Advertisement
ಜೆಡಿಎಸ್ ಒಡೆದ ಮನೆಯಾಗಿ ಮಾರ್ಪಾಡುವಂತ ವಾತಾ ವರಣ ನಿರ್ಮಾಣವಾಗುತ್ತಿದೆ. ದಳಪತಿಗಳ ನಿರ್ಲಕ್ಷ್ಯ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಹಾಗೂ ಭಿನ್ನಾಭಿಪ್ರಾಯಗಳು ಪಕ್ಷದಲ್ಲಿ ಭುಗಿಲೆದ್ದಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಮುಖಂಡರು ಬಂಡಾಯವೆದ್ದಿದ್ದರೆ, ಕೆಲವು ನಾಯಕರು ಪಕ್ಷವನ್ನೇ ತೊರೆದು ಬೇರೆ ಪಕ್ಷ ಸೇರ್ಪಡೆಯಾಗಿದ್ದಾರೆ.
Related Articles
Advertisement
ಏಕಾಂಗಿಯಾದರೇ ಶಾಸಕ ಸುರೇಶ್‌ಗೌಡ: ವಿಭಿನ್ನ ರಾಜಕೀಯಕ್ಕೆ ಹೆಸರುವಾಸಿಯಾಗಿರುವ ನಾಗ ಮಂಗಲ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌ಗೆ ಬಂಡಾಯ ತಟ್ಟಿದೆ. ಇದರಿಂದ ಶಾಸಕ ಕೆ.ಸುರೇಶ್ ಗೌಡ ಏಕಾಂಗಿಯಾಗುವಂತೆ ಮಾಡಿದೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪಕ್ಷದಿಂದ ಉಚ್ಛಾಟನೆಗೊಂಡ ನಂತರ ದಳಪತಿಗಳು ಹಾಗೂ ಸುರೇಶ್‌ಗೌಡ ವಿರುದ್ಧ ಕಿಡಿಕಾರುತ್ತಿದ್ದಾರೆ. ಅತ್ತ ಮನ್‌ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪರ ನಿಂತಿದ್ದಾರೆ. ಇತ್ತ ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ ಪಕ್ಷದಲ್ಲಿದ್ದರೂ ನಾಮಕಾವಸ್ಥೆಯಂತೆ ಹಾಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಲಕ್ಷ್ಮೀಅಶ್ವಿನ್‌ಗೌಡ ಈಗಾಗಲೇ ತೆನೆ ಇಳಿಸಿ ಕಮಲ ಮುಡಿದಿದ್ದಾರೆ. ಇದು ಪಕ್ಷದ ವರ್ಚಸ್ಸು ಕುಂದುವಂತೆ ಮಾಡಿದೆ.
ಬಂಡಾಯದ ಕಹಳೆ ಊದಿದ ತಗ್ಗಹಳ್ಳಿ ವೆಂಕಟೇಶ್: ಕೋಟೆ ನಾಡು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧ ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಬಂಡಾಯದ ಕಹಳೆ ಊದಿದಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಿಡಿಕಾರುತ್ತಿರುವ ಅವರು, ಜೆಡಿಎಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಸಭೆ, ಸಮಾರಂಭ, ಪ್ರಚಾರ ನಡೆಸುತ್ತಿರುವ ತಗ್ಗಹಳ್ಳಿ ವೆಂಕಟೇಶ್, ದಳಪತಿಗಳ ನಿದ್ದೆಗೆಡಿಸಿದ್ದಾರೆ.
ಕಮಲ ಹಿಡಿದ ಎಸ್.ಪಿ.ಸ್ವಾಮಿ: ಮದ್ದೂರು ವಿಧಾನಸಭಾ ಕ್ಷೇತ್ರದಲ್ಲೂ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಬಂಡಾಯವೆದ್ದು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ತನ್ನ ಪತ್ನಿ ನಾಗರತ್ನ ಸ್ವಾಮಿ ಅವರ ಜಿಪಂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನದಿಂದ ಶುರುವಾದ ದಳಪತಿಗಳ ವಿರುದ್ಧದ ಗಲಾಟೆ ಪಕ್ಷ ತೊರೆಯುವಂತೆ ಮಾಡಿತು. ಈಗ ಜೆಡಿಎಸ್ ವಿರುದ್ಧ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ.
ಕೈ ಸೇರ್ಪಡೆಗೆ ಸಜ್ಜಾದ ಮರಿತಿಬ್ಬೇಗೌಡ: ಮಳವಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ನಾಯಕರಾಗಿರುವ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಈಗಾಗಲೇ ಜೆಡಿಎಸ್ ಪಕ್ಷದಿಂದ ದೂರ ಉಳಿದಿದ್ದು, ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ. ಕಳೆದ ಎರಡು ವಿಧಾನ ಪರಿಷತ್ ಚುನಾವಣೆಗಳಲ್ಲೂ ಬಹಿರಂಗವಾ ಗಿಯೇ ಕಾಂಗ್ರೆಸ್ ಅಭ್ಯರ್ಥಿ ಪರವಾಗಿಯೇ ಚುನಾವಣೆ ಮಾಡಿದ್ದರು. ಹಲವು ಬಾರಿ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆಯೂ ಮಾತುಗಳನ್ನಾಡಿದ್ದಾರೆ.
ಟಿಕೆಟ್ ವಿಚಾರದಲ್ಲೇ ಹೆಚ್ಚು ಭಿನ್ನಾಭಿಪ್ರಾಯ : ಜೆಡಿಎಸ್‌ನಲ್ಲಿ ದಳಪತಿಗಳು ಕೊಟ್ಟ ಭರವಸೆಯಂತೆ ಟಿಕೆಟ್ ಸಿಗದಿರುವುದೇ ಪ್ರಮುಖ ಕಾರಣವಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲೂ ಕೀಲಾರ ರಾಧಾಕೃಷ್ಣ, ಡಾ.ಕೃಷ್ಣ ಹಾಗೂ ಅಶೋಕ್ ಜಯರಾಂ ಅವರು ಟಿಕೆಟ್ ಸಿಗುವ ಭರವಸೆ ಹುಸಿಯಾದ ಕಾರಣ ಪಕ್ಷ ತೊರೆದರು. ಶ್ರೀರಂಗಪಟ್ಟಣದಲ್ಲೂ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಭರವಸೆ ನೀಡಿ ಕೊಡಲಿಲ್ಲ ಎಂಬ ಕಾರಣಕ್ಕೆ ಬಂಡಾಯ ಸಾರಿದ್ದಾರೆ. ಕೆ.ಆರ್.ಪೇಟೆಯಲ್ಲೂ ಬಿ.ಎಲ್.ದೇವರಾಜು ಸಹ ಟಿಕೆಟ್ ಕಾರಣದಿಂದಲೇ ದಳಪತಿಗಳ ವಿರುದ್ಧ ಬಂಡಾಯವೆದ್ದಿದ್ದಾರೆ. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕಳೆದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಯಲ್ಲಿ ತಮ್ಮ ಶಿಷ್ಯ ಕೀಲಾರ ಜಯರಾಮು ಅವರಿಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣೆ ಮಾಡಿದರು. ನಾಗಮಂಗಲದ ಲಕ್ಷ್ಮೀಅಶ್ವಿನ್ ಗೌಡ ಕೂಡ ಟಿಕೆಟ್ ಸಿಗದ ಹಿನ್ನೆಲೆ ಪಕ್ಷ ತೊರೆದರು.
– ಎಚ್.ಶಿವರಾಜು