೆಯರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಆದರೆ ಅಧಿಕಾರಿಗಳ ಅಸಹಕಾರದಿಂದ ಇಂತಹ ಯೋಜನೆಗಳು ಸಫಲವಾಗುತ್ತಿಲ್ಲ.
ತಾಲೂಕಿನ ನೀರಲಗಿಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಬಾಗಿಲು ಮುಚ್ಚಿಕೊಂಡೇ ಇದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಆರೋಗ್ಯ ವ್ಯವಸ್ಥೆ ಅಭಿವದ್ಧಿ ಮತ್ತು ಸುಧಾರಣೆ ಯೋಜನೆಯಡಿ 10 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಿಸಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕೇಂದ್ರವನ್ನು 2015 ಫೆ. 2 ರಂದು ಅಂದಿನ ಸಚಿವ ಎಚ್.ಸಿ ಮಹಾದೇವಪ್ಪ ಉದ್ಘಾಟಿಸಿದ್ದರು. ಕಟ್ಟಡವೇನೋ ಉದ್ಘಾಟನೆಗೊಂಡಿದೆ ಆದರೆ, ನಾಲ್ಕು ವರ್ಷಗಳಿಂದ ಈ ಕೇಂದ್ರ ಜನರಿಗೆ ಸಮರ್ಪಕ ಸೇವೆ ನೀಡುವಲ್ಲಿ ವಿಫಲವಾಗಿದೆ
ಈ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕೇಂದ್ರ ಜನಸೇವೆಗೆ ದೊರೆತ ಆರಂಭದಲ್ಲಿ ಓರ್ವ ಶೂಶ್ರುಷಕಿ ಇದ್ದರು. ಅವರು ಕೆಲ ತಿಂಗಳ ನಂತರ ವರ್ಗಾವಣೆಯಾದರು. ಅಂದು ಬಾಗಿಲು ಮುಚ್ಚಿದ ಕೇಂದ್ರ ಇನ್ನೂವರೆಗೂ ತೆರೆದಿಲ್ಲ. ಮತ್ತೂಬ್ಬ ಆರೋಗ್ಯ ಸಹಾಯಕಿಯರು ಇನ್ನೂವರೆಗೂ ಬಂದಿಲ್ಲ. ಹೀಗಾಗಿ ಗ್ರಾಮಸ್ಥರ ಪಾಲಿಗೆ ಈ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.
ಗರ್ಭಿಣಿಯರು ಪ್ರತಿ ತಿಂಗಳು ಹೆರಿಗೆ ತಪಾಸಣೆ ಜತೆಗೆ ಅವರ ಆರೋಗ್ಯ ರಕ್ಷಣೆ ಹಾಗೂ ಜನಿಸುವ ಮಕ್ಕಳ ಸುಲಲಿತ ಹೆರಿಗೆ ಉದ್ದೇಶದಿಂದ ಸ್ಥಾಪಿಸಿರುವ ಈ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪ ಕೇಂದ್ರ ನಿಷ್ಪ್ರಯೋಜಕವಾಗಿರುವುದು ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಗ್ರಾಮದ ಬಾಣಂತಿಯರು, ವೃದ್ಧರು ಚಿಕಿತ್ಸೆ ಬೇಕಾದರೆ ಐದು ಕಿ.ಮೀ. ದೂರದ ಮೇವುಂಡಿ ಇಲ್ಲವೇ 13 ಕಿ.ಮೀ. ದೂರದ ಗುತ್ತಲಕ್ಕೆ ಹೋಗಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ.