Advertisement

ಮಂಗನಕಾಯಿಲೆಗೆ ಮದ್ದಿಲ್ಲ… ಎಂಡೋಸಲ್ಫಾನ್‌ ಸಂಕಷ್ಟ ನಿಂತಿಲ್ಲ…

01:14 PM Dec 13, 2022 | Team Udayavani |

ಹೊನ್ನಾವರ: ಕರಾವಳಿ ಮತ್ತು ಮಲೆನಾಡಿನ ಜನ ಹಲವು ದಶಕಗಳಿಂದ ಅನುಭವಿಸುತ್ತಿರುವ ಹಾಗೂ ದುಬಾರಿ ಬೆಲೆ ತೆರುತ್ತಿರುವ ಎಂಡೋಸಲ್ಫಾನ್‌ ಮತ್ತು ಮಂಗನಕಾಯಿಲೆಗಳಿಗೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಸರಕಾರಗಳು ಸಂಪೂರ್ಣ ಮುನ್ನೆಚ್ಚರಿಕೆ, ಮುತುವರ್ಜಿ ವಹಿಸಿದ್ದಲ್ಲಿ ಜನ ಇಷ್ಟೆಲ್ಲ ಸಂಕಷ್ಟ ಅನುಭವಿಸಬೇಕಾಗಿರಲಿಲ್ಲ.

Advertisement

ಜಗತ್ತಿನಲ್ಲಿ ಪ್ರಥಮಬಾರಿ ಮಂಗನಕಾಯಿಲೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕ್ಯಾಸನೂರಿನಲ್ಲಿ ಕಾಣಿಸಿಕೊಂಡಾಗ ಇದು ಹೊಸ ವೈರಸ್‌. ಕೂಡಲೇ ಈ ಪ್ರದೇಶದ ಎರಡು ಕಿ.ಮೀ. ಅರಣ್ಯವನ್ನು ಸುಟ್ಟು ಹಾಕಿದರೆ ವೈರಾಣು ನಾಶವಾಗುತ್ತದೆ. ಇಲ್ಲವಾದರೆ ಇದು ಚಿರಂಜೀವಿಯಾಗಿ ವಿವಿಧ ಪ್ರಾಣಿ ಪಕ್ಷಿಗಳ ಮುಖಾಂತರವಾಗಿ ಹಬ್ಬಿ ಶಾಶ್ವತ ತೊಂದರೆ ಕೊಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದರು.

ಆದರೆ ಅರಣ್ಯ ಇಲಾಖೆ ಮತ್ತು ಪರಿಸರವಾದಿಗಳು ಒಪ್ಪಲಿಲ್ಲ. ರೋಗ ನಿಧಾನವಾಗಿ ನೆರೆಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿಯೂ ವ್ಯಾಪಿಸಿ ಕೂತಿದೆ. ಸರ್ಕಾರದ ಕ್ರಮವೆಲ್ಲ ಅರೆಬರೆಯಾಯಿತು. ಶಿವಮೊಗ್ಗ, ಬೆಳ್ತಂಗಡಿ, ಹೊನ್ನಾವರಗಳಲ್ಲಿ ಆಸ್ಪತ್ರೆಗಳಾದವು.

