Advertisement

ತಲಾಖ್‌ ವಿಧೇಯಕ ರಾಜ್ಯಸಭೆಯಲ್ಲೇ ಬಾಕಿ

09:00 AM Jan 06, 2018 | Team Udayavani |

ಹೊಸದಿಲ್ಲಿ: ತ್ರಿವಳಿ ತಲಾಖ್‌ ಮಸೂದೆ ಬಗ್ಗೆ ನಡೆದ ತೀವ್ರ ಚರ್ಚೆಯ ಮಧ್ಯೆಯೇ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯ ಕಂಡಿದೆ. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರಿಂದ ಅನುಮೋದನೆ ಕಂಡ ಮಸೂದೆ, ರಾಜ್ಯಸಭೆಯಲ್ಲಿ ಪಾಸಾಗದೇ ಉಳಿಯಿತು. ಸಂಸದೀಯ ಸಮಿತಿಗೆ ಮಸೂದೆಯನ್ನು ಕಳುಹಿಸಿಕೊಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದವು. ಆದರೆ ಸುಪ್ರೀಂಕೋರ್ಟ್‌ ಈಗಾಗಲೇ ತ್ರಿವಳಿ ತಲಾಖ್‌ ನಿಷೇಧಿಸಿರುವುದರಿಂದ, ಮಸೂದೆ ಅನುಮೋದಿಸುವುದರ ಅಗತ್ಯವಿದೆ ಎಂದು ಸರಕಾರ ಹೇಳಿತಾದರೂ ವಿಪಕ್ಷಗಳು ಸಮ್ಮತಿಸಲಿಲ್ಲ. ಮಸೂದೆ ಇನ್ನು ಬಜೆಟ್‌ ಅಧಿವೇಶನದಲ್ಲಿ ಮಂಡನೆಯಾಗಲಿದೆ.

Advertisement

ಅತ್ಯಂತ ಕಡಿಮೆ ಅವಧಿಯ ಅಧಿವೇಶನಗಳಲ್ಲಿ ಒಂದಾದ ಇದು, ಕೇವಲ 13 ದಿನಗಳವರೆಗೆ ನಡೆದಿತ್ತು. ಸರಕಾರ ಈ ಅಧಿವೇಶನವನ್ನು ಫ‌ಲಪ್ರದ ಎಂದು ಕರೆದಿದ್ದು, ತ್ರಿವಳಿ ತಲಾಖ್‌ ವಿಷಯದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದೆ. ರಾಜ್ಯಸಭೆ ಸಭಾಪತಿಯಾಗಿ ವೆಂಕಯ್ಯ ನಾಯ್ಡು ಅಧಿಕಾರ ವಹಿಸಿಕೊಂಡ ಅನಂತರ ಮೊದಲ ಅಧಿವೇಶನ ಇದಾಗಿದ್ದು, ವಿಪಕ್ಷಗಳು ಕಲಾಪಕ್ಕೆ ಪದೇ ಪದೇ ಅಡ್ಡಿ ಮಾಡಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಈ ಬಾರಿಯ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಜನಹಿತಕಾರಿ ವಿಷಯಗಳ ಚರ್ಚೆ ಶೇ. 91.58ರಷ್ಟಾಗಿದ್ದರೆ, ರಾಜ್ಯಸಭೆಯಲ್ಲಿ ಇದು ಶೇ. 56.29 ಆಗಿದೆ. ಲೋಕಸಭೆಯಲ್ಲಿ 13 ಹಾಗೂ ರಾಜ್ಯಸಭೆಯಲ್ಲಿ 9 ಮಸೂದೆಗಳು ಅನುಮೋದನೆಗೊಂಡಿವೆ. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರಿಂದ ತ್ರಿವಳಿ ತಲಾಖ್‌ ಸೇರಿ ಇತರ ಮಸೂದೆಗಳು ಸರಾಗ ವಾಗಿ ಅನುಮೋದನೆಗೊಂಡವು. ಆದರೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಪ್ರಾಬಲ್ಯ ಹೊಂದಿರುವುದರಿಂದ, ವಾಗ್ವಾದದಿಂದಾಗಿ 34  ತಾಸುಗಳಷ್ಟು ಕಲಾಪ ನಷ್ಟವಾಗಿದೆ.

ಲೋಕಸಭೆಯಲ್ಲಿ 3500 ಪ್ರಶ್ನೆಗಳಿಗೆ ಲಿಖೀತ,  ಮೌಖೀಕ ಉತ್ತರ

424 ವಿಷಯಗಳನ್ನು ಪ್ರಸ್ತಾಪಿಸಿದ ಸಂಸದರು

Advertisement

41 ವರದಿಗಳನ್ನು ಸದನಕ್ಕೆ ಸಲ್ಲಿಸಿದ ಸ್ಥಾಯಿ ಸಮಿತಿ

98 ಖಾಸಗಿ ಮಸೂದೆ ಮಂಡನೆ

ರಾಜ್ಯಸಭೆಯಲ್ಲಿ
34 ಗಂಟೆಗಳ ಕಲಾಪ ವ್ಯರ್ಥ
125 ಪ್ರಶ್ನೆಗಳಿಗೆ ಉತ್ತರ
19 ಖಾಸಗಿ ಮಸೂದೆ ಮಂಡನೆ
41 ಗಂಟೆಗಳ ಕಾಲ ಕಲಾಪ

ಮೋದಿ-ಸಿಂಗ್‌ ಹಸ್ತಲಾಘವ
ಗುಜರಾತ್‌ ಚುನಾವಣಾ ಪ್ರಚಾರದ ವೇಳೆ ತೀವ್ರ ಮಾತಿನ ಚಕಮಕಿ ನಡೆಸಿದ್ದ ಮಾಜಿ ಹಾಗೂ ಹಾಲಿ ಪ್ರಧಾನಿಗಳು ಶುಕ್ರವಾರ ರಾಜ್ಯಸಭೆಯಲ್ಲಿ ಹಸ್ತಲಾಘವ ನಡೆಸಿದರು. ಅಧಿವೇಶನದ ಕೊನೆಯ ದಿನದಂದು ಹಾಜರಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಬಳಿ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಕೈ ಕುಲುಕಿದರು.  

3 ವರ್ಷ ನಿಷೇಧ
ಜನಪ್ರಿಯ ನಟರು, ಕ್ರೀಡಾಪಟುಗಳು ಪ್ರತಿನಿಧಿಸುವ ಜಾಹೀರಾತಿನಲ್ಲಿ ತಪ್ಪು ಮಾಹಿತಿ ನೀಡಿದರೆ, ಅವರಿಗೆ 50 ಲಕ್ಷ ರೂ. ದಂಡ ಹಾಗೂ 3 ವರ್ಷಗಳ ಕಾಲ ನಿಷೇಧ ಹೇರುವ ಅವಕಾಶ ಇರುವ ಹೊಸ ಗ್ರಾಹಕ ರಕ್ಷಣಾ ವಿಧೇಯಕವನ್ನು ಲೋಕಸಭೆ ಅಂಗೀಕರಿಸಿದೆ. ಹಿಂದಿನ ತಿದ್ದುಪಡಿಯ ಪ್ರಕಾರ, ತಪ್ಪು ಮಾಹಿತಿ ಇದ್ದಲ್ಲಿ ಜೈಲು ಶಿಕ್ಷೆಯ ಪ್ರಸ್ತಾಪವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next