ಗುಡಿಬಂಡೆ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಹ ಗುಡಿಬಂಡೆ ತಾಲೂಕು ಕೇಂದ್ರದಿಂದ ಎಲ್ಲೋಡು ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಒಂದೇ ಒಂದು ಸಾರಿಗೆ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲೋಡು ಗ್ರಾಪಂ ಕೇಂದ್ರ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿàಆದಿನಾರಾಯಣಸ್ವಾಮಿ ದೇವಾಲಯ ಮತ್ತು ಜೈವಿಕ ಪ್ರಾಕೃತಿಕ ಸಂಪತ್ತು, ಬೆಟ್ಟ ಹೊಂದಿದ್ದು, ಈ ಭಾಗಕ್ಕೆ ಪ್ರತಿ ಭಾನುವಾರು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಈ ಎಲ್ಲೋಡು ಗ್ರಾಮವು ಗುಡಿಬಂಡೆ ತಾಲೂಕಿಗೆ ಒಳಪಟ್ಟಿದ್ದರೂ ಈ ಗ್ರಾಮಕ್ಕೆ ಸಾರ್ವಜನಿಕರು ಹೋಗಬೇಕಾದರೆ ಗೌರಿಬಿದನೂರು, ಬಾಗೇಪಲ್ಲಿ ತಾಲೂಕುಗಳಿಂದ ಬಸ್‌ಗಳ ಮುಖಾಂತರವೇ ಹೋಗಬೇಕೆ ಹೊರತು, ಗುಡಿಬಂಡೆ ತಾಲೂಕು ಕೇಂದ್ರದಿಂದ ಹೋಗಲು ಒಂದು ಬಸ್ ಸಂಪರ್ಕ ಇಲ್ಲದೇ ಇರುವುದು ದುರಂತವೇ ಸರಿ.
ಶಿಕ್ಷಣಕ್ಕೂ ತೊಂದರೆ: ಎಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 10 ಕ್ಕೂ ಹೆಚ್ಚು ಹಳ್ಳಿಗಳು ಬರಲಿದ್ದು, ಈ ಹಳ್ಳಿಗಳಿಂದ ಮಕ್ಕಳು ಶಾಲಾ ಕಾಲೇಜಿಗೆ ಹೋಗ ಬೇಕಾದರೆ ಗುಡಿಬಂಡೆ ಪಟ್ಟಣದ ಶಾಲಾ ಕಾಲೇಜುಗಳಿಗೆ ಬರಲು ತೊಂದರೆಯಾಗಿ, ಬಾಗೇಪಲ್ಲಿ, ಗೌರೀಬಿದನೂರು ತಾಲೂಕುಗಳತ್ತ ಹೋಗುತ್ತಾರೆ. ಎರಡು ತಾಲೂಕುಗಳು ದೂರದ ಮಿತಿಯಲ್ಲಿರುವುದರಿಂದ ಬೆಳ್ಳಂ ಬೆಳಗ್ಗೆ ಎದ್ದು ಹೋಗಿ, ನಂತರ ಕತ್ತಲಲ್ಲಿ ಮನೆಗೆ ಸೇರಬೇಕಾಗಿದ್ದು, ಹತ್ತಿರದ ತಾಲೂಕು ಕೇಂದ್ರಕ್ಕೆ ಸಾರಿಗೆ ಸಂಪರ್ಕ ಇಲ್ಲದಿರುವುದರಿಂದ ಶಿಕ್ಷಣಕ್ಕೂ ಸಹ ತೊಂದರೆಯಾಗಿದೆ.