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೆರವಿನಿಂದ ಕಾಯಿಲೆ ಬಂದಾಗ ಖಚಿತ ಔಷಧವಿಲ್ಲದೆ ಜನ ನರಳಿದರು, ಮೃತಪಟ್ಟರು. ರೋಗ ಸ್ವಲ್ಪ ಇಳಿಮುಖವಾದ ಮೇಲೆ ಸರ್ಕಾರದ ವೈದ್ಯರು ನಿಷ್ಕಾಳಜಿ ತೋರಿದರು. ಮತ್ತೆ ಮಂಗನ ಕಾಯಿಲೆ ಚಿಗುರಿ ಮೂರು ಜಿಲ್ಲೆಗಳನ್ನು ಕಾಡತೊಡಗಿತು. ನಂತರ ಇದಕ್ಕೆ ಲಸಿಕೆ ಬಂತು. ಜನ ಅನುಮಾನಿಸಿ ಲಸಿಕೆ ಪಡೆದುಕೊಂಡರು. ಸರ್ಕಾರದ ಬೇಜವಾªರಿಯಿಂದ ಲಸಿಕೆ ತಯಾರಿಕೆಗೆ ಬೇಕಾದ ಅಧಿಕೃತ ಮಾನ್ಯತೆ ಪಡೆಯದ ಕಾರಣ ಈ ವರ್ಷ ಲಸಿಕೆ ತಯಾರಿಕೆ ಯೇ ನಿಂತು ಹೋಗಿದೆ. ಮುಂದೇನು ಎಂಬ ಪ್ರಶ್ನೆಗೆ ಉತ್ತರಿಸುವವರಿಲ್ಲ.

ಎಷ್ಟೇ ಮುನ್ನೆಚರಿಕೆ ಕ್ರಮ ಕೈಗೊಂಡಿದ್ದರು, ಕಾಡಿನಲ್ಲೇ ವಾಸಿಸುವ ಜನರಿಗೆ ಮನೆಗೆ ಹೋಗಲೇಬೇಕಾದ್ದರಿಂದ ಮಂಗನ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಲಸಿಕೆ ತಯಾರಿಸಲು ಕನಿಷ್ಠ ನಾಲ್ಕು ತಿಂಗಳು ಬೇಕು. ಬೇಸಿಗೆಯಲ್ಲಿ ಮಾತ್ರ ಕಾಡುವ ಮಂಗನ ಕಾಯಿಲೆ ಮಳೆ ಬಿದ್ದೊಡನೆ ಕಡಿಮೆಯಾಗುತ್ತದೆ. ಸರ್ಕಾರ ಮಂಗನ ಕಾಯಿಲೆ ತಡೆಗೆ ಶಾಶ್ವತ ಲಸಿಕೆ ತಯಾರಿಸದಿದ್ದರೆ ಜನ ಜೀವ ಭಯದಲ್ಲೇ ಕಾಲ ಕಳೆಯುವುದು ತಪ್ಪುವುದೇ ಇಲ್ಲ.

Advertisement

ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಅಧಿಕಾರ ಕಳೆದುಕೊಂಡ ನಿರಾಶ್ರಿತ ರಾಜಕಾರಣಿಗಳಿಗೆ ಪುನರ್‌ ಅಧಿಕಾರ ಕುರ್ಚಿ ಕಲ್ಪಿಸಲು 32 ನಿಗಮಗಳನ್ನು ರಚಿಸಿದ್ದರು. ಇದರಲ್ಲಿ ಒಂದಾದ ಗೇರು ಅಭಿವೃದ್ಧಿ ನಿಗಮ ಗ್ರಾಮೀಣ ಜನರ ಮಧ್ಯೆ ಎಂಡೋಸಲ್ಫಾನ್‌ ಎಂಬ ಕೊಳ್ಳಿ ಇಟ್ಟಿತು. ಗೇರುಮರದ ಹೂವು ಕಾಯಿಕಚ್ಚಲು ಎಂಡೋಸಲ್ಫಾನ್‌ ಔಷಧವನ್ನು ಹೆಲಿಕಾಪ್ಟರ್‌ನಿಂದ ಸಿಂಪಡಿಸಿತು. ಇದರಿಂದ ವಿಷ ವರ್ತುಲ ಉಂಟಾಗಿ ಜನರ ಜೀವ ಹಿಂಡಿತು. ಇದರ ವಿರುದ್ಧ ಪತ್ರಿಕೆಗಳು ಹೋರಾಟ ನಡೆಸಿದವು. ಬಳಕೆದಾರ ವೇದಿಕೆ ಸರ್ವೋತ್ಛ ನ್ಯಾಯಾಲಯದ ಮೆಟ್ಟಿಲೇರಿ ಅಂಗವಿಕಲರಿಗೆ ಔಷಧ ಮತ್ತು ಪರಿಹಾರದ ವ್ಯವಸ್ಥೆ ಮಾಡಿತು.

