Advertisement

ಅಸಮಾಧಾನ ಬಹಿರಂಗ ಚರ್ಚೆ ಬೇಡ: ಶೆಟ್ಟರ್‌

09:24 PM Jun 01, 2020 | Sriram |

ಹುಬ್ಬಳ್ಳಿ: ಪಕ್ಷದೊಳಗಿನ ಭಿನ್ನಾಭಿಪ್ರಾಯ, ಆಂತರಿಕ ವಿಚಾರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಬೇಕೆ ವಿನಃ ಬಹಿರಂಗಕ್ಕೆ ಬರುವುದು ಸರಿಯಲ್ಲ. ಕೋವಿಡ್-19ದಂತಹ ಸಂಕಷ್ಟ ಸ್ಥಿತಿಯಲ್ಲಿ ಭಿನ್ನಮತಕ್ಕೆ ಅವಕಾಶ ನೀಡುವುದು ಬೇಡ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಕೆಲವೊಂದು ವಿಚಾರಗಳಲ್ಲಿ ಅಸಮಾಧಾನವೂ ಇರುತ್ತದೆ. ಆದರೆ ಇಂತಹ ವಿಷಯಗಳನ್ನು ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಬೇಕು. ಶಾಸಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ಮಂಡಿಸಲು ಶಾಸಕಾಂಗ ಪಕ್ಷ ಇರುತ್ತದೆ. ಅಲ್ಲಿ ಪ್ರಸ್ತಾಪಿಸಲಿ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಆಂತರಿಕ ವಿಚಾರಗಳ ಬಹಿರಂಗ ಹೇಳಿಕೆಗಳಿಗೆ ಅವಕಾಶ ನೀಡುವುದು ಬೇಡ ಎಂದರು.

ಸರ್ಕಾರ ಗಟ್ಟಿಮುಟ್ಟಾಗಿದೆ. ವದಂತಿಗಳಿಗೆ ಅವಕಾಶ ಬೇಡ. ಅಸಮಾಧಾನಗೊಂಡ ಶಾಸಕರೊಂದಿಗೆ ಪಕ್ಷದ ವರಿಷ್ಠರು ಮಾತನಾಡಲಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅವುಗಳನ್ನು ಸರಿಪಡಿಸಲಿದ್ದಾರೆ. ಕೋವಿಡ್-19 ಸಂಕಷ್ಟದಲ್ಲಿ ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅನಗತ್ಯ ವಿವಾದಗಳಿಗೆ ಅವಕಾಶ ನೀಡುವ ಕೆಲಸ ಮಾಡುವುದು ಬೇಡ ಎಂದರು.

ಒಂದು ವೇಳೆ ನಾಯಕತ್ವ ಬದಲಾವಣೆ ಸ್ಥಿತಿ ನಿರ್ಮಾಣವಾದರೆ ಆಗ ತಮ್ಮ ಹೆಸರು ಕೇಳಿಬರುತ್ತಿದೆಯಲ್ಲಾ ಎಂಬುದಕ್ಕೆ ಪ್ರತಿಕ್ರಿಯಿಸಿ, ನನ್ನ ಹೆಸರು ಯಾರು ಹೇಳಿದ್ದಾರೆ. ನಿಮಗೆ ಯಾರಾದರೂ ತಿಳಿಸಿದ್ದಾರೆಯೇ ಅಥವಾ ನೀವೇ ಊಹೆ ಮಾಡಿಕೊಳ್ಳುತ್ತಿದ್ದೀರೋ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next