ವ್ಯಾಪಾರ ವಹಿವಾಟು ಬೇರೆಯತ್ತ: ಈ ಭಾಗದ ರೈತರು, ವ್ಯಾಪಾರಸ್ಥರು ಗುಡಿಬಂಡೆ ತಾಲೂಕು ಕೇಂದ್ರಕ್ಕೆ ಸರಿಯಾದ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಬೇರೆ ತಾಲೂಕುಗಳತ್ತ ಮುಖ ಮಾಡಿದ್ದು, ದೂರದ ಊರುಗಳಿಂದ ಸಾಮಗ್ರಿಗಳು ಖರೀದಿ ಮಾಡಿ ತಂದು ಮಾರಾಟ ಮಾಡಬೇಕಾಗಿದೆ. ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತಾದಿಗಳು ಬಂದರೂ ವ್ಯಾಪಾರ ವಹಿವಾಟುಗಳಲ್ಲಿ ಗಳಿಕೆ ಸಹ ಅಷ್ಟಕ್ಕಷ್ಟೇ ಆಗಿರುವುದರಿಂದ ಈ ಭಾಗದಲ್ಲಿ ವಾಣಿಜ್ಯ ಕ್ಷೇತ್ರವು ಸಹ ಅಭಿವೃದ್ಧಿಯಾಗದೇ ಕುಂಠಿತವಾಗಿದೆ. ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗುಡಿಬಂಡೆ ಯಿಂದ ಎಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಾರಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಾರೆಯೇ ಎಂಬುದರ ಬಗ್ಗೆ ಕಾದು ನೋಡಬೇಕಿದೆ.
ಸುತ್ತೂಡೆದು ಬರಬೇಕಾದ ದುಸ್ಥಿತಿ : ಎಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ತಾಲೂಕು ಕೇಂದ್ರದಲ್ಲಿನ ಸರ್ಕಾರಿ ಕಚೇರಿಯಲ್ಲಿನ ಕೆಲಸ ಕಾರ್ಯಗಳಿಗೆ ಬರಬೇಕಾದರೆ ಸಾರಿಗೆ ವ್ಯವಸ್ಥೆಯಿಲ್ಲದೇ, ಆಟೋ, ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳಲ್ಲಿ ಬರಬೇಕು. ಇವುಗಳು ಇಲ್ಲದವರು, ಬಾಗೇಪಲ್ಲಿ-ಗುಡಿಬಂಡೆ ಗಡಿ ಭಾಗದಲ್ಲಿರುವ ಕಡೇಹಳ್ಳಿ ಕ್ರಾಸ್‌ಗೆ ಬಂದು, ಬಾಗೇಪಲ್ಲಿಯಿಂದ ಗುಡಿಬಂಡೆಗೆ ಬರುವ ಬಸ್‌ಗಳಲ್ಲಿ ತಾಲೂಕು ಕೇಂದ್ರಕ್ಕೆ ಸುತ್ತು ಹೊಡೆದು ಬರಬೇಕಾದ ಪರಿಸ್ಥಿತಿ ಇದೆ.
ಎಲ್ಲೋಡು ಗ್ರಾಪಂ ಕೇಂದ್ರಕ್ಕೆ ಗ್ರಾಪಂ ವ್ಯಾಪಿಯ ಹಳ್ಳಿಗಳಿಗೆ ತಾಲೂಕು ಕೇಂದ್ರ ಗುಡಿಬಂಡೆಯಿಂದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ತಿಳಿದು ಬಂದಿದ್ದು, ಸಾರಿಗೆ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ●
ಹಿಮವರ್ಧನ ನಾಯ್ಡು, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಚಿಕ್ಕಬಳ್ಳಾಪುರ
ಎಲ್ಲೋಡು ಭಾಗಕ್ಕೆ ಸಾರಿಗೆ ಬಸ್ ಎಂಬುದು ಮರಿಚೀಕೆಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ, ಕೂಡಲೇ ಅಧಿಕಾರಿಗಳು ಈ ಭಾಗಕ್ಕೆ ತಾಲೂಕು ಕೇಂದ್ರದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕಿದೆ.
● ಹರೀಶ್, ಗ್ರಾಪಂ ಸದಸ್ಯ, ಎಲ್ಲೋಡು