ರೋಣ: ಬಯಲು ಶೌಚದ ದುರ್ವಾಸನೆ, ಮುರಿದ ಕುರ್ಚಿಗಳು, ಕಿಟಕಿಗೆ ದನ-ಕರುಗಳನ್ನು ಕಟ್ಟುವ ಪರಿಸ್ಥಿತಿ, ಕೊಳೆಯುತ್ತ ಬಿದ್ದಿರುವ ಪುಸ್ತಕಗಳು, ಪಕ್ಕದಲ್ಲಿ ಬಿದ್ದ ಸಾರಾಯಿ ಬಾಟಲಿ ಡಬ್ಬಿಗಳು.. ಇದು ಬದಾಮಿ ಬನಶಂಕರಿ ದೇವಿ ತವರೂರಾದ ಮಾಡಲಗೇರಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ದುಸ್ಥಿತಿ.
ಗ್ರಂಥಾಲಯ ಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ಓದಲು ಪ್ರಶಾಂತವಾದ ವಾತಾವರಣವಿಲ್ಲ. ಇದರಿಂದ ಓದುಗರು ತುಂಬ ಕಿರಿಕಿರಿ ಅನುಭವಿಸುತ್ತಿದ್ದಾರೆ. 2006ರಲ್ಲಿ ಅಂದಿನ ರಾಜ್ಯಸಭಾ ಸದಸ್ಯ ವಿಜಯ ಮಲ್ಯ ವಿಶೇಷ ಕಾಳಜಿ ವಹಿಸಿ ಮಾಡಲಗೇರಿ ಗ್ರಾಮದ ಗ್ರಂಥಾಲಯಕ್ಕೆ 2 ಲಕ್ಷ ರೂ. ಹಣ ಖರ್ಚು ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಅಲ್ಲಿ ಓದುಗರಿಗೆ ಪ್ರಶಾಂತ ವಾತಾವರಣವಿಲ್ಲದಿರುವುದು ನೋವಿನ ಸಂಗತಿ.
ಪುಸ್ತಕಗಳಿಗಿಲ್ಲ ಕಿಮ್ಮತ್ತು : ಗ್ರಂಥಾಲಯದಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದ ಮಂಜೂರಾಗಿ ಬಂದ ಪುಸ್ತಕಗಳು ಕೊಳೆತು (ಗೊರಲಿ ಹತ್ತಿವೆ) ಹೋಗಿವೆ. ಪುಸ್ತಕವಿರುವ ಕೊಠಡಿ ಬಾಗಿಲು ಒಮ್ಮೆಯೂ ತೆರೆದಿಲ್ಲ ಎನ್ನುತ್ತಾರೆ ಗ್ರಾಮದ ಯುವಕರು. ಈ ವಾಚನಾಲಯಕ್ಕೆ ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳು ಒಂದು ಬರುತ್ತಿಲ್ಲ. ದಿನ ಪತ್ರಿಕೆಗಳ ಬಿಲ್‌ನ್ನು ಸಹ ಪಾವತಿಸುವುದಿಲ್ಲವಂತೆ. ಇಷ್ಟಾದರೂ ಕೆಲವು ಬುದ್ಧಿ ಜೀವಿಗಳು ತಮಗೆ ಬೇಕಾದ ಮೂರ್‍ನಾಲ್ಕು ದಿನ ಪತ್ರಿಕೆಗಳನ್ನು ತಾವೇ ಹಣ ಕೊಟ್ಟು ಗ್ರಂಥಾಲಯಕ್ಕೆ ಬರುವ ಓದುಗರಿಗೆ ಅನುಕೂಲ ಮಾಡಿದ್ದಾರೆ.
