ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂಬ ಬಿಜೆಪಿ ಸಂಸದ ಮನೋಜ್ ತಿವಾರಿಯ ಮನವಿಯನ್ನು ಸುಪ್ರೀಂಕೋರ್ಟ್ ಗುರುವಾರ (ಅಕ್ಟೋಬರ್ 20) ತಿರಸ್ಕರಿಸಿದೆ.
ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ
“ಜನರು ಮೊದಲು ಶುದ್ಧ ಗಾಳಿಯಿಂದ ಉಸಿರಾಡುವಂತಾಗಲಿ, ನಿಮ್ಮ ಹಣವನ್ನು ಪಟಾಕಿ ಬದಲು ಸಿಹಿತಿಂಡಿಗಳಿಗೆ ಉಪಯೋಗಿಸಿ” ಎಂದು ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಸಲಹೆ ನೀಡಿದೆ.
ರಾಜಧಾನಿಯಲ್ಲಿ ಪಟಾಕಿ ಮೇಲಿನ ನಿಷೇಧವನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ ಎಲ್ಲಾ ಮಾದರಿಯ ಪಟಾಕಿಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ(ಡಿಪಿಸಿಸಿ)ಯ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.
ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಕೊನೆಯ ಹೊತ್ತಿನಲ್ಲಿ ಪಟಾಕಿ ಮಾರಾಟ ನಿಷೇಧಿಸಿರುವುದು ಕಾನೂನು ಬಾಹಿರವಾಗಿದೆ. ಇದರಿಂದ ಪಟಾಕಿ ಮಾರಾಟಗಾರರ ಬದುಕಿಗೆ ಹೊಡೆತ ಬೀಳಲಿದೆ ಎಂದು ಅರ್ಜಿದಾರರು ಸುಪ್ರೀಂನಲ್ಲಿ ವಾದಿಸಿರುವುದಾಗಿ ವರದಿ ತಿಳಿಸಿದೆ.