ಬೆಳಗಾವಿ: ಅಗಸ್ಟ್ 15ರಂದು ನಡೆಯುವ 72ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿ ಹಬ್ಬದ ಮಾದರಿಯಲ್ಲಿ ಆಚರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಧ್ವಜ ಬಳಕೆಗೆ ಅವಕಾಶ ಮಾಡಿಕೊಡಬಾರದು ಎಂದು ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು. ಅಂದು ಬೆಳಗ್ಗೆ 9ಗಂಟೆಗೆ ಸಚಿವರು ಸಾರ್ವಜನಿಕ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
ಕಾರ್ಯಕ್ರಮ ಸಂದರ್ಭದಲ್ಲಿ ವೇದಿಕೆ ಸಿದ್ಧತೆ, ಗಣ್ಯರು ಹಾಗೂ ನಾಗರಿಕರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥ ಸಂಚಲನದಲ್ಲಿ ಭಾಗವಹಿಸುವವರಿಗೆ ಅಲ್ಪೋಪಾಹಾರ ವ್ಯವಸ್ಥೆ ಕಲ್ಪಿಸುವಂತೆ ಲೋಕೋಪಯೋಗಿ, ಮಹಾನಗರ ಪಾಲಿಕೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾತಂತ್ರ್ಯದ ಸವಿನೆನಪಿಗಾಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ, ನಿರ್ಗತಿಕ ಮಕ್ಕಳ ವಸತಿ ನಿಲಯಗಳಲ್ಲಿ ಹಣ್ಣು-ಹಂಪಲು, ಸಿಹಿ ವಿತರಣೆ ಮಾಡಲಾಗುವುದು. ಇದಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಬೆಳಗ್ಗೆ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದ ನಂತರ ಸಂಜೆ 6 ಗಂಟೆಗೆ ಕುಮಾರ ಗಂಧರ್ವ ಕಲಾಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಎಚ್.ಬಿ. ಬೂದೆಪ್ಪ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ| ಬಿ.ಎಸ್. ಲೋಕೇಶ್ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ ಚಂದರಗಿ, ಮಲ್ಲೇಶಿ ಚೌಗುಲೆ, ಯಲ್ಲಪ್ಪ ಹುದಲಿ, ಶ್ರೀನಿವಾಸ್ ತಾಳೂರಕರ, ಮಲ್ಲೇಶಪ್ಪ ಚೌಗುಲೆ, ಪುಷ್ಪಾ ಹುಬ್ಬಳ್ಳಿ, ಶೀಲಾ ದೇಶಪಾಂಡೆ, ವಿಕಾಸ ಕಲಘಟಗಿ, ವಿ.ಎಚ್.ಲೇಂಗಡೆ, ರಾಮಚಂದ್ರ ಡವಳಿ ಇದ್ದರು.