ಸುರತ್ಕಲ್: ಎನ್ ಐಟಿಕೆ ಟೋಲ್ ಗೇಟ್ ನಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ವಿಧಿಸಬಾರದೆಂದು ಅಗ್ರಹಿಸಿ ವಿವಿಧ ಪಕ್ಷಗಳ ಮತ್ತು ನಾಗರಿಕ ಸಂಘಟನೆಗಳ ಮುಖಂಡರು ನೀಡಿದ ಮನವಿಯನ್ನು ಪುರಸ್ಕರಿಸಿರುವ ಜಿಲ್ಲಾಧಿಕಾರಿಗಳು, ಸುಂಕ ವಸೂಲಿ ಕ್ರಮಕ್ಕೆ ಮೂರು ದಿನಗಳ ಕಾಲ ತಾತ್ಕಾಲಿಕ ತಡೆ ನೀಡಿದ್ದಾರೆ.
ಈ ಕಾರಣ ಇಂದಿನಿಂದ ಸ್ಥಳೀಯ ವಾಹನಗಳಿಂದಲೂ ಒಂದು ಬಾರಿಗೆ 25 ರೂ. ನಂತೆ ವಸೂಲು ಮಾಡುವ ಕ್ರಮವನ್ನು ಗುತ್ತಿಗೆ ವಹಿಸಿಕೊಂಡ ಕಂಪೆನಿ ಕೈಬಿಟ್ಟಿದೆ.
ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿ ಎನ್ ಐಟಿಕೆ ಬಳಿಯ ಟೋಲ್ ಗೇಟ್ ನಲ್ಲಿ ಸ್ಥಳಿಯ ವಾಹನಗಳಿಗೂ (ಕೆಎ 19 ನೋಂದಣಿ) ಸುಂಕ ಸಂಗ್ರಹಿಸಿಸುವ ನಿರ್ಧಾರವನ್ನು ವಿರೋಧಿಸಿ ಟೋಲ್ ಗೇಟ್ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಜಿಲ್ಲಾಧಿಕಾರಿಗಳ ಆದೇಶದ ನಂತರವೂ ಮುಂದುವರಿದಿದೆ.
ಮಂಗಳವಾರ ಬೆಳಗ್ಗೆ 7.30ರಿಂದ ವಿವಿಧ ಸಂಘಟನೆಗಳು, ಪಕ್ಷಾತೀತ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸುಂಕ ವಿರೋಧಿ ಪ್ರತಿಭಟನೆಗೆ ನಾಗರಿಕರ ಬೆಂಬಲವೂ ವ್ಯಕ್ತವಾಗಿದ್ದು ಟೋಲ್ ಗೇಟ್ ಬಳಿ ಭಾರಿ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಬಳಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗಮಿಸಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಗೆ ದ.ಕ ಬಿಜೆಪಿ ಬೆಂಬಲ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತ ರು ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ವಿಜಯಕುಮಾರ್ ಶೆಟ್ಟಿ, ಮುನೀರ್ ಕಾಟಿಪಳ್ಳ, ರಮೇಶ್ ಟಿ ಎನ್, ಮಿಥುನ್ ರೈ ಶಾಲೆಟ್ ಪಿಂಟೋ, ಈಶ್ವರ್ ಕಟೀಲ್, ತಿಲಕ್ ರಾಜ್ ಕೃಷ್ಣಾಪುರ, ಅಶೋಕ್ ಕೃಷ್ಣಾಪುರ, ಗಣೇಶ್ ಹೊಸಬೆಟ್ಟು, ರಜನಿ ದುಗ್ಗಣ್ಣ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.