ಮೊದಲ ಸುತ್ತಿನ ಎಂಡೋಸಲ್ಫಾನ್‌ ಪೀಡಿತರ ಸಮೀಕ್ಷೆಯನ್ನು ಅವಸರದಲ್ಲಿಯೇ ಮಾಡಿದರೂ ಪರಿಣಾಮ 4 ಸಾವಿರ ಜನ ಅಂಗವಿಕಲರೆಂದು ಗುರುತಿಸಲ್ಪಟ್ಟರು. ಉತ್ತರ ಕನ್ನಡದಲ್ಲೇ 1600 ಜನ ಗುರುತಿಸಲ್ಪಟ್ಟಿದ್ದಾರೆ.

ವಿವರವಾಗಿ ಸಮೀಕ್ಷೆ ನಡೆದರೆ ಇಷ್ಟೇ ಜನ ಮತ್ತೆ ಸಿಗುತ್ತಾರೆ. ಸಮೀಕ್ಷೆ ನಡೆದಿಲ್ಲ, ಶೇಕಡಾ 20 ಕ್ಕಿಂತ ಕಡಿಮೆ ಅಂಗವಿಕಲರಿಗೆ ಯಾವುದೇ ಪರಿಹಾರ ಸಿಗಲಿಲ್ಲ. ಸರ್ಕಾರ ಈಗ ಮಾಡಿದ ವ್ಯವಸ್ಥೆ ಸಮರ್ಪಕವಲ್ಲ. ಹಾಸಿಗೆಯ ಮೇಲೆ ಮಲಗಿರುವ ಪೀಡಿತರು ಸುಖದ ಸಾವು ಕಾಣಲು ಇನ್ನಷ್ಟು ನೆರವು ಬೇಕು. ಚುನಾವಣೆ ಹತ್ತಿರ ಬಂದಿದೆ.

ಕರಾವಳಿ ಮಲೆನಾಡಿನ ಶಾಸಕರು ಈ ಎರಡೂ ಕಾಯಿಲೆ ಪೀಡಿತರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಯಾರದೋ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವಂತಾಗಿದೆ. ಜನಗಳಿಗೆ ರಕ್ಷಣೆ ಕೊಡಬೇಕಾದದ್ದು ಸರ್ಕಾರದ ನೈತಿಕ ಹೊಣೆಯಾಗಿದ್ದು, ಇನ್ನಾದರೂ ಸರಕಾರ ಹೊಣೆಗಾರಿಕೆ ಅರಿತು ಜನರ ಜೀವ ಉಳಿಸಲು ಶ್ರಮಿಸಬೇಕಿದೆ.

ಬಯಸದೇ ಬಂದಿದ್ದಕ್ಕೆ ಬೆಲೆ ತೆತ್ತ ಜನ

ಮಂಗನ ಕಾಯಿಲೆಯಾಗಲಿ, ಎಂಡೋಸಲ್ಫಾನ್‌ ಪೀಡೆಯಾಗಲಿ ಜನ ಬಯಸಿ ಬಂದಿದ್ದಲ್ಲ, ಸರ್ಕಾರದ ನಿರ್ಲಕ್ಷ್ಯದಿಂದ ಜನ ಭಾರಿ ಬೆಲೆ ತೆರುತ್ತಿದ್ದಾರೆ. ಇದು ಕೇವಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಯ ಅರಣ್ಯ ಪ್ರದೇಶದ ಜನರ ಸಮಸ್ಯೆಯಾದ ಕಾರಣ ಸರ್ಕಾರ ಗಂಭೀರವಾಗಿ ಗಮನಿಸುತ್ತಿಲ್ಲ. ಈ ಕಾಯಿಲೆ ಪೀಡಿತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದೊಡ್ಡ ಸಹಾಯ ಮಾಡಿದೆ.

-ಜೀಯು

Advertisement

Udayavani is now on Telegram. Click here to join our channel and stay updated with the latest news.

Next