ಪಕ್ಕದಲ್ಲಿಯೇ ಅಕ್ರಮ ಸಾರಾಯಿ : ಗ್ರಾಮದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುವುದು ಒಂದೆಡೆಯಾದರೆ ಗ್ರಂಥಾಲಯ ಪಕ್ಕದಲ್ಲಿಯೇ ಅಕ್ರಮ ಸಾರಾಯಿ ಮಾರುವುದು ಕಂಡುಬರುತ್ತಿದೆ. ಬೆಳಗ್ಗೆ ಗ್ರಂಥಾಲಯದೊಂದಿಗೆ ಇಲ್ಲಿನ ಅಕ್ರಮ ಸಾರಾಯಿ ಮಾರಾಟವೂ ಪ್ರಾರಂಭವಾಗುತ್ತದೆ. ಇದರಿಂದ ಓದಲು ಬರುವ ಯುವಕರಿಗೆ ಈ ದೃಶ್ಯ ಬೆಳ್ಳಂ ಬೆಳಗ್ಗೆ ಎದುರಾಗುತ್ತಿರುವುದು ದುರಂತ. ಜೊತೆಗೆ ಇಲ್ಲಿಯೇ ತಿಪ್ಪೆಗಳನ್ನು ಹಾಕಿದ್ದರಿಂದ ದುರ್ವಾಸನೆ ಓದುಗರಿಗೆ ತುಂಬ ತೊಂದರೆಯಾಗುತ್ತಿದೆ ಎನ್ನುತ್ತಾರೆ ಓದುಗರು. ಗ್ರಂಥಾಲಯ ಕಿಟಕಿಗೆ ಜಾನುವಾರುಗಳನ್ನು ಕಟ್ಟುವುದು ಸರ್ವೇ ಸಾಮಾನ್ಯವಾಗಿದೆ. ಮಾಡಲಗೇರಿ ಗ್ರಾಮೀಣ ಪ್ರದೇಶ ಜೊತೆಗೆ ಕೃಷಿಯೇ ಪ್ರಧಾನ ಉದ್ಯೋಗ. ಹೀಗಾಗಿ ಎತ್ತು, ಎಮ್ಮೆ ಸೇರಿದಂತೆ ಸಾಕು ಪ್ರಾಣಿಗಳಿರುವುದು ಸಹಜ. ಗ್ರಂಥಾಲಯ ಹತ್ತಿರದ ರೈತರು ಜಾನುವಾರುಗಳನ್ನು ಕಿಟಕಿಗಳಿಗೆ ಕಟ್ಟುತ್ತಿದ್ದು ಹಾಳು ಕೊಂಪೆ ಎನಿಸಿದೆ. ಇಲ್ಲಿ ಮೇಲ್ವಿಚಾರಕರು ಸರಿಯಾಗಿ ಬಂದು ಕೆಲಸ ಮಾಡಿದರೆ ಮಾತ್ರ ರೈತರಿಗೆ ತಿಳಿ ಹೇಳಲು ಸಾಧ್ಯ ಎನ್ನುತ್ತಾರೆ ಓದುಗರು
ಸಾಯಂಕಾಲ ಬಂದ್ : ಬೆಳಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಕಾರ್ಯನಿರ್ವಹಿಸಬೇಕು. ನಂತರ ಸಾಯಂಕಾಲ 4 ರಿಂದ 6 ರ ಗಂಟೆಯವರೆಗೆ ಬಾಗಿಲು ತೆರೆಯಬೇಕು. ಆದರೆ ಇಲ್ಲಿನ ಗ್ರಂಥಪಾಲಕ ಒಮ್ಮೆಯೂ ಸಾಯಂಕಾಲ ಗ್ರಂಥಾಲಯದ ಬಾಗಿಲು ತೆರೆದಿಲ್ಲ. ಇದರ ಮೇಲುಸ್ತುವರಿ ಮಾಡುವ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದಿರುವುದು ವಿಪರ್ಯಾಸ.
ಮೇಲ್ವಿಚಾರಕರು ಎರಡೇ ದಿನ ಪತ್ರಿಕೆಗಳನ್ನು ತರಿಸುತ್ತಾರೆ. ಇಲಾಖೆ ಇನ್ನಷ್ಟು ಅನುದಾನ ನೀಡಿ, ಇನ್ನೊಂದು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆ ಕಳುಹಿಸಿದರೆ ಓದುಗರು, ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
-ಕುಮಾರ ಅಸೂಟಿ, ಯುವಕ
-ಯಚ್ಚರಗೌಡ ಗೋವಿಂದಗೌಡ್ರ