ಬೆಂಗಳೂರು: ಕೋವಿಡ್ 19 ಸೋಂಕು ದಿನದಿದಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ತಂತ್ರಜ್ಞಾನಾಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಂಗಳವಾರ ಶೈಕ್ಷಣಿಕ ವಲಯದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಅವರು, ಈ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಅವಸರದಲ್ಲಿ ಶಾಲೆ ತೆರೆಯುವುದಿಲ್ಲವಾದರೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲ ಆಯಾಮಗಳಿಂದಲೂ ಪ್ರಯತ್ನ ಮಾಡಲಾಗುತ್ತದೆ ಎಂದರು.
ವಿವಿಧ ಸರ್ಕಾರೇತರ 36ಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ ವೆಬಿನಾರ್ ನಲ್ಲಿ ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಮಕ್ಕಳ ಕಲಿಕೆಯ ನಿರಂತರತೆಗೆ ಮಾಡಬಹುದಾದ ಮತ್ತು ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಾವು ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಆಲಿಸಿದ ಸಚಿವರು ಇಂತಹ ಪರಿಸ್ಥಿತಿ ಇದೇ ಮೊದಲ ಬಾರಿ ಬಂದೆರಗಿರುವುದರಿಂದ ಆ ನಿಟ್ಟಿನಲ್ಲಿ ಮಕ್ಕಳನ್ನು ತಲುಪಲು ಸಾಧ್ಯವಾಗಬಹುದಾದ ಎಲ್ಲ ಪ್ರಯತ್ನಗಳನ್ನು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದರು.
ವಠಾರ ಶಾಲೆ, ಪಡಸಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಲಭ್ಯವಾಗಬಹುದಾದ ಎಲ್ಲ ಅವಕಾಶವನ್ನೂ ಮುಕ್ತವಾಗಿರಿಸಿಕೊಂಡು ಶಿಕ್ಷಣ ಇಲಾಖೆ ಎಲ್ಲ ಉಪಕ್ರಮಗಳತ್ತಲೂ ಮಕ್ಕಳ ಹಿತದೃಷ್ಟಿಯಿಂದ ಯೋಚಿಸುತ್ತಿದೆ ಎಂದರು.
ಅಜೀಂ ಪ್ರೇಮ್‍ಜಿ ಪ್ರತಿಷ್ಠಾನ, ಗ್ರಾಮ್ಸ್ , ಅಕ್ಷರ ಫೌಂಡೇಷನ್, ಯೂನಿಸೆಫ್, ಶಿಕ್ಷಣ, ಸಿಇಇ (ವಾಷ್ ಪ್ರೋಗ್ರಾಂ), ಪೋರ್ತ್ ಫೌಂಡೇಷನ್, ಪ್ರಥಮ್, ಪ್ರಜಾಯತ್ನ, ಅಗಸ್ತ್ಯ ಫೌಂಡೇಷನ್, ಲೆಂಡ್ ಎ ಹ್ಯಾಂಡ್ ಇಂಡಿಯಾ, ವೈಟ್‍ಫೀಲ್ಡ್ ರೆಡಿ ಸಮೃದ್ಧಿ ಟ್ರಸ್ಟ್, ಇಂಡಿಯನ್ ಲಿಟ್ರೆಸಿ ಪ್ರಾಜೆಕ್ಟ್, ಬಿಜಿವಿಎಸ್, ಎಸ್‍ಟಿಐಆರ್, ಏಕ್ ಸ್ಟೆಪ್-ದೀಕ್ಷಾ, ರೂಂ ಟು ರೀಡ್ ಇಂಡಿಯಾ ಟ್ರಸ್ಟ್, ಗ್ರಾಮ್, ಐ.ಎಲ್.ಪಿ. ಸೇರಿದಂತೆ ಹಲವಾರು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಂವಾದದಲ್ಲಿ ಭಾಗವಹಿಸಿದ ಎಲ್ಲ ಸಂಸ್ಥೆಗಳ ಹಿತದೃಷ್ಟಿಯೂ ನಮ್ಮ ಮಕ್ಕಳೇ ಪ್ರಮುಖವಾಗಿದ್ದರಿಂದ ಅವರನ್ನು ಈ ಪರಿಸ್ಥಿತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲ ರೀತಿಯ ಸಾಧ್ಯತೆಗಳನ್ನು ಕ್ರೋಢೀಕರಿಸಿಕೊಂಡು ಅವಕಾಶವಾಗುವ ಯಾವುದೇ ಸೌಲಭ್ಯದ ಮೂಲಕವಾಗಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.