Advertisement

ಸಾರಿಗೆ ಅಧಿಕಾರಿಗಳಿಗಿಲ್ಲ ರಜೆ

12:55 AM Aug 10, 2019 | Team Udayavani |
ಬೆಂಗಳೂರು: ಪ್ರವಾಹಪೀಡಿತ ಪ್ರದೇಶಗಳಲ್ಲಿ ಆಯಾ ವಿಭಾಗ ಅಥವಾ ಘಟಕದ ಅಧಿಕಾರಿಗಳು ಕೇಂದ್ರ ಸ್ಥಳದಲ್ಲೇ ಮೊಕ್ಕಾಂ ಹೂಡಬೇಕು. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ರಜೆ ಮೇಲೆ ತೆರಳಕೂಡದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸ್ಪಷ್ಟ ಸೂಚನೆ ನೀಡಿದ್ದಾರೆ.

ನೆರೆ ಹಾವಳಿ ಹಿನ್ನೆಲೆಯಲ್ಲಿ ಬಸ್‌ಗಳ ಕಾರ್ಯಾಚರಣೆ ಕುರಿತ ಮಾಹಿತಿಗಾಗಿ ಶುಕ್ರವಾರ ಖುದ್ದು ನಿಗಮದ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಾರಾಂತ್ಯ ಮತ್ತು ದೀರ್ಘಾವಧಿ ರಜೆ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬಿಡಬೇಕು. ಅದರಲ್ಲೂ ಮುಖ್ಯವಾಗಿ ನೆರೆಪೀಡಿತ ಪ್ರದೇಶಗಳಲ್ಲಿ ವಿಭಾಗ ಅಥವಾ ಘಟಕ ಅಧಿಕಾರಿಗಳು ರಜೆ ಮೇಲೆ ಹೋಗ ಬಾರದು. ಸ್ಥಳದಲ್ಲೇ ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಭಾಯಿಸತಕ್ಕದ್ದು ಎಂದು ಆದೇಶಿಸಿದರು.

Advertisement

ಅಲ್ಲದೆ, ವಿಭಾಗಗಳ ಮಟ್ಟದಲ್ಲಿಯೂ ನಿಯಂತ್ರಣ ಕೊಠಡಿ ಸ್ಥಾಪಿಸಬೇಕು. ದಿನದ 24 ಗಂಟೆ ಅದು ಕಾರ್ಯ ನಿರ್ವಹಿಸಬೇಕು. ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿ, ಕಾರ್ಯಾಚರಣೆ ಮೇಲೆ ನಿಗಾ ವಹಿಸಬೇಕು. ಪ್ರತಿ ಮೂರು ಗಂಟೆ ಗಳಿಗೊಮ್ಮೆ ವಿಭಾಗದಿಂದ ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಬೇಕು. ಮಾರ್ಗದಲ್ಲಿನ ರಸ್ತೆ, ಮಳೆ, ಸೇತುವೆ, ನೀರಿನ ಹರಿವು ಮತ್ತಿತರ ಅಂಶಗಳ ಬಗ್ಗೆ ಕೂಲಂಕುಷ ಮಾಹಿತಿ ಕ್ರೋಢೀಕರಿ ಸಬೇಕು. ಯಾವುದೇ ಬಸ್‌ ಪ್ರವಾಹ ಅಥವಾ ಮಳೆಗೆ ಸಿಲುಕಿದರೆ, ತಕ್ಷಣ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆ ತರಲು ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿಸಿ, ತುರ್ತು ಕ್ರಮ ಕೈಗೊಳ್ಳಬೇಕು. ಪರಿಹಾರ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ವಾರಾಂತ್ಯ ಹೆಚ್ಚುವರಿ ಕಾರ್ಯಾಚರಣೆ ಅಥವಾ ಅನುಸೂಚಿಗಳು ರದ್ದಾದಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ಪ್ರಯಾಣ ದರದ ಹಿಂಪಾವತಿ ಮಾಡಬೇಕು ಎಂದು ಹೇಳಿದರು. ಸಾರ್ವಜನಿಕರು ಬಸ್‌ ಕಾರ್ಯಾಚರಣೆ/ ರದ್ಧತಿ, ಮಾರ್ಗ ಬದಲಾವಣೆ/ ಪರಿಹಾರ ಸಾಮಗ್ರಿಗಳ ಉಚಿತ ರವಾನೆ ಕುರಿತ ಮಾಹಿತಿಗೆ ಕೇಂದ್ರ ಕಚೇರಿಯ ನಿಯಂತ್ರಣಾ ಕೊಠಡಿಯ ಮೊಬೈಲ್ ಸಂಖ್ಯೆ: 77609 90100 ಸಂಪರ್ಕಿಸಬಹುದು.
Advertisement

Udayavani is now on Telegram. Click here to join our channel and stay updated with the latest news.

Next